Site icon Vistara News

Self Harming: ಒಂದೇ ಕುಟುಂಬದ ಐವರ ಆತ್ಮಹತ್ಯೆ; ಪಕ್ಕದ್ಮನೆ ಗಂಡ-ಹೆಂಡ್ತಿ ಅರೆಸ್ಟ್

tumkur suicide arrest

ತುಮಕೂರು: ತುಮಕೂರಿನ (Tumkur suicide case) ಸದಾಶಿವ ನಗರದ ಒಂದೇ ಕುಟುಂಬದ ಐವರು ಆತ್ಮಹತ್ಯೆ (Five member family ends life) ಮಾಡಿಕೊಂಡ ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ (Two Neighbours Arrested). ಬಡ್ಡಿ ದಂಧೆಕೋರರಿಗೆ ಚಾಡಿ ಹೇಳಿ ಕಿರುಕುಳ (Self Harming) ಕೊಡಿಸಿದ್ದಾರೆ ಎನ್ನಲಾದ ಪಕ್ಕದ ಮನೆಯ ಆರೋಪಿಗಳಾದ ಖಲಂದರ್(45) ಪತ್ನಿ ಜರೀನಾ(38) ಬಂಧಿತರು.

ಸದಾಶಿವ ನಗರ ನಿವಾಸಿ ಗರೀಬ್ ಸಾಬ್ (32), ಪತ್ನಿ ಸುಮಯ್ಯ (30) ದಂಪತಿ ಡೆತ್‌ ನೋಟ್‌ (Death note) ಬರೆದಿಟ್ಟು, ತಮ್ಮ ಮೂವರು ಮಕ್ಕಳಾದ ಪುತ್ರಿ ಹಾಜಿರಾ (14), ಪುತ್ರರಾದ ಮೊಹಮ್ಮದ್‌ ಸುಭಾನ್‌ (10), ಮೊಹಮ್ಮದ್‌ ಮುನೀರ್‌ (8) ಅವರಿಗೆ ವಿಷ ಉಣಿಸಿ ತಾವು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಸಾವಿಗೆ ಪಕ್ಕದ ಮನೆಯವರು ಬಡ್ಡಿ ದಂಧೆಕೋರರ ಜತೆ ಸೇರಿ ನೀಡಿದ ಕಿರುಕುಳವೇ ಕಾರಣ ಎಂದು ಮೃತರು ಬರೆದಿಟ್ಟ ಡೆತ್‌ ನೋಟ್‌ ಮತ್ತು ವಿಡಿಯೊದಲ್ಲಿ ಹೇಳಲಾಗಿತ್ತು. ಹೀಗಾಗಿ ಪೊಲೀಸರು ಈ ದೂರಿನ ಆಧಾರದಲ್ಲಿ ಕ್ರಮ ಕೈಗೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಗರೀಬ್‌ ಸಾಬ್‌ ಮತ್ತು ಮಕ್ಕಳು

ಘಟನೆಗೆ ಸಂಬಂಧಿಸಿ ತುಮಕೂರಿನ ತಿಲಕ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಮೃತ ಗರೀಬ್‌ ಸಾಬ್‌ ಅವರ ಸಹೋದರ ಖಲಂದರ್‌ ಸಾಬ್‌ ಅವರು ನೀಡಿದ ದೂರಿನ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿ ಐಪಿಸಿ ಸೆಕ್ಷನ್ 302, 109, 34 ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ತುಮಕೂರಿನ ತಿಲಕ್‌ ಪಾರ್ಕ್‌ ಪೊಲೀಸ್‌ ಸ್ಟೇಷನ್‌ನಲ್ಲಿ ಸಲ್ಲಿಸಲಾದ ಎಫ್ಐಆರ್ ನಲ್ಲಿ ಬಡ್ಡಿ ದಂಧೆ ಹಾಗೂ ಕಿರುಕುಳ ಆರೋಪ ದಾಖಲಾಗಿದೆ. ಇದರಲ್ಲಿ ಪಕ್ಕದ ಮನೆಯವರಾದ ಖಲಂದರ್, ಜರೀನಾ, ಶಾಬಾಜ್, ಶಬಾನಾ, ಸಾನಿಯಾ ವಿರುದ್ಧ ದೂರು ಇದೆ. ಐಪಿಸಿ ಸೆಕ್ಷನ್ 305, 306, 34 ಅಡಿ ಎಫ್ಐಆರ್ ದಾಖಲಾಗಿದೆ. ಗರೀಬ್‌ ಸಾಬ್‌ನ ವಿಡಿಯೋ ಹೇಳಿಕೆ ಆಧರಿಸಿ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದರು.

ಇದೀಗ ಆರೋಪಿಗಳಾದ ಖಲಂದರ್(45) ಪತ್ನಿ ಜರೀನಾ(38) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.

