Site icon Vistara News

Rama Mandir : ಅಯೋಧ್ಯೆಗೆ ಹೋಗಿಯೇ ಪೂಜೆ ಮಾಡಬೇಕಾ? ನಮ್ಮೂರ ರಾಮ ದೇವರಲ್ವಾ?; ರಾಜಣ್ಣ ಪ್ರಶ್ನೆ

KN Rajanna Ayodhya Rama Mandir

ತುಮಕೂರು: ಶ್ರೀ ರಾಮನನ್ನು ಬಿಜೆಪಿಯವರು ಗುತ್ತಿಗೆ ತೆಗೆದುಕೊಂಡಿಲ್ಲ. ಹಿಂದುತ್ವವನ್ನು ಯಾವುದೇ ಪಕ್ಷಕ್ಕೆ ಗುತ್ತಿಗೆ ಕೊಟ್ಟಿಲ್ಲ. ನಾವೆಲ್ಲರೂ ಹಿಂದೂಗಳೇ (we Are All Hindus). ರಾಮನ ಭಕ್ತರೇ (We are all Rama Bhaktas).. ರಾಜಕಾರಣಕ್ಕಾಗಿ, ವೋಟಿಗಾಗಿ ಪದೇಪದೇ ಹಿಂದೂ ವಿರೋಧಿ ಸರ್ಕಾರ (Anti hindu Government) ಅನ್ನೋದನ್ನು ಖಂಡಿಸುತ್ತೇವೆ ಎಂದು ರಾಜ್ಯ ಸಹಕಾರ ಸಚಿವ ಕೆ.ಎನ್‌. ರಾಜಣ್ಣ (Minister KN Rajanna) ಆಕ್ರೋಶದಿಂದ ಹೇಳಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಅಯೋಧ್ಯಾ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನದಲ್ಲಿ ತಾರತಮ್ಯವಾಗಿದೆ ಎಂದೂ ಆಪಾದಿಸಿದರು. ಆದರ ನಡುವೆ, ಅಯೋಧ್ಯೆಗೆ ಹೋಗಿಯೇ ಪೂಜೆ ಮಾಡಬೇಕಾ? ನಮ್ಮೂರ ರಾಮ ದೇವರಲ್ವಾ? ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ.

ಹಿಂದುತ್ವದ ದುರುಪಯೋಗದಿಂದಲೇ ಅಂಬೇಡ್ಕರ್‌ ಧರ್ಮ ಬಿಟ್ಟಿದ್ದು

ʻʻಬಿಜೆಪಿ ನಾಯಕರು ಅವರ ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲಿ. ಹಿಂದುತ್ವವನ್ನು ಬಂಡವಾಳ ಮಾಡಿಕೊಂಡು ಬೇರೆಲ್ಲ ಹಿಂದುಗಳಿಗೆ ಅಪಮಾನ ಮಾಡುವುದು ಸರಿಯಲ್ಲ. ಹಿಂದುತ್ವವನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ನೋಡಿಯೇ ಡಾ. ಅಂಬೇಡ್ಕರ್ ಹಿಂದುತ್ವವನ್ನ ತ್ಯಜಿಸಿ ಬೌದ್ಧ ಧರ್ಮಕ್ಕೆ ಸೇರ್ಪಡೆಯಾದರು ಅನಿಸುತ್ತದೆ. ಹಿಂದುತ್ವವನ್ನು ಈ ರೀತಿ ದುರುಪಯೋಗ ಪಡಿಸಿಕೊಳ್ಳುವುದು ಯಾವುದೇ ಮುಖಂಡರಿಗೆ ಶೋಭೆ ತರುವುದಿಲ್ಲʼʼ ಎಂದು ಕೆ.ಎನ್‌. ರಾಜಣ್ಣ ಹೇಳಿದರು.

