Site icon Vistara News

Road Accident: ಬೈಕ್‌ಗಳ ಅಪಘಾತ; ಮಗನ ಕಣ್ಣೆದುರೇ ರಕ್ತಕಾರಿ ತಾಯಿ ಮೃತ್ಯು; ಮೂವರು ಗಂಭೀರ

road Accident

ತುಮಕೂರು: ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಓರ್ವ ಮಹಿಳೆ (Road Accident) ಮೃತಪಟ್ಟಿದ್ದಾರೆ. ತುಮಕೂರಿನ ಮಧುಗಿರಿ ತಾಲೂಕಿನ ಪುರವರ ಗ್ರಾಮದ ಹೊರವಲಯದ ಜಯಮಂಗಲಿ ನದಿ ಸೇತುವೆ ಬಳಿ ಘಟನೆ ನಡೆದಿದೆ. ಜೋಗೆನಹಳ್ಳಿ ಗ್ರಾಮದ ಹನುಮಕ್ಕ (45) ಮೃತ ದುರ್ದೈವಿ.

ಪುರವರದಿಂದ ಜೋಗೆನಹಳ್ಳಿಗೆ ಬರುವಾಗ ಈ ಅಪಘಾತ ಸಂಭವಿಸಿದೆ. ಹನುಮಕ್ಕಳ ಮಗನಿಗೂ (25) ಗಂಭೀರ ಗಾಯವಾಗಿದೆ. ಮತ್ತೊಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಉಪ್ಪಾರಹಳ್ಳಿ ಗ್ರಾಮದ ಹನುಮಂತ ರೆಡ್ಡಿ (65), ಗಂಗಾಧರಪ್ಪ (67) ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕೊಡಿಗೇನಹಳ್ಳಿ ಪೊಲೀಸರು ಮೃತದೇಹವನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಾಟರ್ ಟ್ಯಾಂಕರ್ ಚಾಲಕನ ಅಜಾಗರೂಕತೆಗೆ ಪಾದಚಾರಿ ಬಲಿ

ಬೆಂಗಳೂರಲ್ಲಿ ವಾಟರ್ ಟ್ಯಾಂಕರ್ ಚಾಲಕನ ಅಜಾಗರೂಕತೆಗೆ ಪಾದಚಾರಿಯೊಬ್ಬರು ಬಲಿಯಾಗಿದ್ದಾರೆ. ರವಿ (41) ಮೃತ ದುರ್ದೈವಿ. ಹೆಬ್ಬಾಳ ಸಂಚಾರ ಠಾಣಾ ವ್ಯಾಪ್ತಿಯ ಅಮೃತಹಳ್ಳಿ 6ನೇ ರಸ್ತೆಯಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ಅಮೃತಹಳ್ಳಿ ಸೊಣ್ಣಪ್ಪ ಲೇಔಟ್ ರಸ್ತೆಯಿಂದ ನಡೆದುಕೊಂಡು ಬರುತ್ತಿದ್ದಾಗ, ರಿವರ್ಸ್ ಚಾಲನೆ ಮಾಡಿಕೊಂಡು ಬಂದ ಚಾಲಕ ಭಾಷ, ರವಿ ಮೇಲೆ‌ ಟ್ಯಾಂಕರ್‌ ಹತ್ತಿಸಿದ್ದಾನೆ.

ಪರಿಣಾಮ ತೊಡೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ರವಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ರವಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯ ಚಾಲಕ ಭಾಷನನ್ನು ಹೆಬ್ಬಾಳ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Bank fraud: ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ‌ ಹಗರಣ! 54 ಸಾವಿರ ಕೋಟಿ ರೂ. ಗುಳುಂ; ಮ್ಯಾನೇಜರ್ ಸಾವಿಂದ ಹೊರಬಂತು ಅವ್ಯವಹಾರ!

ಗಂಡ-ಹೆಂಡಿರ ಜಗಳ ಪೊಲೀಸ್ ಸ್ಟೇಷನ್ ಗ್ಲಾಸ್ ಪೀಸ್ ಪೀಸ್ ಆಗುವ ತನಕ!

