ಬೆಂಗಳೂರು: 2019ರ ಲೋಕಸಭಾ ಚುನಾವಣೆಯ (Parliament Election) ಸಂದರ್ಭದಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಸೇರಿದ್ದ ಮಾಜಿ ಸಂಸದ ಮುದ್ದ ಹನುಮೇಗೌಡ (Mudda Hanumegowda) ಅವರು 2024ರ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮರಳಿ ಕಾಂಗ್ರೆಸ್ (Congress Party) ಸೇರಿದ್ದಾರೆ. ಬೆಂಗಳೂರಿನ ಕೆಪಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರಿಂದ ಧ್ವಜ ಸ್ವೀಕರಿಸಿ ಪಕ್ಷ ಸೇರಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು. ಆದರೆ, ಮುದ್ದ ಹನುಮೇ ಗೌಡರ ಸೇರ್ಪಡೆಗೆ ವಿರೋಧವಿದ್ದ ತುಮಕೂರಿನ ಹಲವು ನಾಯಕರು ಗೈರುಹಾಜರಾಗಿದ್ದರು.
ಯಾರೆಲ್ಲ ಭಾಗವಹಿಸಿದ್ದರು?
ಸಿಎಂ ಸಿದ್ದರಾಮಯ್ಯ, ಸಚಿವರಾದ ಡಾ.ಜಿ ಪರಮೇಶ್ವರ್, ಕೆ.ಎನ್ ರಾಜಣ್ಣ, ಶಾಸಕ ಗುಬ್ಬಿ ಶ್ರೀನಿವಾಸ್, ಕುಣಿಗಲ್ ಶಾಸಕ ರಂಗನಾಥ್, ಕೆವೈ ನಂಜೇಗೌಡ, ಮಾಜಿ ಶಾಸಕ ವೆಂಕಟರಮಣಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಬಿ.ಎನ್ ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಯಾರು ಭಾಗವಹಿಸಿಲ್ಲ?
ಮುದ್ದಹನುಮೇಗೌಡ ಪಕ್ಷ ಸೇರ್ಪಡೆ ಕಾರ್ಯಕ್ರಮದಿಂದ ತುಮಕೂರಿನ ಕೆಲ ಶಾಸಕರು, ಹಿರಿಯ ನಾಯಕರು ದೂರ ಉಳಿದಿದ್ದರು. ಕಾಂಗ್ರೆಸ್ ಹಿರಿಯ ಶಾಸಕರಾದ ಟಿ.ಬಿ.ಜಯಚಂದ್ರ, ಕೆ.ಷಡಕ್ಷರಿ, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಗೈರು ಹಾಜರಾಗಿದ್ದರು. ಇವರೆಲ್ಲ ಮುದ್ದಹನುಮೇಗೌಡರು ಮರಳಿ ಬಂದ ವಿಚಾರದಲ್ಲಿ ಅಷ್ಟೇನೂ ಸಮಾಧಾನವಾಗಿಲ್ಲ.
ಪಕ್ಷಾಂತರದಿಂದ ಮುಜುಗರವಾಗಿದೆ ಎಂದ ಮುದ್ದ ಹನುಮೇಗೌಡ
ʻʻನಾನು ಪಕ್ಷಾಂತರ ಮಾಡಿದ್ದಕ್ಕೆ ನನಗೆ ಮುಜುಗರ ಆಗಿದೆ. ಚುನಾವಣೆಗೆ ಸ್ಪರ್ಧೆ ಮಾಡಲು ಪಕ್ಷಾಂತರ ಮಾಡಿದ್ದೆ. ತಪ್ಪಿನ ಅರಿವು ಆಗಿ, ಯಾವ ಪಕ್ಷ ರಾಜಕೀಯ ಜೀವ ಕೊಟ್ಟಿದೆ ಆ ಪಕ್ಷದಲ್ಲಿ ಸೇವೆ ಸಲ್ಲಿಸಬೇಕು ಎಂದು ಕಾಂಗ್ರೆಸ್ ಗೆ ಬಂದಿದ್ದೇನೆ ಸಾರ್ವಜನಿಕ ಬದುಕಿನಲ್ಲಿ ಸ್ವಲ್ಪ ಹೆಸರು ಮಾಡಿ ಉಳಿಸಿಕೊಳ್ಳಬೇಕು. ನಾನು ಕಾಂಗ್ರೆಸ್ ಪಕ್ಷ ಅಭಾರಿಯಾಗಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ನನ್ನ ಮುಂದಿನ ಸಾರ್ವಜನಿಕ ಬದುಕು ನಡೆಸುತ್ತೇನೆʼʼ ಎಂದು ಅಧಿಕೃತ ಸೇರ್ಪಡೆಯ ಬಳಿಕ ಮುದ್ದ ಹನುಮೇಗೌಡ ಹೇಳಿದರು.