ʻʻನಾವು ಕೂಡಾ ಹಿಂದುಗಳೇ, ನಾವೂ ಹಿಂದುತ್ವವಾದಿಗಳೇ. ಹಿಂದೆ ಅಂಬೇಡ್ಕರ್ ಹಿಂದುತ್ವ ತ್ಯಜಿಸುವ ಪರಿಸ್ಥಿತಿ ಸೃಷ್ಟಿ ಮಾಡಲಾಗಿತ್ತು. ಇದೀಗ ಮತ್ತೆ ಅಂತ ಪರಿಸ್ಥಿತಿಯನ್ನು ಸೃಷ್ಟಿ ಮಾಡಲಾಗುತ್ತಿದೆ. ಹಿಂದುತ್ವ ಅನ್ನೋ ಪದವನ್ನು ಹೆಚ್ಚಿಗೆ ಬಳಸಬಾರದು. ಹಿಂದುಗಳಿಗೆ ಅನನುಕೂಲ, ದಬ್ಬಾಳಿಕೆಯಾದಾಗ ಎಲ್ಲಾರೂ ಒಟ್ಟಾಗಿ‌ ಹೋರಾಟ ಮಾಡೋಣʼʼ ಎಂದು ಹೇಳಿದ ಅವರು, ಹಿಂದುಗಳಿಂದ ಮಾತ್ರ ಈ ದೇಶ ಕಟ್ಟಲಾಗಿಲ್ಲ. ಎಲ್ಲಾ ಧರ್ಮಗಳವರೂ ಸೇರಿ ದೇಶ ಕಟ್ಟಿದ್ದಾರೆ. ಈಗಲೂ ಇರುವ ರಾಕೆಟ್‌ ಟೆಕ್ನಾಲಜಿಯನ್ನು ಹುಟ್ಟು ಹಾಕಿದ್ದು ಟಿಪ್ಪು ಸುಲ್ತಾನ್‌ ಎಂದು ಹೇಳಿದರು.

ಶ್ರೀಕಾಂತ್‌ ಪೂಜಾರಿ ಬಂಧನ ಎಲ್ಲ ಕರಸೇವಕರ ಬಂಧನ ಆಗಲ್ಲ

ʻʻಹುಬ್ಬಳ್ಳಿಯಲ್ಲಿ ಬಂಧಿಸಲಾದ ಶ್ರೀಕಾಂತ್‌ ಪೂಜಾರಿ ಮೇಲೆ 13ಕ್ಕೂ ಹೆಚ್ಚು ಕೇಸ್‌ಗಳಿವೆ. ಆತನನ್ನು ಬಂಧಿಸಿದ ತಕ್ಷಣ, ಎಲ್ಲಾ ಕರಸೇವಕರನ್ನು ಬಂಧಿಸುತ್ತಾರೆ ಅನ್ನುವುದು. ಇದನ್ನು ದೇಶಾದ್ಯಂತ ಇಶ್ಯೂ ಮಾಡೋದು, ಈ ರೀತಿಯ ಸಣ್ಣತನದ ರಾಜಕಾರಣ ಶೋಭೆ ತರಲ್ಲ.‌ ಅವನು ದೊಂಬಿ, ಕೊಲೆ, ಮಟ್ಕಾ, ಅಬಕಾರಿ ದಂಧೆಯಲ್ಲಿ ಸೇರಿಕೊಂಡಿದ್ದ. ದಶಕಗಳಿಂದ ಇವುಗಳನ್ನು ಮಾಡಿಕೊಂಡು ಬಂದಿದ್ದ. ಪರಿಶೀಲನೆ ಮಾಡಿದಾಗ ಇದು ಲಾಂಗ್ ಪೆಂಡಿಂಗ್ ಕೇಸ್ ಅಂತ ಗೊತ್ತಾಗಿದೆ. ಹೈಯರ್ ಆಫೀಸರ್ ಬಂದಾಗ ತೊಂದರೆಯಾಗುತ್ತದೆ ಎಂದು ಕ್ರಮ ಕೈಗೊಂಡಿದ್ದಾರೆ.‌ ಕರಸೇವಕರನ್ನು ಗುರಿಯಾಗಿಸಿಕೊಂಡು ಬಂಧನ ಮಾಡಿಲ್ಲ ಹಿಂದೂತ್ವದ ಹೆಸರಿನಲ್ಲಿ ಅಪರಾಧಿಗಳವರನ್ನು ರಕ್ಷಿಸುವುದು ಸರಿಯಲ್ಲ.‌ ಬಿಜೆಪಿಯವರು ಎಲ್ಲಾ ವಿಷಯದಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ.. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ತಪಿತಸ್ಥರ ವಿಷಯವನ್ನು ರಾಜಕಾರಣಕ್ಕೆ ಬಳಸಿಕೊಂಡು, ಸಮಾಜದಲ್ಲಿ ಗೊಂದಲ ಸೃಷ್ಟಿಸಬಾರದುʼʼ ಎಂದು ಕೆ.ಎನ್‌. ರಾಜಣ್ಣ ಆಕ್ಷೇಪಿಸಿದರು.

ಮಹಾತ್ಮ ಗಾಂಧಿ ಹಿಂದು ಅಲ್ವಾ? ಕೊಂದಿದ್ದು ಹಿಂದುನೆ ಅಲ್ವಾ?