ಗರೀಬ್‌ ಸಾಬ್ ಅವರು ಒಟ್ಟು ಐವರು ಆರೋಪಿಗಳ ಹೆಸರು ಡೆತ್ ನೋಟಲ್ಲಿ ಬರೆದಿದ್ದರಾದರೂ ಖಲಂದರ್‌ನ ಮಕ್ಕಳಾದ ಶಹಬಾಜ್, ಇಬ್ಬರು ಬಾಲಕಿಯರಿಗೆ ಕೋರ್ಟ್ ರಿಲೀಫ್ ನೀಡಿದೆ.

ಏನಿದು ಆತ್ಮಹತ್ಯೆ ಪ್ರಕರಣದ ಹಿನ್ನೆಲೆ?

ಗರೀಬ್‌ ಸಾಬ್‌ ಅವರು ಮಕ್ಕಳ ಶಿಕ್ಷಣಕ್ಕಾಗಿ‌ ಹಾಗೂ ವ್ಯವಹಾರಕ್ಕಾಗಿ ಸಾಲ ಮಾಡಿದ್ದರು. ಆದರೆ, ಕಬಾಬ್‌ ವ್ಯವಹಾರ ಸೋಲು ಕಂಡಿತ್ತು. ಹಣ ಹೊಂದಾಣಿಕೆಗೆ ಕಷ್ಟಪಡುತ್ತಿದ್ದರು. ಇದರ ನಡುವೆ, ಆರೋಪಿಗಳಾದ ಖಲಂದರ್, ಖಲಂದರ್ ಪುತ್ರಿ ಸಾನಿಯಾ, ಖಲಂದರ್ ಪುತ್ರ ಶಾಬಾಜ್, ಹಾಗೂ ಪಕ್ಕದ ಮನೆಯ ಶಬಾನಾ, ಶಬಾನಾ ಪುತ್ರಿ ಸಾನಿಯಾ ಅವರು ಸಾಲ ಕೊಟ್ಟವರ ಬಳಿ ಚಾಡಿ ಹೇಳಿ ಮಾನಸಿಕ ಕಿರುಕುಳ ಕೊಡಿಸಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಐವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ತಿಲಕ್ ಪಾರ್ಕ್ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಬಾಯ್‌ಫ್ರೆಂಡ್‌ ಮೊಬೈಲ್‌ ತೆರೆದಾಗ ಅವಳಿಗೆ ಕಂಡಿದ್ದು 13000 ಹುಡುಗಿಯರ ನಗ್ನಲೋಕ!

ಗರೀಬ್‌ ಸಾಬ್‌ ಡೆತ್‌ ನೋಟ್‌ನಲ್ಲಿ ಏನೇನಿದೆ?

ಮೃತ ಗರೀಬ್‌ ಸಾಬ್‌ ತನ್ನ ದೊಡ್ಡಮ್ಮನಿಗೆ ಬರೆದ ಡೆತ್​ನೋಟ್​ʼನಲ್ಲಿ ಹಲವಾರು ಅಂಶಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿರುವ ಪ್ರಮುಖಾಂಶಗಳು ಇಲ್ಲಿವೆ.

