ತುಮಕೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ (Road Accident) ಸಂಭವಿಸಿದೆ. ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಸ್ಥಿತಿ ಗಂಭೀರವಾಗಿದೆ. ತುಮಕೂರು (Tumkur News) ಜಿಲ್ಲೆಯ ಪಾವಗಡ ತಾಲೂಕಿನ ಕೋಟಗುಡ್ಡ ಗ್ರಾಮದಲ್ಲಿ ಅಪಘಾತ ನಡೆದಿದೆ.
ಖಾಸಗಿ ಬಸ್ ಪಾವಗಡದಿಂದ ಚಿತ್ರದುರ್ಗದ ಕಡೆ ಹೋಗುತ್ತಿತ್ತು. ಕೆಎಸ್‌ಆರ್‌ಟಿಸಿ ಬಸ್ ಚಳ್ಳಕೆರೆಯಿಂದ ಪಾವಗಡ ಕಡೆ ಬರುತ್ತಿತ್ತು. ಕೋಟಗುಡ್ಡ ಗ್ರಾಮದಲ್ಲಿ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿದೆ. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್‌ನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿ, ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀರಿ ಪರಿಶೀಲನೆ ನಡೆಸಿದ್ದು, ರಸ್ತೆಗೆ ಅಡ್ಡಲಾಗಿದ್ದ ಬಸ್‌ಗಳನ್ನು ತೆರವು ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
ಡಿವೈಡರ್ ಏರಿದ ಗೂಡ್ಸ್ ಲಾರಿ
ವಿಜಯನಗರ: ಗೂಡ್ಸ್ ಲಾರಿಯೊಂದು (Lorry Accident) ಡಿವೈಡರ್‌ಗೆ ಡಿಕ್ಕಿ ಹೊಡೆದು ಸಂಪೂರ್ಣ ಜಖಂಗೊಂಡ ಘಟನೆ ವಿಜಯನಗರ (Vijayanagar News) ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾಳೆಮ್ಮನ ಗುಡಿ ಬಳಿ ನಡೆದಿದೆ. ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲಾರಿಯು ಕಮಲಾಪುರದಿಂದ ಹೊಸಪೇಟೆಗೆ ಆಗಮಿಸುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿದೆ. ಡಿವೈಡರ್ ಹಾಗೂ ಲಾರಿ ನಜ್ಜು, ಗುಜ್ಜಾಗಿದೆ. ಹಂಪಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಡಿವೈಡರ್‌ಗೆ ಲಾರಿ ಡಿಕ್ಕಿ
ಇದನ್ನೂ ಓದಿ: Uber Auto Fare : ಟಿನ್ ಫ್ಯಾಕ್ಟರಿಯಿಂದ ಉಬರ್ ಆಟೋ ಹತ್ತಿದವನಿಗೆ 1 ಕೋಟಿ ರೂ. ಚಾರ್ಜ್!
ಹಾವೇರಿಯಲ್ಲಿ ಭೀಕರ ಅಪಘಾತ; ಮೂವರ ದುರ್ಮರಣ, ಮಹೀಂದ್ರ ಪಿಕಪ್‌ನಲ್ಲಿದ್ದ 20 ಕುರಿಗಳ ಸಾವು
ಹಾವೇರಿಯ ವರದಾಹಳ್ಳಿ ಬಳಿ ಮಂಗಳವಾರ ನಡೆದ ಭೀಕರ ಅಪಘಾತದಲ್ಲಿ ಮೂವರು ದುರ್ಮರಣ ಹೊಂದಿ, ನಾಲ್ವರು ಗಾಯಗೊಂಡಿದ್ದಾರೆ. ಕ್ಯಾಂಟರ್ ಮತ್ತು ಕುರಿಗಳನ್ನು ಸಾಗಿಸುತ್ತಿದ್ದ ಮಹೀಂದ್ರ ಪಿಕಪ್ ನಡುವೆ ಡಿಕ್ಕಿಯಾಗಿ ಮೂವರು ಕೊನೆಯುಸಿರೆಳೆದಿದ್ದರೆ, ಮಹೀಂದ್ರ ಪಿಕಪ್‌ನಲ್ಲಿ 20 ಕುರಿಗಳೂ ಮೃತಪಟ್ಟಿವೆ.
ಕಾಕೋಳ ಗ್ರಾಮದ ಮೈಲಾರಪ್ಪ ಕೈದಾಳಿ (40), ಗುಡ್ಡಪ್ಪ ಕೈದಾಳಿ (35), ಶಿವಕುಮಾರ್ ಹೊಳಿಯಪ್ಪನವರ ಮೃತರು. ಹುಬ್ಬಳ್ಳಿಯಿಂದ ಹಾವೇರಿಗೆ ಬರುತ್ತಿದ್ದಾಗ ಭೀಕರ ಅಪಘಾತ ನಡೆದಿದೆ. ಬೆಳಗಾವಿ ಜಿಲ್ಲೆ ಕೇರೂರು ಗ್ರಾಮಕ್ಕೆ ಕುರಿ ತರಲು ಕುರಿಗಾಹಿಗಳು ಹೋಗಿದ್ದರು. ಅಪಘಾತದಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹೆದ್ದಾರಿ ದಾಟುತ್ತಿದ್ದಾಗ ಕ್ಯಾಂಟರ್ ಡಿಕ್ಕಿಯಾಗಿ ವೃದ್ಧೆ ಸಾವು
ಬಾಗಲಕೋಟೆ: ರಾಷ್ಟ್ರೀಯ ಹೆದ್ದಾರಿ-50ರಲ್ಲಿ ರಸ್ತೆ ದಾಟುತ್ತಿದ್ದಾಗ ಕ್ಯಾಂಟರ್ ಡಿಕ್ಕಿಯಾಗಿ ವೃದ್ಧೆ ಸ್ಥಳದಲ್ಲಿಯೇ ಮೃತಪಟ್ಟಿರುವುದು ಇಳಕಲ್ ಬಳಿ ನಡೆದಿದೆ. ಇಳಕಲ್ ನಿವಾಸಿ ದುರ್ಗಮ್ಮ ಬಾರಿಗಿಡದ (80) ಮೃತರು.
ಇತ್ತೀಚೆಗೆ ಇದೇ ಸ್ಥಳದಲ್ಲೇ ಗರ್ಭಿಣಿ ಮೃತಪಟ್ಟಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