ʻʻನಾಥೂರಾಮ್‌ ಗೋಡ್ಸೆಯನ್ನು ಗಾಂಧಿಯ ಹಂತಕ ಎಂದು ಹೇಳುತ್ತೇವೆ. ಅವರು ಹಿಂದೂ ತಾನೇ? ಗೋಡ್ಸೆ ಪ್ರಖರ ಹಿಂದೂವಾದಿ. ಮಹಾತ್ಮ ಗಾಂಧಿ ಕೂಡಾ ಹಿಂದೂನೆ. ಸದಾ ಕಾಲ ರಾಮನ ಜಪ ಮಾಡ್ತಿದ್ರು. ಸಾಯುವಾಗಲು ಹೇ ರಾಮ್ ಅಂತ ಉಸಿರು ಚೆಲ್ಲಿದವರು. ರಾಮ ಎಲ್ಲರಿಗೂ ಬೇಕಿರೋನು. ರಾಮನ ವಿರೋಧಿಗಳು ಯಾರು ಇಲ್ಲ.ʼʼ ಎಂದು ಇತಿಹಾಸವನ್ನು ನೆನಪಿಸಿದರು.

ಅಯೋಧ್ಯೆಯಲ್ಲಿ ಇನ್ನೂ ವಿಗ್ರಹವೇ ಪ್ರತಿಷ್ಠಾಪನೆ ಆಗಿಲ್ಲ!

ʻʻನಮ್ಮೂರಿನಲ್ಲಿ ಅನೇಕ ರಾಮನ ದೇವಸ್ಥಾನಗಳಿವೆ. ಅದಕ್ಕೆ ಇತಿಹಾಸವೂ ಇದೆ. ವಿಗ್ರಹಗಳಿಗೂ ಎಷ್ಟೋ ದಶಕಗಳ ಇತಿಹಾಸ ಇರುತ್ತದೆ. ಚಿಕ್ಕ ವಯಸ್ಸಿನಲ್ಲಿ ಅದಕ್ಕೆ ಭಕ್ತಿ ಪೂರ್ವಕವಾಗಿ ನಾವು ನಡೆದುಕೊಂಡಿದ್ದೀವಿ. ಅಲ್ಲಿ ಪೂಜೆ ಮಾಡಿದ್ರೆ, ರಾಮ ನಮಗೆ ಒಲಿತಾನೆ ಅನ್ಕೊಂಡಿದ್ದೇವೆ. ಅಯೋಧ್ಯೆಗೆ ಹೋಗಿಯೇ ರಾಮನ ಪೂಜೆ ಮಾಡಬೇಕಾ…?ʼʼ ಎಂದು ಪ್ರಶ್ನಿಸಿದ್ದಾರೆ ರಾಜಣ್ಣ.

ʻʻಅಯೋಧ್ಯೆಯಲ್ಲಿ ಇನ್ನೂ ರಾಮನ ಮೂರ್ತಿಯ ಪ್ರತಿಷ್ಠಾಪನೆಯೇ ಆಗಿಲ್ಲ. ನಮ್ಮಲ್ಲಿ ಶತಮಾನಗಳ ಹಳೆಯ ರಾಮನ ವಿಗ್ರಹಗಳಿವೆ. ಬಹುತೇಕ ಹಳ್ಳಿಗಳಲ್ಲಿ ಆಂಜನೇಯನ ಹಾಗೂ ರಾಮನ ದೇವಾಲಯಗಳು ಇದ್ದೇ ಇವೆ. ನಮ್ಮ ನಮ್ಮ ನಂಬಿಕೆ ಭಕ್ತಿಯ ಅನುಸಾರವಾಗಿ ಪೂಜೆ ಮಾಡಿ ಆಶೀರ್ವಾದ ಪಡೆಯುತ್ತೇವೆ. ಈಗ ಮೋದಿ‌ ಹೋಗಿ ಅಲ್ಲಿ ರಾಮನ ಪ್ರತಿಷ್ಠಾಪನೆ ಮಾಡಿದ ತಕ್ಷಣ ನಾವೆಲ್ಲರೂ ಈ ರಾಮನನ್ನು ಬಿಟ್ಟು ಆ ರಾಮನನ್ನು ಹಿಡಿದುಕೊಳ್ಳುವುದಕ್ಕೆ ಆಗುತ್ತದಾ? ನಮ್ಮ ಊರಿನಲ್ಲಿರುವ ದೇವರು ತಾನೇ ನಮಗೆ ಮೊದಲು?ʼʼ ಎಂದು ರಾಜಣ್ಣ ಕೇಳಿದ್ದಾರೆ.

