ತುಮಕೂರು: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಕೊಲೆಯಾದ (Murder Case) ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹುಲಿಯೂರುದುರ್ಗ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮೀಪುರದ ಶಂಕರ (30), ಹಾಗೂ ಬೂದಾನಹಳ್ಳಿಯ ನಾಗೇಶ್ (32) ಬಂಧಿತ ಆರೋಪಿಗಳು.
ಹುಲಿಯೂರುದುರ್ಗ ಬಳಿಯ ಮೂದನಹಳ್ಳಿ ಗ್ರಾಮದ ಪ್ರದೀಪ್ ಎಂಬಾತನನ್ನು ಹತ್ಯೆ ಮಾಡಿದ್ದರು. ತುಮಕೂರಿನ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಬಳಿಯ ಲಕ್ಷ್ಮೀಪುರದ ಉಲ್ಲಾಳಬೆಟ್ಟದಲ್ಲಿ ಕಳೆದ ಮೇ 30ರ ಗುರುವಾರ ಸಂಜೆ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಕೊಲೆಯಾದ ಪ್ರದೀಪ್‌ಗೆ ಆರೋಪಿಗಳಾದ ಶಂಕರ ಹಾಗೂ ನಾಗೇಶ್ ಮೂವರೂ ಸ್ನೇಹಿತರು.
ಪ್ರದೀಪ್ ವೃತ್ತಿಯಲ್ಲಿ ಟ್ರ್ಯಾಕ್ಟರ್ ಚಾಲಕನಾಗಿದ್ದ. ಇತ್ತೀಚೆಗೆ ಶಂಕರ ಹಾಗೂ ನಾಗೇಶ್ ಜತೆ ದುವರ್ತನೆ ತೋರಿ ಮನಬಂದಂತೆ ನಡೆದುಕೊಳ್ಳುತ್ತಿದ್ದ. ಇದು ಶಂಕರ್ ಹಾಗೂ ನಾಗೇಶ್ ಸಿಟ್ಟಿಗೆ ಕಾರಣವಾಗಿತ್ತು. ಪ್ರದೀಪ್‌ಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಪ್ಲ್ಯಾನ್ ಮಾಡಿಕೊಂಡಿದ್ದರು.
ಕಳೆದ 27 ರಂದು ಹುಲಿಯೂರುದುರ್ಗ ಪಟ್ಟಣದ ಬಾರ್‌ವೊಂದರಲ್ಲಿ ಶಂಕರ ಹಾಗೂ ನಾಗೇಶ್ ಮದ್ಯದ ಬಾಟೆಲ್‌ಗಳನ್ನು ತೆಗೆದುಕೊಂಡು ಹೋಗಿದ್ದರು. ನಂತರ ಈ ಮೂವರು ಸೇರಿ ಉಲ್ಲಾಳ ಬೆಟ್ಟದಲ್ಲಿ ಪಾರ್ಟಿ ಮಾಡಿದ್ದರು. ಇದೇ ಸರಿಯಾದ ಸಮಯವೆಂದು ಆರೋಪಿಗಳು ಪ್ರದೀಪ್‌ಗೆ ಕಂಠಪೂರ್ತಿ ಕುಡಿಸಿದ್ದರು. ಬಳಿಕ ನಶೆಯಲ್ಲಿದ್ದ ಪ್ರದೀಪ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು, ಅಲ್ಲಿಂದ ನಾಪತ್ತೆಯಾಗಿದ್ದರು.
ಇತ್ತ ಪ್ರದೀಪ್ ಕುಟುಂಬಸ್ಥರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಅನಂತರ ಮೇ 30ರಂದು ಉಲ್ಲಾಳ ಬೆಟ್ಟದಲ್ಲಿ ಪ್ರದೀಪ್ ಮೃತದೇಹವು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡ ಹುಲಿಯೂರುದುರ್ಗ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Rameshwaram Cafe: ಗ್ರಾಹಕರ ಕ್ಷಮೆ ಕೋರಿದರೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಾಮೇಶ್ವರಂ ಕೆಫೆ ಮಾಲೀಕ; ಕಾರಣ ಇದು
ಜಸ್ಟ್ ಗುರಾಯಿಸಿದ್ದಕ್ಕೆ ಯುವಕನ ಬರ್ಬರ ಹತ್ಯೆ; ಸಾವಿನ ಕೊನೆ ಕ್ಷಣ ಸೆರೆ
ಮೈಸೂರು: ಮೈಸೂರಿನಲ್ಲಿ ಗುರಾಯಿಸಿದ್ದಕ್ಕೆ ಯುವಕನ (Murder case) ಕೊಲೆಯಾಗಿದೆ. ಯುವಕನ ಸಾವಿನ ಕೊನೆ ಕ್ಷಣದ ವಿಡಿಯೊಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅರ್ಬಾಜ್ ಖಾನ್ (18) ಕೊಲೆಯಾದವನು.
ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ಘಟನೆ ನಡೆದಿದೆ. ಶಾಂತಿನಗರದ ಲಾಲ್ ಮಸೀದಿ ಬಳಿ ಅರ್ಬಾಜ್ ಖಾನ್ ಗುರಾಯಿಸಿದ ಎಂಬ ಕಾರಣಕ್ಕೆ ಯುವಕರ ಮಧ್ಯೆ ಗಲಾಟೆ ಶುರುವಾಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿತ್ತು. ನೋಡನೋಡುತ್ತಲೇ ನಾಲ್ವರು ಆರೋಪಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಈ ವೇಳೆ ಕುತ್ತಿಗೆಗೆ ಸೀಳಿದ ಕಾರಣಕ್ಕೆ ಅರ್ಬಾಜ್ ಖಾನ್ ನಡುರಸ್ತೆಯಲ್ಲಿ ರಕ್ತಕಾರುತ್ತಾ ಒದ್ದಾಡುತ್ತಿದ್ದ. ಸ್ಥಳೀಯ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು, ಕೂಡಲೇ ಆಟೋದಲ್ಲಿ ಗಾಯಾಳು ಅರ್ಬಾಜ್ ಖಾನ್‌ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಯಲ್ಲಿ ಅರ್ಬಾಜ್ ಖಾನ್ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಇನ್ನೂ ಪರಸ್ಪರ ಗಲಾಟೆಯಲ್ಲಿ ಆರೋಪಿ ಶಹಬಾಜ್ ಎಂವಾತನಿಗೂ ಗಾಯವಾಗಿದ್ದ, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಪ್ರಕರಣ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