ತುಮಕೂರು: ಸಿದ್ದಗಂಗಾ ಮಠದ ಜಾತ್ರೆಗೆ ಬಂದಿದ್ದ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ (Physical Abuse) ನಡೆದಿದೆ. ಬಾಲಕಿಯು ತನ್ನ ಸ್ನೇಹಿತನೊಟ್ಟಿಗೆ ಬೆಟ್ಟದ ಬಳಿ ಕುಳಿತಿದ್ದಳು. ಅಲ್ಲಿಗೆ ಬಂದ ಮೂವರು ಕಿರಾತಕರು ಬಾಲಕಿಯನ್ನು ಬೆದರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ.
ಸ್ನೇಹಿತನ ಜತೆಗೆ ಸಿದ್ದಗಂಗಾ ಮಠದ ಜಾತ್ರೆಗೆ ಬಾಲಕಿ ಬಂದಿದ್ದಳು. ಈ ವೇಳೆ ಮೂವರು ಕಿರಾತಕರು ಮೊಬೈಲ್‌ನಲ್ಲಿ ವಿಡಿಯೊವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಆ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ಬಾಲಕಿ ಭಯಗೊಂಡಿದ್ದಾಳೆ. ಈ ವೇಳೆ ಬಾಲಕಿಯನ್ನು ಬಲವಂತವಾಗಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮಠದ ಪಕ್ಕದಲ್ಲಿರುವ ಬಂಡೆಪಾಳ್ಯದ ರೂಂನಲ್ಲೇ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.
ಅತ್ಯಾಚಾರವೆಸಗಿದ ನಂತರ ಬಾಲಕಿಯನ್ನು ಮತ್ತೆ ಮಠದ ಹತ್ತಿರ ಕರೆತಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಂತರ ಬಾಲಕಿಯ ಸ್ನೇಹಿತ ಆಸ್ಪತ್ರೆಗೆ ಸೇರಿಸಿದ್ದಾನೆ. ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಅತ್ಯಾಚಾರದ ದೂರು ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಬಂಡೆಪಾಳ್ಯದಲ್ಲಿ ವಾಸವಿದ್ದ ಅಮೋಘ, ಹನುಮಂತ, ಪ್ರತಾಪ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಗುರುವಾರ ಕೋರ್ಟ್‌ಗೆ ಹಾಜರು ಪಡಿಸುವ ಸಾಧ್ಯತೆ ಇದೆ. ಮೂವರನ್ನು ಬಂಧಿಸಿರುವ ಬಗ್ಗೆ ಗೃಹ ಸಚಿವ ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಪಿಎಚ್‌ಡಿ ವಿದ್ಯಾರ್ಥಿನಿಗೆ ಅಕ್ಕಮಹಾದೇವಿ ಮಹಿಳಾ ವಿವಿಯ ಪ್ರೊಫೆಸರ್‌ರಿಂದ ಲೈಂಗಿಕ ಕಿರುಕುಳ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ರಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ (Physical Abuse) ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮ್ಯಾನೇಜ್ಮೆಂಟ್ ವಿಭಾಗದ ಪ್ರೊ. ಮಲ್ಲಿಕಾರ್ಜುನ ಎನ್.ಎಲ್ ಅವರಿಂದ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ.
ಹೀಗಾಗಿ ಪಿಎಚ್‌ಡಿ ವಿದ್ಯಾರ್ಥಿನಿ ಮಹಿಳಾ ವಿವಿ ಕುಲಪತಿ ಪ್ರೊ. ತುಳಸೀಮಾಲಾ ಅವರಿಗೆ ದೂರು ನೀಡಿದ್ದಾರೆ. ಕಳೆದ ಫೆಬ್ರವರಿ 27ರಂದು ಬಂದಿರುವ ದೂರಾನ್ನು ಕುಲಪತಿ ಪ್ರೊ. ತುಳಸೀಮಾಲಾ ಅವರು ಆಂತರಿಕ ದೂರು ಸಮಿತಿಗೆ ನೀಡಿದ್ದಾರೆ. ಯುಜಿಸಿ ನಿಯಮಗಳ ಪ್ರಕಾರ ಮಾಡಲಾಗಿರುವ ಆಂತರಿಕ ದೂರು ಸಮಿತಿಯಿಂದ ಈ ಬಗ್ಗೆ ವಿಚಾರಣೆ ನಡೆಯಲಿದೆ.
ವಿಚಾರಣೆಗೆ ಇನ್ನೂ ಸಮಯ ನಿಗದಿ ಮಾಡಿಲ್ಲ. ಮ್ಯಾನೇಜ್ಮೆಂಟ್ ವಿಭಾಗದ ಪ್ರೊ. ಮಲ್ಲಿಕಾರ್ಜುನ ಎನ್.ಎಲ್ ಕಳೆದ 2017 ರಿಂದ ಮಹಿಳಾ ವಿವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಪ್ರಕರಣ ಕುರಿತು ವಿದ್ಯಾರ್ಥಿನಿಗೆ ನ್ಯಾಯ ನೀಡಬೇಕೆಂದು ವಿದ್ಯಾರ್ಥಿ ಸಂಘಟನೆಗಳು ಒತ್ತಾಯ ಮಾಡಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