Site icon Vistara News

Prajadhwani : ಘೋಷಣೆ ಈಡೇರಿಸದಿದ್ದರೆ ರಾಜಕಾರಣದಿಂದ ನಿವೃತ್ತಿ : ಡಿ.ಕೆ. ಶಿವಕುಮಾರ್‌ ಶಪಥ

prajadhwani-congress will fulfil all the announcements assures DK shivakumar

ತುಮಕೂರು: ಕಾಂಗ್ರೆಸ್‌ ಎಂದಿಗೂ ನುಡಿದಂತೆ ನಡೆದಿದೆ. ಹಾಗೊಂದು ವೇಳೆ ನುಡಿದಂತೆ ನಡೆಯದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ತುಮಕೂರಿನಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್‌ ಮಾತನಾಡಿದರು.

ಜೆಡಿಎಸ್‌ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಖಾತ್ರಿಯಾಗಿದೆ. ಅದಕ್ಕಾಗಿಯೇ ಗುಬ್ಬಿಯ ಶ್ರೀನಿವಾಸ್, ಮಧು ಮಾದೇಗೌಡರು, ಮಧು ಬಂಗಾರಪ್ಪ, ಕೋಲಾರದ ಶ್ರೀನಿವಾಸ ಗೌಡರು, ವೈಎಸ್ವಿ ದತ್ತಾ, ಮಂಜುನಾಥ ಗೌಡರು, ದೇವೇಂದ್ರಪ್ಪ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇವರೆಲ್ಲರೂ ನಾಯಕರು, ಜನಪ್ರತಿನಿಧಿಗಳು, ವಿದ್ಯಾವಂತರು. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡುತ್ತಿದ್ದಾರೆ ಎಂದರು.

ನೀವು ನಾಳೆಗೆ ಕಾಯಬೇಡಿ. ಇಂದು ನಿಮ್ಮ ಕೈಯಲ್ಲಿ ನಿಮ್ಮ ರಾಜ್ಯ ಹಾಗೂ ರಾಷ್ಟ್ರದ ಭವಿಷ್ಯವಿದೆ. ನೀವು ಪ್ರತಿಜ್ಞೆ ಮಾಡಿ ಭ್ರಷ್ಟ ಹಾಗೂ ಕಳಂಕಿತ ಬಿಜೆಪಿ ಸರ್ಕಾರ ತೊಲಗಿಸಲು. ಜನ ಸಂಕಷ್ಟದಲ್ಲಿದ್ದಾರೆ, ಅವರಿಗೆ ನೆರವಾಗಲು ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತ ನೀಡುವ ಗೃಹಜ್ಯೋತಿ ಎಂಬ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆವು. ನಂತರ ರಾಜ್ಯದ ಮಹಿಳೆಯರು ಕಾಂಗ್ರೆಸ್ ಪಕ್ಷದಿಂದ ಏನನ್ನು ಬಯಸುತ್ತಿದ್ದಾರೆ ಎಂದು ಅಭಿಪ್ರಾಯ ಸಂಗ್ರಹಿಸಿದೆವು. ನಂತರ ನಮ್ಮ ಪಕ್ಷದ ಎಲ್ಲ ನಾಯಕರು ಚರ್ಚೆ ಮಾಡಿ ಪ್ರತಿ ತಿಂಗಳು ಪ್ರತಿ ಮನೆಯೊಡತಿಗೆ 2 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡುವ ಗೃಹಲಕ್ಷ್ಮಿ ಎಂಬ ಎರಡನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೇವೆ. ಆ ಮೂಲಕ ಬೆಲೆ ಏರಿಕೆಯಿಂದ ಮಹಿಳೆಯರ ರಕ್ಷಣೆ ಮಾಡಲು ಈ ಕಾರ್ಯಕ್ರಮ ನೀಡುತ್ತಿದ್ದೇವೆ. ವಿದ್ಯುತ್ ಮೂಲಕ ವರ್ಷಕ್ಕೆ 18 ಸಾವಿರ, ಮಹಿಳೆಯರಿಗೆ 24 ಸಾವಿರ ಪ್ರತಿ ಕುಟುಂಬಕ್ಕೆ ಉಳಿತಾಯವಾಗುತ್ತದೆ. ಇಂತಹ ಒಂದು ಕಾರ್ಯಕ್ರಮವನ್ನು ಬಿಜೆಪಿ ನೀಡಿದೆಯಾ?

