ತುಮಕೂರು: ಪಿಸ್ತೂಲ್‌ನಿಂದ ಫೈರ್ ಮಾಡಿ ಸುಲಿಗೆಗೆ ಯತ್ನಿಸಿದ ಜಾರ್ಖಂಡ್ ಮೂಲದ ಇಬ್ಬರು ಆರೋಪಿಗಳನ್ನು (Robbery Case) ಪೊಲೀಸರು ಬಂಧಿಸಿದ್ದಾರೆ. ಏಜಾಸ್ ಮಿರ್ದಹ (30), ಸಹಿಬುಲ್ ಅನ್ಸಾರಿ (30) ಬಂಧಿತ ಆರೋಪಿಗಳು.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಉರ್ಕೆಹಳ್ಳಿ ಗ್ರಾಮದಲ್ಲಿ ಗಂಗಣ್ಣ ಎಂಬುವರ ತೋಟದ ಮನೆಯಲ್ಲಿ ಸುಲಿಗೆಗೆ ಮುಂದಾಗಿದ್ದರು. ಕಳೆದ ಮಾ. 26ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುಡಿಯಲು ನೀರು ಕೇಳುವ ನೆಪದಲ್ಲಿ ಎಂಟ್ರಿ ಕೊಟ್ಟಿದ್ದರು.
ನೀರು ತರಲು ಹೋದಾಗ ಮನೆಯೊಳಗೆ ನುಗ್ಗಿ, ಹಣ ದೋಚಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳನ್ನು ಹಿಡಿಯಲು ಹೋದ ಮನೆ ಮಾಲೀಕ ಗಂಗಣ್ಣನ ಮೇಲೆ ಪಿಸ್ತೂಲ್‌ನಿಂದ ಫೈರ್ ಮಾಡಿ, ಎಸ್ಕೇಪ್ ಆಗಿದ್ದರು. ಈ ವೇಳೆ ಗಂಗಣ್ಣ ಕಾಲಿಗೆ ಪೆಟ್ಟಾಗಿತ್ತು.
ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದ ಕುಣಿಗಲ್ ಪೊಲೀಸರು, ದೂರು ದಾಖಲಿಸಿಕೊಂಡು ತನಿಖೆಗಿಳಿದಿದ್ದರು. ಸುಲಿಗೆ ಮಾಡಲು ಯತ್ನಿಸಿದ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಂದು ಬೈಕ್, ಎರಡು ಪಿಸ್ತೂಲ್, ನಾಲ್ಕು ಗುಂಡು ಹಾಗೂ ಒಂದು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಕುಣಿಗಲ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಬಂಧಿತರಾಗಿರುವ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: Assault Case : ಆಫೀಸ್‌ನಲ್ಲಿ ಟಾರ್ಚರ್ ಕೊಟ್ಟ ಮೇಲಾಧಿಕಾರಿಗೆ ಸುಪಾರಿ ಕೊಟ್ಟು ಹೊಡೆಸಿದ್ರು ಸಿಬ್ಬಂದಿ!
ನಿದ್ದೆಗೆ ಜಾರಿದ ಮಾಲೀಕನ ಕೈ-ಕಾಲು ಕಟ್ಟಿ, ಮನೆಯನ್ನೇ ಲೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್!
ಆನೇಕಲ್: ಉಂಡ ಮನೆಗೆ ಸೆಕ್ಯೂರಿಟಿ ಗಾರ್ಡ್‌ವೊಬ್ಬ ಕನ್ನ ಹಾಕಿ, ಪರಾರಿ ಆಗಿದ್ದಾನೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರದ ರಾಮರೆಡ್ಡಿ ಕಾಂಪ್ಲೆಕ್ಸ್ ಬಳಿ ಸೆಕ್ಯೂರಿಟಿ ಗಾರ್ಡ್‌ನಿಂದಲೇ ಮನೆ ದರೋಡೆ (Robbery Case ) ನಡೆದಿದೆ.
