Site icon Vistara News

ಮತ್ತಷ್ಟು ಶಿಕ್ಷಕರು ಆಗಲಿದ್ದಾರ ಅರೆಸ್ಟ್? ಅಕ್ರಮದಿಂದ ನೇಮಕವಾದವರು 16 ಅಲ್ಲ 40 ಎಂದ ಶಿಕ್ಷಣ ಸಚಿವ

BC Nagesh

ವಿಧಾನಸಭೆ: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಶಿಕ್ಷಕರ ನೇಮಕಾತಿಯಲ್ಲಿ, ಅಕ್ರಮವಾಗಿ ನೇಮಕವಾದವರ ಸಂಖ್ಯೆ ಈಗ ತಿಳಿದಿರುವುದಕ್ಕಿಂತಲೂ ಹೆಚ್ಚಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಶಿಕ್ಷಕರ ನೇಮಕಾತಿಯಲ್ಲಿ ನಡೆದಿರುವ ಹಗರಣದ ಕುರಿತು ಸೂಕ್ತ ತನಿಖೆ ನಡೆಸಿ, ಯುವಕರಿಗೆ ಸ್ಪಷ್ಟ ಸಂದೇಶ ನೀಡಬೇಕು ಎಂದು ಕುಡಚಿ ಶಾಸಕ ಪಿ. ರಾಜೀವ್‌ ಪ್ರಶ್ನೆಗೆ ಉತ್ತರಿಸಿದರು.

ಈ ಪ್ರಕರಣದಲ್ಲಿ ಪರೀಕ್ಷೆಯನ್ನೇ ಬರೆಯದೇ ಅನೇಕರು ನೇಮಕವಾಗಿದ್ದಾರೆ. ನೇಮಕಾತಿಗಳಲ್ಲಿ ಅಕ್ರಮವಿಲ್ಲ, ಪಾರದರ್ಶಕವಾಗಿದೆ ಎಂಬ ಸಂದೇಶವನ್ನು ಯುವಕರಿಗೆ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ದೃಢ ನಿರ್ಧಾರ ಮಾಡಬೇಕು ಎಂದು ರಾಜೀವ್‌ ಕೇಳಿದರು.

ಇದಕ್ಕೆ ಉತ್ತರಿಸಿದ ನಾಗೇಶ್‌, ಇದು ಇಡೀ ಸಮಾಜಕ್ಕೆ ಅವಮಾನ ಆಗುವ ರೀತಿಯಲ್ಲಿ ನಡೆದ ಘಟನೆ. 2014-15ರಲ್ಲಿ ಒಂದು ನೇಮಕಾತಿ ಅಧಿಸೂಚನೆ ಹೊರಡಿಸಲಾಯಿತು, ಅದರ ಪ್ರಕ್ರಿಯೆ ನಡೆದಿರುವಾಗಲೆ 2015-16ರಲ್ಲಿ ಮತ್ತೊಂದು ನೇಮಕಾತಿ ನಡೆಯಿತು. ಪರೀಕ್ಷೆಯನ್ನೇ ಬರೆಯದವರು, ಅರ್ಜಿಯನ್ನೇ ಸಲ್ಲಿಸದವರು, ಅರ್ಹತೆಯೇ ಇಲ್ಲದವರು ನೇಮಕವಾಗಿದ್ದಾರೆ ಎಂದು ಪತ್ರಿಕೆಗಳಲ್ಲಿ ಪ್ರಕಟವಾಯಿತು.

ಈ ಕುರಿತು ಬೆಂಗಳೂರಿನ ಒಂದೆರಡು ವಲಯಗಳಲ್ಲಿ ಪರಿಶೀಲನೆ ನಡೆಸಿದಾಗ, ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಗೊತ್ತಾಯಿತು. ನಂತರ ಮತ್ತಷ್ಟು ಪರಿಶೀಲನೆ ನಡೆಸಿದಾಗ 16 ಜನರು ಈ ರೀತಿ ನೇಮಕ ಆಗಿರುವುದು ಗೊತ್ತಾಯಿತು. ಹಗರಣವನ್ನು ತನಿಖೆ ನಡೆಸುವ ಹೊಣೆಯನ್ನು ಸಿಐಡಿಗೆ ನೀಡಲಾಗಿದೆ.

ಈಗಾಗಲೆ ಸಿಐಡಿಯವರು 16 ಶಿಕ್ಷಕರನ್ನು ಬಂಧಿಸಿದ್ದಾರೆ. ಈದೀಗ ತನಿಖೆ ವೇಳೆಯಲ್ಲಿ, 35-40 ಜನರು ನೇಮಕವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಬೆಂಗಳೂರು ಮಾತ್ರವಲ್ಲದೆ ರಾಜ್ಯಾದ್ಯಂತ ನೇಮಕಾತಿಯನ್ನು ತನಿಖೆ ನಡೆಸಬೇಕು ಎಂದು ತಿಳಿಸಲಾಗಿದೆ ಎಂದರು

ಇದೊಂದು ದೊಡ್ಡ ಅಕ್ರಮವಾಗಿದ್ದು, ಚರ್ಚೆಗೆ ಅವಕಾಶ ನೀಡಬೇಕು ಎಂದು ಕೆಲ ಸದಸ್ಯರು ಆಗ್ರಹಿಸಿದರು. ಕಾಂಗ್ರೆಸ್‌ನ ಯು.ಟಿ. ಖಾದರ್‌ ಎದ್ದುನಿಂತು, ಐದು ವರ್ಷ ಏನೂ ಮಾಡದಿದ್ದವರು ಈಗೇಕೆ ಮಾಡುತ್ತಿದ್ದಾರೆ? ಇವರದ್ದು ದುರುದ್ದೇಶ ಎಂದರು.

ಸರ್ಕಾರದ ಗಮನಕ್ಕೆ ಬಂದಾಗ ಕ್ರಮ ಕೈಗೊಂಡಿದ್ದೇವೆ ಎಂದು ಕಾನೂನು ಸಚಿವ ಜಿ.ಸಿ. ಮಾಧುಸ್ವಾಮಿ ತಿಳಿಸಿದರು. ಈಗಾಗಲೆ ಸಿಐಡಿಗೆ ವಹಿಸಿರುವುದರಿಂದ ಇಲ್ಲಿ ಚರ್ಚಿಸಬೇಕಾಗಿಲ್ಲ ಎಂದ ಸ್ಪೀಕರ್‌ ಕಾಗೇರಿಯವರು ಮುಂದಿನ ವಿಚಾರದತ್ತ ಗಮನಹರಿಸಿದರು.

ಈಗಾಗಲೆ ಹಗರಣದ ತನಿಖೆ ನಡೆಯುತ್ತಿದ್ದು, ತುಮಕೂರು ಸೇರಿ 16 ಜನರನ್ನು ಬಂಧಿಸಲಾಗಿದೆ. ಇದೀಗ ಸಚಿವರು 35-40 ಜನರ ಮಾಹಿತಿಯಿದೆ ಎಂದಿರುವುದು ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಈ ವಿಚಾರ ರಾಜಕೀಯ ವಾಗ್ವಾದಕ್ಕೂ ಕಾರಣವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ | ಶಿಕ್ಷಕರ ನೇಮಕಾತಿ ಅಕ್ರಮ, ತುಮಕೂರಿನಲ್ಲಿ 10 ಶಿಕ್ಷಕರನ್ನು ವಶಕ್ಕೆ ಪಡೆದು ಸಿಐಡಿ ತನಿಖೆ

Exit mobile version