ಅವರ ಮೇಲೆ ಕೋಪಾನೂ ಇದೆ, ಪ್ರೀತೀನೂ ಇದೆ ಎಂದ ರಾಜಣ್ಣ
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಕೆ.ಎನ್. ರಾಜಣ್ಣ ಅವರು, ಮುದ್ದಹನುಮೇಗೌಡರ ಬಗ್ಗೆ ವೈಯಕ್ತಿಕವಾಗಿ ಕೋಪಾನು ಇದೆ. ಸಹಾನುಭೂತಿಯೂ ಇದೆ. ಆ ಪಾರ್ಟಿಗೆ ಹೋಗಬೇಡಿ ಎಂದು ನಾನು ಸೇರಿದಂತೆ ಎಲ್ಲರೂ ಹೇಳಿದರು. ಆದರೂ ಅವರು ಜೆಡಿಎಸ್, ಬಿಜೆಪಿ ಅಂತ ಹೋಗಿ ಬಂದಿದ್ದು ಆಯಿತು, ಇನ್ಮುಂದೆ ಹೋಗಬಾರದು ಅಷ್ಟೇ ಅವರ ತಪ್ಪು ಅರಿವು ಆಗಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಎಲ್ಲರ ಇಚ್ಛೆಯಂತೆ ಸಿಎಂ, ಡಿಸಿಎಂ ಅವರನ್ನು ಒಪ್ಪಿಸಿ ಕಾರ್ಯಕ್ರಮ ನಡೆಯುತ್ತಿದೆʼʼ ಎಂದು ಹೇಳಿದರು.
ʻʻಒಮ್ಮೊಮ್ಮೆ ತಪ್ಪು ನಿರ್ಣಯ ಆಗಿರುತ್ತವೆ. ಈಗ ಅವರಿಗೆ ತಪ್ಪಿನ ಅರಿವು ಆಗಿದೆ. ಕಾಂಗ್ರೆಸ್ ಗೆ ಮುದ್ದಹನುಮೇಗೌಡರು ಕೊಟ್ಟ ಕೊಡುಗೆಗಿಂತ ಕಾಂಗ್ರೆಸ್ ಪಕ್ಷ ಅವರಿಗೆ ಸಾಕಷ್ಟು ಕೊಟ್ಟಿದೆ. ಹೀಗಾಗಿ ಅವರು ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಸೇರಿದ್ದಾರೆ. ನಾವೀಗ ಕನಿಷ್ಠ 20 ಸ್ಥಾನ ಗೆಲ್ಲಬೇಕು. ಹೈಕಮಾಂಡ್ ಹೇಳಿದ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೀರ್ತಿ ತರಬೇಕುʼʼ ಎಂದು ಹೇಳಿದರು.
ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸಬೇಕು ಎಂದ ಡಾ. ಜಿ. ಪರಮೇಶ್ವರ್
ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ನಾಯಕತ್ವದಲ್ಲಿ ಚುನಾವಣೆ ನಡೆಯಲಿದ್ದು, ಹೆಚ್ಚು ಸ್ಥಾನ ಗೆಲ್ಲಬೇಕು ಗೆಲ್ಲಬೇಕಾದ ಅನಿವಾರ್ಯಯಿದೆ. 28 ಕ್ಷೇತ್ರಗಳಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಬೇಕು. ಇಲ್ಲವಾದರೆ 136 ಶಾಸಕರು ಗೆದ್ದು, 43% ಮತ ಪಡೆದು ಅಪ್ರಯೋಜನ ಆಗಲಿದೆ. ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಜವಬ್ದಾರಿ ತೆಗೆದುಕೊಳ್ಳಬೇಕು. ಮುದ್ದಹನುಮೇಗೌಡರಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರಬೇಕು. ನಮ್ಮ ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಬೇಕು ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಿದ್ದನ್ನು ನೆನಪಿಸಿಕೊಂಡ ಡಾ. ಜಿ. ಪರಮೇಶ್ವರ್ ಅವರು, ಆವತ್ತು ನಾನು ಮತಗಟ್ಟೆಗೆ ಹೋದಾದ ದೇವೇ ಗೌಡರಿಗೆ ಮತಹಾಕಲು ಕೈ ಬರಲಿಲ್ಲ. ಆದರೆ ಪಕ್ಷದ ತೀರ್ಮಾನ ಅಂತ ಜೆಡಿಎಸ್‌ಗೆ ಮತ ಹಾಕಿದೆ ಎಂದರು.
ಮುದ್ದಹನುಮೇಗೌಡರು ಮರಳಿ ಬರಲು ಯಾರು ಕಾರಣ?
ಮುದ್ದಹನುಮೇಗೌಡರು ತಾವು ಅಂದು ಮಾಡಿದ ತಪ್ಪಿನ ಅರಿವಾಗಿ ಇವತ್ತು ವಾಪಸ್ ಬಂದಿದ್ದಾರೆ. ಅವರು ವಾಪಸ್ ಬರಲು ಕೆ.ಎನ್.ರಾಜಣ್ಣ ಮತ್ತು ಎಸ್.ಆರ್.ಶ್ರೀನಿವಾಸ್ ಸಂಜೆ ತೀರ್ಮಾನ ಕಾರಣ. ಇಬ್ಬರೂ ಸಂಜೆ ಕುಳಿತು ತೀರ್ಮಾನ ಕೈಗೊಂಡಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು ಡಾ.ಜಿ.ಪರಮೇಶ್ವರ್.