ಬೆಂಗಳೂರು: ಗಂಡ – ಹೆಂಡತಿ ಜಗಳ (Couples Fight) ಉಂಡು ಮಲಗುವ ತನಕ ಎಂಬುದು ಹಳೇ ಗಾಧೆ. ಈಗ ಲೇಟೆಸ್ಟ್‌ ಗಾಧೆಯೊಂದು ಬಂದಿದೆ. “ಗಂಡ-ಹೆಂಡಿರ ಜಗಳ ಪೊಲೀಸ್ ಸ್ಟೇಷನ್ (Police Station) ಗ್ಲಾಸ್ ಪೀಸ್ ಪೀಸ್ ಆಗುವ ತನಕ!” ಎಂದು ಮಾರ್ಪಾಟು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ನಾಲ್ಕು ಗೋಡೆಗಳ ಮಧ್ಯೆ ಇರಬೇಕಿದ್ದ ಜಗಳ ಬೀದಿಗೆ ಬಂದಿದ್ದಲ್ಲದೆ, ಪೊಲೀಸ್‌ ಠಾಣೆ ಮೆಟ್ಟಿಲನ್ನೂ ಏರಿತ್ತು. ಪತ್ನಿ ಮನೆಯವರನ್ನು ಠಾಣೆಗೆ ಕರೆಸಿದ್ದ ಆರೋಪಿ ಅಲ್ಲಿಯೂ ಜಗಳ ತೆಗೆದಿದ್ದ, ಕೊನೆಗೆ ಸಿಟ್ಟು ನೆತ್ತಿಗೇರಿ ಠಾಣೆಯ ಮುಂಭಾಗದ ಬಾಗಿಲ ಗ್ಲಾಸ್‌ಗಳಿಗೆ ಕೈಯಿಂದ ಗುದ್ದಿ ಒಡೆದು ಹಾಕಿದ್ದಾನೆ.

ಜಯನಗರದ ಶ್ರೀಧರ್ ಎಂಬಾತನೇ ಪೊಲೀಸ್‌ ಠಾಣೆಯ ಗಾಜಿನ ಬಾಗಿಲನ್ನು ಒಡೆದು ಹಾಕಿದ ಆರೋಪಿಯಾಗಿದ್ದಾನೆ. ಪತಿ ಹಾಗೂ ಪತ್ನಿಯ ಜಗಳದಿಂದ ಈಗ ಸಾರ್ವಜನಿಕ ಆಸ್ತಿ ನಷ್ಟವಾಗುವಂತೆ ಆಗಿದೆ. ಅಲ್ಲದೆ, ಪತ್ನಿ ಹಾಗೂ ಆಕೆಯ ಮನೆಯವರ ಮೇಲೆ ಕಂಪ್ಲೇಂಟ್‌ ಕೊಡಲು ಬಂದಾತ ಸಿಟ್ಟಿನಿಂದ ಮಾಡಿಕೊಂಡ ಅವಾಂತರದಿಂದ ತನ್ನ ಮೇಲೆಯೇ ಕೇಸ್‌ ಹಾಕಿಸಿಕೊಂಡಂತೆ ಆಗಿದೆ.

ಇದನ್ನೂ ಓದಿ: Rave party: ಬೆಂಗಳೂರು ರೇವ್‌ ಪಾರ್ಟಿ ಕೇಸ್‌; ಬಿಲ್ಡಪ್‌ ಕೊಡಲು ಹೋಗಿ ಲಾಕ್‌ ಆದ ತೆಲುಗು ನಟಿ ಹೇಮಾ!

