Site icon Vistara News

ಈ ಡಾಕ್ಟರ್‌ಗೆ ಕುಡಿಯೋದೇ ಡ್ಯೂಟಿ; ಆಸ್ಪತ್ರೆಗೆ ಬರಲ್ಲ, ರೋಗಿಗಳನ್ನು ನೋಡಲ್ಲ; ಕ್ವಾರ್ಟರ್ಸ್‌ ತುಂಬಾ ಕ್ವಾರ್ಟರ್‌ ಬಾಟಲ್‌!

Alcoholic doctor in pavagada hospital

ತುಮಕೂರು: ಇಲ್ಲೊಬ್ಬ ಡಾಕ್ಟರ್‌ (Alcoholic doctor) ಇದ್ದಾನೆ. ಇವನಿಗೆ ಕುಡಿಯೋದೇ ಕಾಯಕ. ಅದು ಬಿಟ್ಟು ಬೇರೆ ಏನಾದರೂ ಮಾಡಬೇಕು ಎಂದರೆ ಸಿಗರೇಟು ಸೇದೋದು ಅಷ್ಟೆ. ಆಸ್ಪತ್ರೆಗೆ ಇವರೇ ಚೀಫ್‌. ಆದರೆ, ಒಂದಿನವೂ ಆಸ್ಪತ್ರೆಗೆ ಬರಲ್ಲ. ಯಾವತ್ತಾದರೂ ಬಂದರೂ ಫುಲ್‌ ಟೈಟಾಗೇ ಇರ್ತಾರೆ: ಹೀಗೆ ಒಬ್ಬ ಡಾಕ್ಟರ್‌ ವಿರುದ್ಧ ಜನಾಕ್ರೋಶ (people protest against doctor) ಭುಗಿಲೆದ್ದಿತ್ತು. ಘಟನೆ ನಡೆದಿರುವುದು ತುಮಕೂರು ಜಿಲ್ಲೆ (Tumkur News) ಪಾವಗಡ ತಾಲೂಕಿನ ಕ್ವಾಟಗುಡ್ಡ ಗ್ರಾಮದಲ್ಲಿ.

ಕೋಟಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಮಾಂಜಿನಪ್ಪ ಪ್ರತಿ ದಿನವೂ ಕುಡಿದು ಬಿದ್ದಿರುತ್ತಾರೆ. ಬೆಳ್ಳಂಬೆಳಗ್ಗೆ ಕುಡಿದೇ ಡ್ಯೂಟಿಗೆ ಹಾಜರಾಗುತ್ತಾರೆ ಎಂದು ಸಿಟ್ಟಿಗೆದ್ದ ಗ್ರಾಮಸ್ಥರು ಅವರನ್ನು ರೆಡ್‌ ಹ್ಯಾಂಡಾಗಿಯೇ ಹಿಡಿಯಲು ಸನ್ನದ್ಧರಾಗಿದ್ದರು.

ಪ್ರತಿನಿತ್ಯ ಕುಡಿದು ಬಂದೇ ಡ್ಯೂಟಿಗೆ ಹಾಜರಾಗುತ್ತಿದ್ದ ರಾಮಾಂಜಿನಪ್ಪನ ಬಗ್ಗೆ ಹಲವಾರು ಬಾರಿ ಮೇಲಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ರೆಡ್‌ ಹ್ಯಾಂಡಾಗಿ ಹಿಡಿಯಬೇಕು ಎಂದು ಸೇರಿದ್ದೇವೆ ಎಂದು ಗ್ರಾಮಸ್ಥರು ತಾವೇ ಮಾಡಿದ ವಿಡಿಯೊದಲ್ಲಿ ತಿಳಿಸಿದ್ದಾರೆ.

ಪಾವಗಡ ತಾಲೂಕಿನ ಕ್ವಾಟಗುಡ್ಡ ಗ್ರಾಮದಲ್ಲಿರುವ ವಸತಿಗೃಹಕ್ಕೆ ನುಗ್ಗಿದ ಜನ

ಈ ರಾಮಾಂಜಿನಪ್ಪ ಆಸ್ಪತ್ರೆಗೆ ಬಂದಿರುವುದಾಗಿ ಸಹಿ ಮಾಡಲಾಗಿದೆ. ಆದರೆ, ಆಸ್ಪತ್ರೆಗೆ ಬಂದೇ ಇರಲಿಲ್ಲ. ಜನರೆಲ್ಲ ಸೇರಿ ಹೋಗಿ ನೋಡಿದರೆ ರಾಮಾಂಜಿನಪ್ಪ ಎಂದಿನ ಚಾಳಿಯಂತೆ ಎಣ್ಣೆ ಹೊಡೆಯುತ್ತಿರುವುದು ಕಂಡಿತು. ಈ ನಡುವೆ, ಪ್ರತಿಭಟನೆಯ ಸುಳಿವು ಪಡೆದ ಪೊಲೀಸರು ಕೂಡಾ ಸ್ಥಳಕ್ಕೆ ಬಂದಿದ್ದರು.

