ತುಮಕೂರು: ತುಮಕೂರಿನಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ. ಸಾಲಗಾರರ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಮಂಜುಳಾ (39) ಮೃತಳು.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಂಡಿನಶಿವರ ಗ್ರಾಮದಲ್ಲಿ ಘಟನೆ ನಡೆದಿದೆ.
ಮೈಕ್ರೋ ಫೈನಾನ್ಸ್ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸಾಲ ಪಡೆದಿದ್ದ ಮಂಜುಳಾ, ಸಾಲಗಾರರ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ದಂಡಿನಶಿವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಕೃಷ್ಣಾ ನದಿಗೆ ಹಾರಿದ ಯುವತಿಯ ಶವ ಪತ್ತೆ
ಕಳೆದ ಸಪ್ಟೆಂಬರ್ 14ರಂದು ಕೃಷ್ಣಾ ನದಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಬಳಿಯ ಸೇತುವೆ ಮೇಲಿಂದ ನದಿಗೆ ಹಾರಿದ್ದಳು. ನೆರೆಯ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಚಟ್ನಿಹಾಳ ಗ್ರಾಮದ ಬಾಲವ್ವ ಕಮರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಎರಡು ದಿನಗಳ ಕಾರ್ಯಾಚರಣೆ ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ನದಿಯಿಂದ ಯುವತಿ ಶವ ಹೊರ ತೆಗೆದಿದ್ದಾರೆ. ಯುವತಿ ಶವ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿಗೆ ಬಸ್ ಡಿಕ್ಕಿಯಾಗಿ ಚಾಲಕ ಸಾವು
ಕಾರಿಗೆ ಸರ್ಕಾರಿ ಬಸ್ ಡಿಕ್ಕಿಯಾಗಿ ಚಾಲಕನೊರ್ವ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಕನ್ನಡದ ಶಿರಸಿ-ಸಿದ್ದಾಪುರ ರಸ್ತೆಯ ಕಾನಗೋಡು ಗ್ರಾಮದ ಬಳಿ ನಡೆದಿದೆ. ಸಿದ್ದಾಪುರ ತಾಲ್ಲೂಕಿನ ಕೊಂಡ್ಲಿ ನಿವಾಸಿ ಚಂದ್ರಶೇಖರ ಬೆಲ್ಲದ್(55) ಮೃತ ದುರ್ದೈವಿ. ಕಾರಿನಲ್ಲಿದ್ದ ಚಂದ್ರಶೇಖರ್ ಅವರ ಪತ್ನಿ ಸುಜಾತಾ ಬೆಲ್ಲದ್‌ಗೂ ಗಾಯವಾಗಿದೆ. ದಂಪತಿ ತಮ್ಮ ಕಾರಿನಲ್ಲಿ ಸಿದ್ದಾಪುರದಿಂದ ಶಿರಸಿಗೆ ಹೊರಟಿದ್ದರು. ಬಸ್ ಶಿರಸಿಯಿಂದ ಸಾಗರಕ್ಕೆ ಹೊರಟಿದ್ದಾಗ ಕಾರಿಗೆ ಬಡಿದಿದೆ. ಪರಿಣಾಮ ಕಾರು ನಜ್ಜುಗುಜ್ಜಾಗಿದ್ದು, ಚಂದ್ರಶೇಖರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