ಶಿರಾ: ಶ್ರಾವಣದ ಮೊದಲ ಶನಿವಾರದ ಅಂಗವಾಗಿ ಶಿರಾ ತಾಲೂಕಿನಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಬೆಳಗ್ಗಿನಿಂದಲೇ ದೇವಸ್ಥಾನಗಳಲ್ಲಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ (Shira News) ಪಡೆದರು.
ನಗರದ ಶ್ರೀ ಗವಿ ಆಂಜನೇಯ, ಬಯಲು ಆಂಜನೇಯ, ಪಂಚಮುಖಿ ದೇವಾಲಯ, ಶ್ರೀರಾಮ ದೇವಾಲಯ, ಬಾಲಾಜಿ ದೇವಸ್ಥಾನ ಸೇರಿದಂತೆ ತಾಲೂಕಿನ ಮೇಲುಕುಂಟೆ ನವನೀತ ಗೋಪಾಲಕೃಷ್ಣ ಸ್ವಾಮಿ ದೇವಾಲಯ, ಮರಡಿಗುಡ್ಡದ ಶ್ರೀರಂಗನಾಥ ಸ್ವಾಮಿ ದೇವಾಲಯ, ತಾವರೆಕೆರೆ ಬಂಡಿ ರಂಗನಾಥ ಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿತರಣೆ ನೆರವೇರಿದವು.
ವಿಶೇಷ ಪೂಜೆ, ಅಲಂಕಾರ
ನಗರದ ಶ್ರೀ ಗವಿ ಆಂಜನೇಯ, ಬಯಲು ಆಂಜನೇಯ, ಪಂಚಮುಖಿ ದೇವಾಲಯಗಳಲ್ಲಿ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ನೆರವೇರಿಸಲಾಯಿತು. ತಾಲೂಕಿನ ಮರಡಿಗುಡ್ಡದ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ದೇವರ ಉತ್ಸವ ಸೇರಿದಂತೆ ವಿಶೇಷ ಪೂಜೆ ಹಾಗೂ ದೇವರಿಗೆ ಹಣ್ಣಿನ ಅಲಂಕಾರ ಮತ್ತು ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು.
ತಾಲೂಕಿನ ಮೇಲುಕುಂಟೆ ನವನೀತ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರೀಗೋಪಾಲಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಮತ್ತು ಪ್ರಸಾದ ವಿನಿಯೋಗ ಮಾಡಲಾಯಿತು. ಸಾವಿರಾರು ಭಕ್ತಾದಿಗಳು ಅತ್ಯಂತ ಶ್ರದ್ಧಾ ಭಕ್ತಯಿಂದ ಪೂಜೆ ನೆರವೇರಿಸಿ, ಇಷ್ಟಾರ್ಥ ಸಿದ್ಧಿಗೆ ದೇವರನ್ನು ಪ್ರಾರ್ಥಿಸಿದರು.