ತುಮಕೂರು: ಬೇವಿನ ಬೀಜ ಸಂಗ್ರಹಿಸಲು ಅರಣ್ಯಕ್ಕೆ ಹೋಗಿದ್ದ ಮಹಿಳೆಯೊಬ್ಬರು ಬರ್ಬರವಾಗಿ (murder case) ಕೊಲೆಯಾಗಿದ್ದಾರೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವಿರುಪಸಮುದ್ರ ಗ್ರಾಮದ ಅರಣ್ಯದಲ್ಲಿ ಘಟನೆ ನಡೆದಿದೆ. ಚಂದ್ರಕ್ಕ (55) ಕೊಲೆಯಾದವರು.
ಆಂಧ್ರಪ್ರದೇಶ ಸತ್ಯಸಾಯಿ ಜಿಲ್ಲೆಯ ಎಲ್ಲೋಟಿ ಗ್ರಾಮದ ನಿವಾಸಿಯಾದ ಚಂದ್ರಕ್ಕ ನಿನ್ನೆ ಗುರುವಾರ ಅರಣ್ಯದಲ್ಲಿ ಬೇವಿನ ಬೀಜ ಸಂಗ್ರಹಿಸಲು ಹೋಗಿದ್ದರು. ಹೀಗೆ ಹೋದ ಮಹಿಳೆ ಮನೆಗೆ ವಾಪಸ್ ಆಗಿರಲಿಲ್ಲ. ಇತ್ತ ಕುಟುಂಬಸ್ಥರು ಆತಂಕಗೊಂಡು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.
ಆದರೆ ಇದೀಗ ಯಾರೋ ಪಾತಕಿಗಳು ಚಂದ್ರಕ್ಕಳ ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಎಎಸ್‌ಪಿ ಅಬ್ದುಲ್ ಖಾದರ್, ಡಿವೈಎಸ್‌ಪಿ ರಾಮಚಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಪಾವಗಡ ಪೊಲೀಸರಿಂದ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಮಹಿಳೆಯನ್ನು ಕೊಂದು ಪರಾರಿ ಆಗಿರುವ ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: Lokayukta Raid : ಹಲಸಿನ ಮರ ತೆರವಿಗೂ ಕೊಡಬೇಕು ಗರಿ ಗರಿ ನೋಟು; ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಲಂಚಕೋರರು
ಗುಪ್ತಾಂಗ ಕಚ್ಚಿ ಮಲತಂದೆಯ ಕ್ರೌರ್ಯ
ಬೆಂಗಳೂರು/ಚಿಕ್ಕಬಳ್ಳಾಪುರ: ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಮಲತಂದೆ ದೌರ್ಜನ್ಯ (Assault Case) ನಡೆಸಿದ್ದಾನೆ. ಮಹಿಳೆಯ ಮೂರನೇ ಗಂಡನ ವಿಕೃತಿ ಅದ್ಯಾವ ಪರಿ ಇದೆ ಎಂದರೆ ಮಗುವಿನ ಗುಪ್ತಾಂಗ ಕಚ್ಚಿ, ಸಿಗರೇಟ್‌ನಿಂದ ಸುಟ್ಟು ಮೃಗೀಯ ರೀತಿ ವರ್ತಿಸಿದ್ದಾನೆ.
ಗೌರಿಬಿದನೂರಿನಲ್ಲಿ ಮಲತಂದೆಯೊಬ್ಬ ಅಟ್ಟಹಾಸ ತೋರಿದ್ದಾನೆ. ಜರೀನಾ ತಾಜ್ ಎಂಬಾಕೆ ಒಟ್ಟು ಮೂರು ಮದುವೆ ಆಗಿದ್ದು, ಅದರಲ್ಲಿ ಎರಡನೇ ಗಂಡನ ಮಗುವಿಗೆ ಮೂರನೇ ಗಂಡ ಚಿತ್ರಹಿಂಸೆ ನೀಡಿದ್ದಾನೆ. ಅಜ್ಮಂತ್ ಎಂಬಾತ ಮಗುವಿಗಷ್ಟೇ ಅಲ್ಲದೇ ಪತ್ನಿ ಮೇಲೂ ಹಲ್ಲೆ ನಡೆಸಿದ್ದಾನೆ.
ಮೂರು ವರ್ಷದ ಮಗುವಿನ ಮುಖ, ಕತ್ತು ಹಾಗೂ ತಲೆ ಭಾಗಕ್ಕೆ ಸಿಗರೇಟ್‌ನಿಂದ ಸುಟ್ಟು, ಮಗುವಿನ ಗುಪ್ತಾಂಗ ಕಚ್ಚಿ, ಮನಬಂದಂತೆ ಥಳಿಸಿದ್ದಾನೆ. 15 ವರ್ಷದ ಮತ್ತೊಬ್ಬ ಮಗಳ ಕೈ ಮುರಿದು ವಿಕೃತಿ ಮೆರೆದಿದ್ದಾನೆ.
ಜರೀನಾ ತಾಜ್‌ಗೆ ಮೂರು ಮದುವೆಯಾಗಿದ್ದು, ಮೊದಲ ಪತಿಯಿಂದ 2 ಹೆಣ್ಮಕ್ಕಳು ಆಗಿದ್ದವು. 2ನೇ ಪತಿಯಿಂದ ಮತ್ತೊಂದು ಹೆಣ್ಣು ಮಗು ಜನಿಸಿತ್ತು. ಇಬ್ಬರು ಗಂಡಂದಿರನ್ನು ತೊರೆದಿದ್ದ ಜರೀನಾ ಅಜ್ಮಂತ್ ಜತೆಗೆ ಮೂರನೇ ಮದುವೆಯಾಗಿದ್ದಳು. ಎರಡನೇ ಪತಿಯಿಂದ ಜನಿಸಿದ್ದ ಹೆಣ್ಣು ಮಗುವಿನ ಮೇಲೆ ಅಜ್ಮಂತ್ ಕಿರುಕುಳ ನೀಡಿದ್ದಾನೆ.
ತೀವ್ರ ಗಾಯಗೊಂಡಿರುವ ಮೂರು ವರ್ಷದ ಮಗುವನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ತಂದೆಯ ವಿಕೃತಿಯಿಂದ ಪುತ್ರಿ ಶಾಕ್‌ಗೆಗೊಳಗಾಗಿದ್ದಾಳೆ. ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