ʻʻಅಯೋಧ್ಯೆ ರಾಮನ ಜನ್ಮಸ್ಥಳ ಅಂತಾ ಇತಿಹಾಸದಲ್ಲಿ ಬಂದಿದೆ. ಅದಕ್ಕೆ ಆದಂತಹ ಗೌರವಗಳು ಇರುತ್ತವೆ. ಆದರೆ ಈ ರೀತಿಯ ವಿಚಾರ ರಾಜಕೀಯಕ್ಕೆ ಬಳಸುವುದು ಸರಿಯಲ್ಲ. ಈಗ ರಾಮನ ದೇವಾಲಯ ಉದ್ಘಾಟನೆ ಆಗಲಿದೆ. ನಾವೂ ಬಹಳ ಸಂತೋಷಪಡುತ್ತೇವೆ. ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲʼʼ ಎಂದು ರಾಜಣ್ಣ ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಗಳಿಗೇ ಆಹ್ವಾನ ಕೊಟ್ಟಿಲ್ಲ. ಇನ್ನು ನಮಗೆ ಕೊಡ್ತಾರಾ?

ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗೇ ಆಹ್ವಾನವಿಲ್ಲ, ಇನ್ನೂ ನಮಗೆ ಕೊಡ್ತಾರಾ ಎಂದು ಪ್ರಶ್ನಿಸಿದರು.

ʻʻಬೇಕಿದ್ರೆ ಇದು ಬಿಜೆಪಿಯವರ ಶ್ರೀರಾಮ ಅಂತಾ ಬರೆದುಕೊಳ್ಳಲಿ ನಮ್ಮದೇನು ಅಡ್ಡಿಯಿಲ್ಲ. ಶ್ರೀರಾಮ ಎಲ್ಲರಿಗೂ ಸೇರಿದವನು, ಇವರೊಬ್ಬರಿಗೆ ಮಾತ್ರವಲ್ಲ. ಅವರು ವಿರೋಧ ಮಾಡಿದ್ರು ಹಾಗಾಗಿ ಅವರನ್ನು ಕರೆಯಲ್ಲ ಎನ್ನೋದಾದ್ರೆ ಅವರದ್ದೆ ಅಂತಾ ಬರೆದುಕೊಳ್ಳಲಿʼʼ ಎಂದು ಹೇಳಿದರು.

ಅಯೋಧ್ಯೆಯಲ್ಲಿ ವಾಲ್ಮೀಕಿ ದೇವಸ್ಥಾನವನ್ನೂ ಕಟ್ಟಲಿ ಎಂದ ರಾಜಣ್ಣ

ʻʻಶ್ರೀರಾಮನನ್ನು ಇಡೀ ಪ್ರಪಂಚಕ್ಕೆ,, ಭೂ ಮಂಡಲಕ್ಕೆ ಪರಿಚಯಿಸಿದ್ದು ವಾಲ್ಮೀಕಿ. ವಾಲ್ಮೀಕಿ ರಾಮಾಯಣವನ್ನು ಬರೆಯದೇ ಇದ್ದರೇ ಶ್ರೀರಾಮ ಪರಿಚಯವಾಗುತ್ತಿರಲಿಲ್ಲ. ಆದರೆ, ವಾಲ್ಮೀಕಿಯ ದೇವಸ್ಥಾನ ಎಲ್ಲೂ ಇಲ್ಲ. ಅಯೋಧ್ಯೆಯಲ್ಲಿ ವಾಲ್ಮೀಕಿ ದೇವಸ್ಥಾನವನ್ನು ಶ್ರೀರಾಮನ ದೇವಸ್ಥಾನದಂತೆಯೇ ಕಟ್ಟಬೇಕೆಂದು ಒತ್ತಾಯ ಇದೆ. ಮೋದಿಯವರಿಗೆ ಒತ್ತಾಯ ಮಾಡ್ತೇವೆ. ಇದಕ್ಕೆ ಸ್ಪಂದಿಸದೆ ಇದ್ದರೆ ಇಡೀ ದೇಶದಲ್ಲಿ ಹೋರಾಟ ಮಾಡಲಾಗುವುದುʼʼ ಎಂದು ತುಮಕೂರಿನಲ್ಲಿ ಸಚಿವ ಕೆಎನ್ ರಾಜಣ್ಣ ಹೇಳಿದರು.

Exit mobile version