ರಾಮಾಂಜಿನಪ್ಪ ಆಸ್ಪತ್ರೆಯ ಆವರಣದಲ್ಲೇ ಇರುವ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದು, ಅಲ್ಲಿಗೆ ಬೇರೆ ಯಾರೂ ಬರಬಾರದು ಎಂದು ತಾಕೀತು ಮಾಡಿದ್ದ. ಆದರೆ, ಪೊಲೀಸರ ಸಮ್ಮುಖದಲ್ಲಿ ನಾವು ನುಗ್ಗೇ ನುಗ್ಗುತ್ತೇವೆ ಎಂದು ಜನರು ಹಠ ಹಿಡಿದರು. ಕೊನೆಗೆ ಜನರ ಹಠವೇ ಗೆದ್ದಿತ್ತು. ಒಳಗೆ ಹೋಗಿ ನೋಡಿದರೆ ಬಗೆಬಗೆಯ ಮದ್ಯಗಳು ಅಲ್ಲಿದ್ದದ್ದು ಕಂಡುಬಂತು. ಜತೆಗೆ ಪ್ಯಾಕ್‌ ಪ್ಯಾಕ್‌ ಸಿಗರೇಟುಗಳು.

ಕುಡುಕ ಡಾಕ್ಟರ್‌ ಮೇಲೆ ಆರೋಪ ಮಾಡುತ್ತಿರುವ ಗ್ರಾಮಸ್ಥರು

ಜನರನ್ನು ಒಳಗೆ ಬಾರದಂತೆ ತಡೆಯಲು ಮುಂದಾದ ರಾಮಾಂಜಿನಪ್ಪ. ಇದು ನನ್ನ ಖಾಸಗಿ ಜಾಗ. ಇಲ್ಲಿಗೆ ಬರಬಾರದು ಎಂದಿದ್ದ. ಆದರೆ, ಜನರು, ಇದು ಖಾಸಗಿಯಲ್ಲಿ ಕ್ವಾರ್ಟರ್ಸ್‌ ಇದು. ನೀವು ಇಷ್ಟು ಹೊತ್ತಿಗೆ ಆಸ್ಪತ್ರೆಯಲ್ಲಿ ಇರಬೇಕಾಗಿತ್ತು. ಇಲ್ಲಿ ಕುಡಿದುಕೊಂಡು ಕುಳಿತಿದ್ದೀರಿ ಎಂದು ಆಕ್ಷೇಪಿಸಿದರು.

ಇದಾದ ಬಳಿಕ ಗ್ರಾಮಸ್ಥರು ಆಸ್ಪತ್ರೆಗೆ ಬೀಗ ಹಾಕಿ ಪ್ರತಿಭಟನೆಗೆ ಮುಂದಾದರು. ಕುಡುಕ ವೈದ್ಯನನ್ನ ವಜಾ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ಆಗ ರಾಮಾಂಜಿನಪ್ಪ ನಾನೇ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತೇನೆ, ನಿಮ್ಮ ಸಹವಾಸವೇ ಬೇಡ ಎಂದು ಹೇಳಿದ. ಅದಕ್ಕೆ ಗ್ರಾಮಸ್ಥರು, ನಿಮ್ಮನ್ನು ಟ್ರಾನ್ಸ್‌ ಫರ್‌ ಮಾಡುವುದ ಬೇಡ, ವಜಾ ಮಾಡಬೇಕು. ಇಲ್ಲದಿದ್ದರೆ ನೀವು ಬೇರೆ ಕಡೆ ಹೋದರೂ ಅಲ್ಲೂ ಇದೇ ಚಾಳಿ, ಸಮಸ್ಯೆ ಮುಂದುವರಿಸುತ್ತೀರಿ ಎಂದರು.

ಇದನ್ನೂ ಓದಿ: Harrassment Case : ಡಿ ಗ್ರೂಪ್‌ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ತಾಲೂಕು ವೈದ್ಯಾಧಿಕಾರಿಗೆ ಹಿಗ್ಗಾಮುಗ್ಗಾ ಗೂಸಾ

ಆಸ್ಪತ್ರೆಗೆ ಬಂದಿದ್ದ ಮಹಿಳೆಯರು ಕೂಡಾ ಇಲ್ಲಿ ಡಾಕ್ಟರ್‌ ಇರುವುದೇ ಇಲ್ಲ. ಕೇವಲ ನರ್ಸ್‌ಗಳು ಮಾತ್ರ ಚಿಕಿತ್ಸೆ ಕೊಡುತ್ತಾರೆ. ನಮಗೆ ಭಯವಾಗುತ್ತದೆ ಎಂದರು. ಈ ನಡುವೆ, ವೈದ್ಯ ರಾಮಾಂಜಿನಪ್ಪಗೆ ತಾಲೂಕು ವೈದ್ಯಾಧಿಕಾರಿ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂತು. ಇಲ್ಲವಾದರೆ ಬೆಳಗ್ಗೆಯಿಂದ ಪ್ರತಿಭಟನೆ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಯಾಕೆ ಎಂದು ಅವರು ಪ್ರಶ್ನಿಸಿದರು.

Exit mobile version