ಜಯನಗರದ ಶ್ರೀಧರ್ ಎಂಬಾತ ಕಳೆದ ಎರಡು ವರ್ಷಗಳ ಹಿಂದೆ ಅರ್ಚನಾ ಎಂಬಾಕೆ ಮದುವೆಯಾಗಿದ್ದ. ಮಗುವಾದ ನಂತರ ಪತ್ನಿ ಅರ್ಚನಾ ಅವರು ಪತಿ ಶ್ರೀಧರ್ ಮನೆಗೆ ಬಾರದೇ ತಂದೆ ಮನೆಯಾದ ಮಾರೇನಹಳ್ಳಿಯಲ್ಲಿಯೇ ಉಳಿದುಕೊಂಡಿದ್ದರು. ಶ್ರೀಧರ್‌ ಎಷ್ಟೇ ಕರೆದರೂ ಮನೆಗೆ ಬರಲು ಒಪ್ಪಲಿಲ್ಲ. ಈ ಬಗ್ಗೆ ಠಾಣೆಗೆ ದೂರು ನೀಡಲು ಜಯನಗರ ಪೊಲೀಸ್‌ ಠಾಣೆಗೆ ಶ್ರೀಧರ್ ಬಂದಿದ್ದ.

ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ದೂರು ನೀಡಬೇಕು. ಮಗುವಾದ ಮೇಲೆ ಪತ್ನಿಯು ತವರು ಮನೆಯಿಂದ ವಾಪಸ್‌ ಬರುತ್ತಿಲ್ಲ. ನೀವೇ ನನಗೆ ನ್ಯಾಯ ಕೊಡಿ ಎಂದು ಪೊಲೀಸರಿಗೆ ಕೇಳಿಕೊಂಡಿದ್ದ. ಹೀಗಾಗಿ ನಾನು ದೂರು ಕೊಡುತ್ತೇನೆ ಎಂದು ಹೇಳಿದ್ದ. ಆಗ ಪೊಲೀಸರು ಸಹ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿದರಾಯಿತು ಎಂದು ಶ್ರೀಧರ ಪತ್ನಿಯ ಕುಟುಂಬಸ್ಥರನ್ನು ಠಾಣೆಗೆ ಕರೆಸಿದ್ದರು. ಮೊದಲು ಮಾತನಾಡಿಕೊಂಡು ಎಲ್ಲವನ್ನೂ ಬಗೆಹರಿಸಿಕೊಳ್ಳಿ. ಕುಟುಂಬ ಎಂದ ಮೇಲೆ ಮಾತುಗಳು ಬರುತ್ತವೆ, ಹೋಗುತ್ತವೆ. ಎಲ್ಲರೂ ಅನುಸರಿಸಿಕೊಂಡು ಹೋಗಬೇಕು ಎಂಬ ಕಿವಿ ಮಾತನ್ನೂ ಪೊಲೀಸರು ನೀಡಿದ್ದಾರೆ.

ಶ್ರೀಧರ್‌ ಮೇಲೆ ಎಫ್‌ಐಆರ್‌

ಈ ವೇಳೆ ಮಾತುಕತೆ ಮಾಡುತ್ತಿದ್ದ ವೇಳೆ ಶ್ರೀಧರ್‌ಗೂ ಹಾಗೂ ಆತನ ಪತ್ನಿಯ ಮನೆಯವರಿಗೂ ಜಗಳ ಶುರುವಾಗಿದೆ. ಶ್ರೀಧರ್‌ಗೆ ತನ್ನ ಕೋಪವನ್ನು ನಿಯಂತ್ರಣ ಮಾಡಿಕೊಳ್ಳಲು ಆಗಿಲ್ಲ. ಹಾಗಾಗಿ ಗಲಾಟೆ ಭರದಲ್ಲಿ ಅಲ್ಲಿಯೇ ಇದ್ದ ಬಾಗಿಲ ಗ್ಲಾಸ್‌ಗಳಿಗೆ ಕೈಯಿಂದಲೇ ಬಲವಾಗಿ ಗುದ್ದಿದ್ದಾನೆ. ಆಗ ಗ್ಲಾಸ್‌ಗಳು ಪೀಸ್‌ ಪೀಸ್‌ ಆಗಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ತಿ ಹಾನಿ ಮಾಡಿದ ಕೇಸ್‌ ಅಡಿ ಶ್ರೀಧರ್‌ ಮೇಲೆ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version