  1. ದೊಡ್ಡಮ್ಮನಿಗೆ ನಮಸ್ಕಾರಗಳು. ನಮಗೆ ಸಾಲ ಹೆಚ್ಚಾಗಿದ್ದು, ವ್ಯಾಪಾರದಲ್ಲಿ ಲಾಭ ಇಲ್ಲ. ಕೆಲಸಕ್ಕೆ ಹೋದರೆ ಹಣ ಬರ್ತಿಲ್ಲ. ಹೀಗಾಗಿ ಸಂಸಾರ ಮಾಡೋದು ಕಷ್ಟವಾಗಿದೆ ಮತ್ತು ಊಟ ಮಾಡೋಕು ಕಷ್ಟ ಆಗಿದೆ.
  2. ಊರಲ್ಲಿದ್ದಾಗ ಹೆಂಡತಿ ಅಣ್ಣ ಸಾದಿಕ್, ಹೆಂಡತಿಯ ತಂಗಿ ಯಾಸಿನ್ ನಮ್ಮ ಮೇಲೆ ವಿಷ ಕಾರಿದ್ರು. ಅದಕ್ಕೆ ನಾವು ಇಲ್ಲಿಗೆ ಬಂದೆವು. ಇಲ್ಲಿ ಸಾಲ ಕಟ್ಟೋದು ಹೆಚ್ಚಾಗಿದೆ.
  3. ಬಾಡಿಗೆ ಮನೆಗೆ ನಲವತ್ತೈದು ಸಾವಿರ ಅಡ್ವಾನ್ಸ್ ಕೊಟ್ಟಿದ್ದೀವಿ. ಮೂರು ತಿಂಗಳ ಬಾಡಿಗೆ ಕೊಡೋದು ಬಾಕಿಯಿದೆ. ಉಳಿದ ಹಣವನ್ನು ನಮ್ಮ ದೊಡ್ಡಮ್ಮನಿಗೆ ವಾಪಾಸ್ ಕೊಡಿ.
  4. ಮನೆ ವಸ್ತುಗಳನ್ನು ನೀವು ತಗೋಳಿ (ದೊಡ್ಡಮ್ಮನಿಗೆ ಹೇಳಿದ್ದು). ಹದಿನೈದು ಸಾವಿರ ರೂಪಾಯಿಯನ್ನು ಜರೀನಾ ಆಂಟಿಗೆ ಕೊಡಿ. ನಮ್ಮ ಬೈಕ್​ನ ನಮ್ಮ ಹಿರಿಯಣ್ಣ ಅಜಾಜ್​ಗೆ ಕೊಡಿ. ಅತ್ತಿಗೆ ಪರ್ವೀನ್ ಮತ್ತು ಅಣ್ಣನಿಗೆ ಫೋನ್ ಕೊಡಿ.
  5. ದೊಡ್ಡಮ್ಮ… ನೀವು ಬೇಕಾದ ವಸ್ತುಗಳನ್ನು ಇಟ್ಟುಕೊಳ್ಳಬಹುದು ಅಥವಾ ಮಾರಿಕೊಳ್ಳಬಹುದು.
  6. ತುಂಬಾ ವಿಷಯ ಇದೆ, ಆದರೆ ಇದ್ರಲ್ಲಿ ಬರೆಯೋಕಾಗಲ್ಲ. ಈ ಪತ್ರವನ್ನ ಪೊಲೀಸರಿಗೆ ತೋರಿಸಿ.
  7. ಸದಾಶಿವನಗರದ ಮೂರನೇ ಬಿ ಮುಖ್ಯರಸ್ತೆಯಲ್ಲಿರುವ, ನಾವು ವಾಸಿಸುವ ಮನೆಯ ಕೆಳಗಿನವರು ನಮಗೆ ತುಂಬಾ ಕಾಟ ಕೊಟ್ಟಿದ್ದಾರೆ. ನಮಗೆ ಯಾರಾದ್ರೂ ಸಹಾಯ ಮಾಡಿದ್ರೆ ಅವರಿಗೆ ಇಲ್ಲಸಲ್ಲದನ್ನ ಹೇಳ್ತಿದ್ರು. ನಾವು ಅವರು ಹೇಳಿದಂತೆ ಕೇಳಬೇಕಿತ್ತು, ಇಲ್ಲವಾದ್ರೆ ಅವರು ನಮ್ಮ ಜೊತೆ ಜಗಳ ಮಾಡ್ತಿದ್ರು.
  8. ಶಬಾನಾ ನಮಗೆ ಏಳು ತಿಂಗಳ ಹಣ ಕೊಟ್ಟಿರಲಿಲ್ಲ. ಹಣ ಕೇಳಿದ್ದಕ್ಕೆ ನಮ್ಮ ಮೇಲೆ ವಿಷ ಕಾರುತ್ತಿದ್ದಳು. ನಮ್ಮ ಸಾವಿಗೆ ನಮ್ಮ ಮನೆಯ ಕೆಳಗಿನ ಖಲಂದರ್, ಅವನ ಮಗಳು ಸಾನಿಯಾ, ಅವನ ಹಿರಿಯ ಮಗ, ಮಹಡಿ ಮನೆಯ ಶಬಾನಾ ಮತ್ತು ಅವಳ ಮಗಳು ಸಾನಿಯಾ ಎಲ್ಲರೂ ಕಾರಣ.
  9. ನಮ್ಮ ಸಾವಿಗೆ ಕಾರಣರಾದವರಿಗೆ ಗೃಹ ಮಂತ್ರಿ ಸರ್ ಕಾನೂನು ರೀತಿ ಶಿಕ್ಷೆ ಕೊಡಬೇಕು ಎಂದು ಬೇಡಿಕೊಳ್ತೀನಿ. ಇವರ ಕಾಟಕ್ಕೆ ನಮ್ಮ ಪ್ರಾಣ ಕೊಟ್ಟಿದ್ದೇವೆ. ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಕೈ ಮುಗಿದು ಕೇಳ್ಕೊತ್ತೀವಿ, ನಮ್ಮ ದೇಹವನ್ನು ಪೋಸ್ಟ್ ಮಾರ್ಟಮ್ ಮಾಡಬೇಡಿ. ಇನ್ನೂ ಹಲವು ವಿಷಯಗಳು ಫೋನ್​ನಲ್ಲಿವೆ.

Exit mobile version