ಮಧುಸೂದನ್ ರೆಡ್ಡಿ ಎಂಬುವವರ ಮನೆಯಲ್ಲಿ 30 ಲಕ್ಷ ರೂ. ನಗದು, 250 ಗ್ರಾಂ ಚಿನ್ನ ದೋಚಿ ರೋಶನ್ ಎಂಬಾತ ಎಸ್ಕೇಪ್ ಆಗಿದ್ದಾನೆ. ಮಧುಸೂದನ್ ರೆಡ್ಡಿ ಒಂಟಿಯಾಗಿದ್ದನ್ನು ತಿಳಿದ ಮನೆಯ ಸೆಕ್ಯೂರಿಟಿ ಗಾರ್ಡ್ ರೋಶನ್, ರಾತ್ರಿ ತನ್ನ ನಾಲ್ವರು ಸ್ನೇಹಿತರನ್ನು ಕರೆಸಿಕೊಂಡಿದ್ದ. ಮೊದಲ ಮಹಡಿಯ ಹಿಂಬಾಗಿಲು ಮುರಿದು ಒಳನುಗ್ಗಿದ್ದಾರೆ. ನಂತರ ಒಂಟಿಯಾಗಿದ್ದ ಮಧುಸೂದನ್ ರೆಡ್ಡಿ ಅವರ ಕೈ-ಕಾಲು ಕಟ್ಟಿ ದರೋಡೆ ಮಾಡಿದ್ದಾರೆ.
ಕಳೆದ ಮೂರು ತಿಂಗಳಿಂದ ಪತ್ನಿ ಜತೆ ರೋಶನ್ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ. ಕಳೆದ ಎರಡು ದಿನಗಳ ಹಿಂದೆ ಸಂಪ್ ಕ್ಲೀನ್ ಮಾಡಲು ಓರ್ವ ಆರೋಪಿ ಬಂದಿದ್ದ.ತಡರಾತ್ರಿ ಸೆಕ್ಯೂರಿಟಿ ಗಾರ್ಡ್ ವಾಸವಿದ್ದ ಕೊಠಡಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಬಳಿಕ ಮನೆ ದೋಚಿ ರೋಶನ್ ಮತ್ತು ಆತನ ಗ್ಯಾಂಗ್ ಪರಾರಿಯಾಗಿದ್ದಾರೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: Kalaburagi News : ರೀಲ್ಸ್ ಶೋಕಿಗಾಗಿ ವೆಪನ್ ಹಿಡಿದು ಓಡಾಡುತ್ತಿದ್ದ ಯುವಕರು ಅರೆಸ್ಟ್
ಮಾಂಗಲ್ಯ ಸರ ಕದ್ದ ಅಮ್ಮ-ಮಗಳ ಬಂಧನ
ಮಾಂಗಲ್ಯದ ಸರ ಕದ್ದು ಎಸ್ಕೇಪ್ ಆಗಿದ್ದ ಇಬ್ಬರು ಕಳ್ಳಿಯರನ್ನು ಕಲಬುರಗಿಯ ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ತಾಯಿ ಹಸೀನಾ ತೋಹಿದ್ ಶೇಖ್, ಮಗಳು ಸಕೀನಾ ಬಂಧಿತ ಆರೋಪಿಗಳಾಗಿದ್ದಾರೆ. ಕಲಬುರಗಿಯ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಚಿನ್ನ ಕದ್ದು ಎಸ್ಕೇಪ್ ಆಗುತ್ತಿದ್ದರು.
ಆಳಂದ ತಾಲೂಕಿನ ಭೀಮಾಬಾಯಿ ಮಡ್ಡಿತೋಟ ಎಂಬುವರ 40 ಗ್ರಾಂ ಚಿನ್ನದ ಸರ ಕಳ್ಳತನ ಮಾಡಿದ್ದರು. ಭೀಮಾಬಾಯಿ ಕಲಬುರಗಿ ನಗರದಲ್ಲಿ ಸಂಬಂಧಿಕರ ಮದುವೆಗೆ ಆಗಮಿಸಿದ್ದರು. ಮದುವೆ ಮುಗಿಸಿಕೊಂಡು ವಾಪಸ್ ಊರಿಗೆ ಹೋಗಲು ಬಸ್ ಸ್ಟ್ಯಾಂಡ್‌ಗೆ ಆಗಮಿಸಿದ್ದರು. ಈ ವೇಳೆ ಹಸೀನಾ ಮತ್ತು ಶಕೀನಾ ಇಬ್ಬರು ಸೇರಿ ಮಾಂಗಲ್ಯದ ಸರ ಕದ್ದು ಎಸ್ಕೇಪ್ ಆಗಿದ್ದರು. ಅಮ್ಮ- ಮಗಳ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತಕ್ಷಣ ಕಾರ್ಯಾಚರಣೆಗಿಳಿದ ಅಶೋಕ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