ತುಮಕೂರು: ಇಂಡಿಕಾ ಕಾರು ಹಾಗೂ ಬೈಕ್ ನಡುವೆ ಅಪಘಾತ (Road Accident) ಸಂಭವಿಸಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟರೆ, ಒಂದು ವರ್ಷದ ಮಗು ಹಾಗೂ ತಾಯಿಗೆ ಗಂಭೀರ ಗಾಯಗೊಂಡಿದ್ದಾರೆ. ನಾಗೇಶ್ (60) ಮೃತ ದುರ್ದೈವಿ. ತುಮಕೂರು ಹೊರವಲಯದ ಮಲ್ಲಸಂದ್ರ ಬಳಿಯ ಕೆಎಂಎಫ್ ಡೈರಿ ಸಮೀಪ ಅಪಘಾತ ನಡೆದಿದೆ.
ಚನ್ನರಾಯನಪಟ್ಟಣ ತಾಲೂಕಿನ ಅಣತಿಕೋಡಿಹಳ್ಳಿ ನಿವಾಸಿಯಾಗಿದ್ದ ನಾಗೇಶ್, ಮಂಗಳವಾರ ಬೆಳಗ್ಗೆ ಮಲ್ಲಸಂದ್ರದಲ್ಲಿದ್ದ ಮಗಳ ಮನೆಗೆ ಬಂದಿದ್ದರು. ಕಾಗ್ಗೇರೆ ಬಳಿಯಿರುವ ದೇವಸ್ಥಾನದ ಕಾರ್ಯಕ್ರಮಕ್ಕೆ ಹೋಗಿ ಮನೆಗೆ ಹಿಂತಿರುವಾಗ ಅಪಘಾತ ನಡೆದಿದೆ.
ಇಂಡಿಕಾ ಕಾರು ಡಿಕ್ಕಿ ಹೊಡೆದು ಬೈಕ್‌ನಿಂದ ಕೆಳಗೆ ಬಿದ್ದ ನಾಗೇಶ್ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ನಾಗೇಶ್ ಅವರ ಮಗಳು ಸ್ವಾತಿ ಹಾಗೂ ಒಂದು ವರ್ಷದ ಮಗುವಿಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಾಳುವಿಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇತ್ತ ಅಪಘಾತದ ಬಳಿಕ ಕಾರು ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಬಳ್ಳಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗುಂಡಿಗಿಳಿದ ಬಸ್
ಚಾಲಕನ ನಿಯಂತ್ರಣ ತಪ್ಪಿದ ಬಸ್‌ವೊಂದು ರಸ್ತೆ ಬದಿಯ ಗುಂಡಿಗಿಳಿದಿದೆ. ಕೂದಲೆಳೆ ಅಂತರದಲ್ಲಿ ವಿದ್ಯಾರ್ಥಿಗಳು ಪಾರಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಅಂಕಮನಾಳ ಗ್ರಾಮ ಬಳಿ ಅಪಘಾತ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಜನ ಪ್ರಯಾಣಿಕರು ಸಂಡೂರಿನಿಂದ ಅಂಕಮನಾಳ ಗ್ರಾಮಕ್ಕೆ ತೆರಳುತ್ತಿದ್ದರು. ಬಸ್ಸಿಗೆ ಅದಿರು ತುಂಬಿದ ಲಾರಿ ಎದುರಿಗೆ ಬಂದಿದ್ದು, ಲಾರಿ ತಪ್ಪಿಸಲು ಹೋಗಿ ಬಸ್ ಗುಂಡಿಗಳಿದಿದೆ. ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಗುಂಡಿಯಿಂದ ಹೊರ ಬಾರದೆ ಬಸ್ ಲಾಕ್ ಆಗಿತ್ತು.
ಚಾಮರಾಜನಗರದಲ್ಲಿ ಗೂಡ್ಸ್ ಆಟೋ ಪಲ್ಟಿ
ಚಾಮರಾಜನಗರದ ಹೊನ್ನಳ್ಳಿ ಗ್ರಾಮದ ಸಮೀಪ ಗೂಡ್ಸ್ ಆಟೋ ಪಲ್ಟಿಯಾಗಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಹಿಳೆಯರು ಕೂಲಿ ಕೆಲಸಕ್ಕೆಂದು ಅಮಚವಾಡಿ ಗ್ರಾಮದಿಂದ ನಿಜಲಿಂಗನಪುರಕ್ಕೆ ಗೂಡ್ಸ್ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ ಹೊಡೆದಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಗಾಯಾಳುಗಳಿಗೆ ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ದಾವಣಗೆರೆಯಲ್ಲಿ ಬೈಕ್ ಹಾಗೂ ಕೆಎಸ್ಆರ್‌ಟಿಸ್ ನಡುವೆ ಅಪಘಾತ
ದಾವಣಗೆರೆ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಬಸ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದೆ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಬೈಕ್ ಸವಾರ ರಸ್ತೆ ದಾಟುವಾಗ ಏಕಾಏಕಿ ಬಂದ ಬಸ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ. ಕೆಎಸ್ಆರ್ಟಿಸಿ ಬಸ್ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಲಿಸುತ್ತಿದ್ದ ಬಸ್‌ನಿಂದ ಬಿದ್ದಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಸಾವು
ನಿನ್ನೆ ಸೋಮವಾರ ಚಲಿಸುತ್ತಿದ್ದ ಬಸ್‌ನಿಂದ ಬಿದ್ದ ವಿದ್ಯಾರ್ಥಿ ಹಿಂಬದಿ ಚಕ್ರಕ್ಕೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ. ಇದೀಗ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾನೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬನ್ನಿಹಟ್ಟಿ ಪಿ ಎ ಗ್ರಾಮದಲ್ಲಿ ಘಟನೆ ನಡೆದಿದೆ. ಸರ್ಕಾರಿ ಬಸ್ ಮೂಲಕ ಶಾಲೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿತ್ತು.
ಸಿಂದಗಿ ಪಟ್ಟಣದ ಎಚ್‌ಜಿ ಹೈಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಸಂದೀಪ ಶಿವಪ್ಪ ಗಿಡ್ಡನಗೋಳ ಮೃತ ದುರ್ದೈವಿ. ಗಂಭೀರ ಗಾಯಗೊಂಡಿದ್ದ ಸಂದೀಪ್‌ನನ್ನು ಸಿಂದಗಿ ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಮೃತಪಟ್ಟಿದ್ದಾನೆ. ಇತ್ತ ಈ ಘಟನೆ ಖಂಡಿಸಿ ಬನ್ನಿಹಟ್ಟಿ ಪಿ ಎ ಹಾಗೂ ಸಿಂದಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು. ವಿದ್ಯಾರ್ಥಿ ಸಾವಿನಿಂದ ಬನ್ನಿಹಟ್ಟಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