ತುಮಕೂರು: ಭ್ರಷ್ಟ ಪೊಲೀಸ್ ಸಿಬ್ಬಂದಿಗೆ ತುಮಕೂರು ಎಸ್‌ಪಿ (Tumkur SP) ಸಿಂಹಸ್ವಪ್ನವಾಗಿದ್ದಾರೆ. ಒಂದೇ ದಿನ ಐವರು ಸಿಬ್ಬಂದಿಯನ್ನು ಅಮಾನತು ಮಾಡಿ (Suspension Order) ಎಸ್‌ಪಿ ಅಶೋಕ್ ಕೆ.ವಿ ಆದೇಶಿಸಿದ್ದಾರೆ. ಅಮಾನತಾಗಿರುವ ಸಿಬ್ಬಂದಿ ಕ್ರಿಮಿನಲ್‌ಗಳಿಗೆ ಪೊಲೀಸ್ ಇಲಾಖೆಯ ಮಾಹಿತಿ ಸೋರಿಕೆ ಮಾಡುತ್ತಿದ್ದರು ಎನ್ನಲಾಗಿದೆ.
ಕ್ಯಾತಸಂದ್ರ ಪೊಲೀಸ್ ಠಾಣೆಯ ಇಬ್ಬರು, ಜಯನಗರ ಠಾಣೆಯ ಓರ್ವ, ಟ್ರಾಫಿಕ್ ಠಾಣೆಯ ಕಾನ್‌ಸ್ಟೇಬಲ್, ಎಸ್‌ಪಿ ಕಚೇರಿಯ ಓರ್ವ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಕ್ಯಾತಸಂದ್ರ ಠಾಣೆಯ ಸಿಬ್ಬಂದಿ ಮಂಜು, ಅಹೋಬಲ ನರಸಿಂಹಮೂರ್ತಿ, ಜಯನಗರ ಠಾಣೆ ಸಿಬ್ಬಂದಿ ಮನು ಎಸ್.ಗೌಡ, ಟ್ರಾಫಿಕ್ ಪೊಲೀಸ್ ಠಾಣೆ ರಾಮಕೃಷ್ಣ ಹಾಗೂ ಎಸ್‌ಪಿ ಕಚೇರಿಯ ಸುರೇಶ್ ಅಮಾನತುಗೊಂಡವರು.
ಆರೋಪಿಗಳಾದ ಮಂಜುನಾಥ್ ರೆಡ್ಡಿ, ನವೀನ್, ನರಸಿಂಹ ಮೂರ್ತಿಗೆ ಈ ಐವರು ಮಾಹಿತಿ ಸೋರಿಕೆ ಮಾಡುತ್ತಿದ್ದರು. ಈ ಆರೋಪಿಗಳಿಗೆ ಠಾಣೆಯ ಪ್ರಕರಣಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಈ ಮೂವರು ಆರೋಪಿಗಳ ವಿರುದ್ಧ ದಂಡಿನಶಿವರ ಹಾಗೂ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೂವರ ವಿರುದ್ಧ ಕೊಲೆಗೆ ಸಂಚು, ಹಲ್ಲೆ ಆರೋಪದ ಮೇಲೆ ಕೇಸ್ ದಾಖಲಾಗಿತ್ತು. ವಾಟ್ಸ್ ಆ್ಯಪ್ ಮೂಲಕ ಆರೋಪಿಗಳಿಗೆ ಮಾಹಿತಿಯನ್ನು ರವಾನಿಸುತ್ತಿದ್ದರು. ಪ್ರಕರಣವೊಂದರಲ್ಲಿ ಮಂಜುನಾಥ್ ರೆಡ್ಡಿ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