ಬಿಜೆಪಿ ನಿಮ್ಮ ಭಾವನೆ ಕೆರಳಿಸುತ್ತಿದೆ. ನಾವು ನುಡಿದಂತೆ ನಡೆಯುತ್ತೇವೆ. ನಾವು ಮಾತು ತಪ್ಪಿದರೆ ರಾಜಕೀಯ ಬದುಕಿನಿಂದ ನಿವೃತ್ತಿ ಪಡೆಯುತ್ತೇವೆ ಎಂಬ ಶಪಥ ಮಾಡುತ್ತೇವೆ. ಇದು ಕಾಂಗ್ರೆಸ್ ಪಕ್ಷದ ವಚನ. ನಮ್ಮ ಯೋಜನೆ ಕೇಳಿದ ನಂತರ ಬಿಜೆಪಿ ನಾಯಕರ ಮನಸ್ಸು ವಿಲವಿಲನೆ ಒದ್ದಾಡುತ್ತಿದೆ. ಜೆಡಿಎಸ್, ಕುಮಾರಸ್ವಾಮಿಯ ಎದೆ ಡವಡವ ಎಂದು ಒಡೆದು ಕೊಳ್ಳುತ್ತಿದೆ. ನಿಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಯಾಕೆ ಇಂತಹ ಕಾರ್ಯಕ್ರಮ ನೀಡಲಿಲ್ಲ? ನಾವು ಘೋಷಣೆ ಮಾಡಿದ ನಂತರ ಈಗ ಬಿಜೆಪಿಯವರು ನಾವು ಈ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅಲ್ಲಮ ಪ್ರಭುಗಳು ಒಂದು ಮಾತು ಹೇಳಿದ್ದಾರೆ. ಕೊಟ್ಟ ಕುದುರೆ ಏರಲಾಗದೆ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅದೇ ರೀತಿ ಅಧಿಕಾರ ಇದ್ದಾಗ ಮಾಡದೇ ಅಧಿಕಾರ ಹೋಗುವಾಗ ಮಾಡುತ್ತೇವೆ ಎಂದರೆ ಆಗುತ್ತದೆಯಾ?

ಇದನ್ನೂ ಓದಿ : Prajadhwani : ರಾಮನಗರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ರದ್ದು ಮಾಡಿದ್ದರ ಕುರಿತು ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ

ಸರ್ಕಾರ ಫೆ.17ರಂದು ಬಜೆಟ್ ಮಂಡನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಬಜೆಟ್ ನಲ್ಲಿ ಏನು ಹೇಳಿದರೂ ಜಾರಿಗೆ ಬರುವುದಿಲ್ಲ. ಅವರು ತಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಯೋಜನೆ ಜಾರಿ ಮಾಡಲಿಲ್ಲ. ನಾವು ಒಳ್ಳೆ ಕೆಲಸ ಮಾಡುತ್ತೇವೆ ಎಂದು ಹೋದರೆ ಅದು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ಉಚಿತವಾಗಿ ಅಕ್ಕಿ ನೀಡಲಿಲ್ಲವೇ? ಬಸವ ಜಯಂತಿ ದಿನ ಅಧಿಕಾರ ಸ್ವೀಕರಿಸಿ, ಅನ್ನ ಭಾಗ್ಯ ಯೋಜನೆ ಜಾರಿ ಮಾಡಿದರು. ಇಲ್ಲಿ ಪಾವಗಡದವರು ಇದ್ದೀರಿ. 50 ಸಾವಿರ ಎಕರೆ ಬೆಲೆ ಬಾಳುತ್ತಿದ್ದ ಜಮೀನಿನಲ್ಲಿ ವರ್ಷಕ್ಕೆ 24 ಸಾವಿರ ಬಾಡಿಗೆ ಬರುವಂತೆ ಮಾಡಿ 14 ಸಾವಿರ ಎಕರೆಗಳಲ್ಲಿ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದೇವೆ. ನಮ್ಮ ಕೈಯಲ್ಲಿ ಚಿತ ವಿದ್ಯುತ್ ನೀಡಲು ಆಗುವುದಿಲ್ಲವೇ? ರೈತರಿಗೆ ನೀಡಲಾಗುತ್ತಿದ್ದ 6 ತಾಸು ಗಂಟೆಯನ್ನು 7 ತಾಸಿಗೆ ಏರಿಕೆ ಮಾಡಿದೆವು. ಬಿಜೆಪಿಯವರು 10 ಗಂಟೆಗಳ ಕಾಲ ಕರೆಂಟ್ ನೀಡುತ್ತೇವೆ ಎಂದಿದ್ದರು. ಯಾಕೆ ನೀಡಲು ಆಗಲಿಲ್ಲ? ಈ ಸರ್ಕಾರದ 40% ಕಮಿಷನ್ ಲಂಚವನ್ನು ತಡೆದರೆ, ಬಡವರ ಜೇಬು ತುಂಬಬಹುದು.

Exit mobile version