Site icon Vistara News

Road Accident :ಬೈಕ್‌ ಪಲ್ಟಿ; ಸ್ನೇಹಿತನ ಮದುವೆ ಮುಗಿಸಿ ಬರುತ್ತಿದ್ದ ಪೊಲೀಸ್‌, ಇನ್ನೊಬ್ಬರು ಮೃತ್ಯು

Police constable and other died in Accident in tumkur

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕು ಸಿದ್ದರಬೆಟ್ಟ ಮಾರ್ಗದ ತಿರುವಿನಲ್ಲಿ ಸಂಭವಿಸಿದ ಅಪಘಾತದಲ್ಲಿ (Road Accident) ಪೊಲೀಸ್‌ ಕಾನ್‌ಸ್ಟೇಬಲ್‌ ಮತ್ತು ಇನ್ನೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ (Police Constable and other dead). ಕಡಿದಾದ ತಿರುವಿನಲ್ಲಿ ಬೈಕ್ ಆಯ ತಪ್ಪಿ ಬಿದ್ದು ದುರಂತ ಸಂಭವಿಸಿದೆ.

ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಮುಖ್ಯಪೇದೆ ಮಹೇಶ್ (27) ಮತ್ತು ಚಂದ್ರಯ್ಯ (35) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು. ಇವರ ಜತೆ ಇದ್ದ ಭರತ್ (22) ಎಂಬವರಿಗೂ ತೀವ್ರ ಗಾಯಗಳಾಗಿದ್ದು, ತುಮಕೂರಿನ ಆದಿತ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹೇಶ್‌ ಅವರು ತಮ್ಮ ಸ್ನೇಹಿತನ ಮದುವೆಗೆ ಹೋಗಿದ್ದರು. ಅಲ್ಲಿಂದ ಇತರ ಇಬ್ಬರೊಂದಿಗೆ ಬರುತ್ತಿದ್ದರು. ಈ ವೇಳೆ ಸಿದ್ಧರಬೆಟ್ಟದಿಂದ ಕೊರಟಗೆರೆಗೆ ಬರುವ ಮಾರ್ಗದಲ್ಲಿ ಬೈಕ್ ಅಪಘಾತ ಸಂಭವಿಸಿದೆ. ಅರಣ್ಯ ಇಲಾಖೆಯ ನರ್ಸರಿಯ ಸಮೀಪದ ರಸ್ತೆಯ ತಿರುವಿನಲ್ಲಿ ಬೈಕ್ ಆಯತಪ್ಪಿ ಪಲ್ಟಿಯಾಗಿದೆ. ಮೃತಪಟ್ಟ ಇಬ್ಬರೂ ಮಧುಗಿರಿ ತಾಲೂಕಿನ ಗರಣಿ ಗ್ರಾಮದವರು.

ಅಪಘಾತ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಕೆ.ವಿ ಭೇಟಿ ನೀಡಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ಗೆ ಗೂಡ್ಸ್‌ ಡಿಕ್ಕಿ; ಗೃಹ ಪ್ರವೇಶಕ್ಕೆ ಹೋಗಿದ್ದ ದಂಪತಿ ದಾರುಣ ಮೃತ್ಯು

ಬೆಂಗಳೂರು: ಬೆಂಗಳೂರಿನ ನೈಸ್‌ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ (Road Accident) ದಂಪತಿ ಮೃತಪಟ್ಟಿದ್ದಾರೆ (Couple dead in Accident). ನೈಸ್ ರಸ್ತೆಯ ವಜ್ರಮುನೇಶ್ವರ ಅಂಡರ್ ಪಾಸ್ ಬಳಿ ಬೈಕ್‌ಗೆ ಗೂಡ್ಸ್ ವಾಹನ ಡಿಕ್ಕಿ (Good vehicle hits bike) ಹೊಡೆದು ಸಂಭವಿಸಿದ ದುರಂತದಲ್ಲಿ ಅದೇ ಪ್ರದೇಶದ ಬೈಯಣ್ಣ (55) ಮತ್ತು ಅವರ ಪತ್ನಿ ನಿರ್ಮಲಾ(45) ಮೃತಪಟ್ಟಿದ್ದಾರೆ. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಘಟನೆ ನಡೆದಿದೆ. ದಂಪತಿ ಗೃಹ ಪ್ರವೇಶವೊಂದಕ್ಕೆ ಹೋಗಿ ಮರಳುತ್ತಿದ್ದರು ಎನ್ನಲಾಗಿದೆ.

Couple died in Bangalore Accident

ಬೈಯಣ್ಣ ಮತ್ತು ನಿರ್ಮಲಾ ಅವರು ಒಂದು ಗೃಹಪ್ರವೇಶಕ್ಕೆ ಹೋಗಿ ಮರಳುತ್ತಿದ್ದರು. ಆಗ ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್‌ ಗೂಡ್ಸ್‌ ವಾಹನ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಗೂಡ್ಸ್‌ ವಾಹನದ ಅತಿ ವೇಗವೇ ಈ ಘಟನೆಗೆ ಕಾರಣವೆಂದು ಹೇಳಲಾಗಿದೆ.

ಗೂಡ್ಸ್ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದಾಗ ಬೈಕ್‌ ಆಯತಪ್ಪಿ ಬಿದ್ದಿದೆ. ದಂಪತಿ ಕೂಡಾ ರಸ್ತೆಗೆ ಉರುಳಿಬಿದ್ದಿದ್ದು, ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಸಂಬಂಧ ತಲಘಟ್ಟಪುರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಅಪಘಾತದಲ್ಲಿ ಗಾಯಗೊಂಡವರು ಯಾರು ಎನ್ನುವುದು ಆರಂಭದಲ್ಲಿ ಗೊತ್ತಿರಲಿಲ್ಲ. ದಂಪತಿಗಳಲ್ಲಿ ಒಬ್ಬರ ಬ್ಯಾಗ್‌ ನಲ್ಲಿದ್ದ ಆಧಾರ್‌ ಕಾರ್ಡ್‌ನಲ್ಲಿ ವಿಳಾಸವನ್ನು ನೋಡಿ ಆ ಕ್ಷೇತ್ರದ ಶಾಸಕರಿಗೆ ಮಾಹಿತಿ ನೀಡಿದ್ದರು. ಶಾಸಕರು ಈ ದಂಪತಿಯ ಮನೆ ಇರುವ ಭಾಗವನ್ನು ಗುರುತಿಸಿ ಮನೆಗೆ ವಿಚಾರ ಮುಟ್ಟಿಸಿದರು ಎಂದು ಸಂಬಂಧಿಗಳು ತಿಳಿಸಿದ್ದಾರೆ.

ಬೈಯಣ್ಣ ಅವರು ಜಮೀನ್ದಾರರಾಗಿದ್ದು, ಸಾಕಷ್ಟು ಧರ್ಮ ಕಾರ್ಯಗಳಲ್ಲಿ ತೊಡಗಿದ್ದವರು. ಅವರಿಗೆ ಈ ಹಿಂದೆಯೂ ಎರಡು ಬಾರಿ ನೈಸ್‌ ರಸ್ತೆಯಲ್ಲೇ ಅಪಘಾತವಾಗಿತ್ತು. ಇದು ಮೂರನೇ ಬಾರಿ ಎಂದು ಮೃತರ ಸಂಬಂಧಿ ಗೋಪಾಲ್ ಹೇಳಿಕೆ ನೀಡಿದ್ದಾರೆ.

Exit mobile version