Site icon Vistara News

Theft case : ಚರಂಡಿಯೊಳಗೆ ಅಡಗಿ ಕುಳಿತ ರಕ್ತಚಂದನ ಸಾಗಾಟಗಾರರನ್ನು ಹಿಡಿದ ಅರಣ್ಯಾಧಿಕಾರಿಗಳು

Theft Case

ತುಮಕೂರು: ಅಕ್ರಮವಾಗಿ ರಕ್ತಚಂದನದ ತುಂಡುಗಳನ್ನು (Red sandalwood) ಸಾಗಾಟ ಮಾಡುತ್ತಿದ್ದ ಖದೀಮರು (Theft case) ಸಿಕ್ಕಿಬಿದ್ದಿದ್ದಾರೆ. ವಾಹನ ತಪಾಸಣೆ ವೇಳೆ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ರಕ್ತಚಂದನವನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತುಮಕೂರಿನ ಹಿರೇಹಳ್ಳಿ ಇಂಡಸ್ಟ್ರಿಯಲ್ ಏರಿಯಾ ಬಳಿ ಘಟನೆ ನಡೆದಿದೆ.

ಆಂಧ್ರದಿಂದ ತುಮಕೂರಿಗೆ ರಕ್ತಚಂದನವನ್ನು ಸಾಗಿಸಲಾಗುತ್ತಿತ್ತು. ವಾಹನ ತಪಾಸಣೆ ವೇಳೆ ಚಾಲಕ ಹಾಗೂ ಮತ್ತೊಬ್ಬ ಆರೋಪಿ ವಾಹನ ಬಿಟ್ಟು ಪರಾರಿಯಾಗಿದ್ದರು. ಆದರೂ ಬಿಡದೇ ಬೆನ್ನಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ‌ ಕೇಶವಮೂರ್ತಿ, ಚರಂಡಿಯಲ್ಲಿ ಅವಿತು ಕುಳಿತಿದ್ದ ಚಾಲಕ ಇಬ್ರಾಹಿಂನನ್ನು ಹಿಡಿದಿದ್ದಾರೆ.

ವಾಹನದಲ್ಲಿದ್ದ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸಿಎಫ್ ಮಹೇಶ್ ಮಾಲಗತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ತಚಂದನವನ್ನು ವಶಕ್ಕೆ ಪಡೆದು ತುಮಕೂರು ವಲಯ ಅರಣ್ಯ ಅಧಿಕಾರಿಗಳಿಂದ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: Self Harming : ಅನಾರೋಗ್ಯದಿಂದ ಬೇಸತ್ತು ಕ್ರಿಮಿನಾಶಕ ಸೇವಿಸಿ ದಂಪತಿ ಆತ್ಮಹತ್ಯೆ; ಸಾಲಗಾರರ ಕಾಟಕ್ಕೆ ಹೆದರಿ ವ್ಯಕ್ತಿ ನಾಪತ್ತೆ

ಬೆಂಗಳೂರಿನಲ್ಲಿ ಬೈಕ್‌ ಕಳ್ಳರ ಬಂಧನ

ಈ ಕಳ್ಳರಿಗೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನೇ ಟಾರ್ಗೇಟ್‌ ಮಾಡುತ್ತಿದ್ದರು. ಬೈಕ್‌ನ ಹ್ಯಾಂಡ್ ಲಾಕ್ ಮುರಿದು ಕ್ಷಣಾರ್ಧದಲ್ಲೇ ಎಗರಿಸಿ ಪರಾರಿ ಆಗುತ್ತಿದ್ದರು. ಇದೀಗ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನರಸಿಂಹ ಹಾಗೂ ದರ್ಶನ್ ಬಂಧಿತ ಆರೋಪಿಗಳಾಗಿದ್ದು, 20 ಲಕ್ಷ ಮೌಲ್ಯದ 16 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಖದೀಮರು ಮೋಜು ಮಸ್ತಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದರು. ಗಾಡಿ ಡಾಕ್ಯುಮೆಂಟ್ಸ್ ಕೇಳಿದರೆ ಲೋನ್ ಇದೆ, ಲೋನ್ ಕ್ಲಿಯರ್ ಅದ್ಮೇಲೆ ಗಾಡಿ ಡಾಕ್ಯುಮೆಂಟ್ಸ್ ಕೊಡುತ್ತಿವಿ ಅಂತಿದ್ದರು. ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ನಕಲಿ ಗನ್ ತೋರಿಸಿ ಮಾಂಗಲ್ಯ ಸರ ಎಗರಿಸಿದ್ದವನ ಸೆರೆ

ಪ್ಲಂಬರ್ ಎಂದು ಮನೆಗೆ ಬಂದಿದ್ದ ಆರೋಪಿ ನಕಲಿ ಗನ್ ತೋರಿಸಿ ಮಾಂಗಲ್ಯ ಸರ ಎಗರಿಸಿದ್ದ. ಇದೀಗ 73 ಗ್ರಾಂ ಚಿನ್ನದ ಸರ ಎಗರಿಸಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಹಿಳೆಯ ತಲೆಗೆ ಪಿಸ್ತೂಲ್‌ನ ಹಿಂಬದಿಯಿಂದ ಹೊಡೆದು, ಚಿನ್ನ ಕದ್ದು ಪರಾರಿ ಆಗಿದ್ದ. ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಹೊಯ್ಸಳ ವಾಹನದ ಪೊಲೀಸರು ಆರೋಪಿಯನ್ನು ಹಿಡಿದು, 5,50,000 ಮೌಲ್ಯದ ಚಿನ್ನದ ಸರ ಮತ್ತು ನಕಲಿ ಗನ್ ವಶಕ್ಕೆ ಪಡೆದಿದ್ದಾರೆ.

ಪಾರ್ಕ್‌ನಲ್ಲಿ ವಾಕ್‌ ಮಾಡುವವರೇ ಟಾರ್ಗೆಟ್‌

ಪಾರ್ಕ್‌ಗಳಲ್ಲಿ ವಾಕ್ ಮಾಡುವವರನ್ನೇ ಟಾರ್ಗೆಟ್ ಮಾಡುವ ಕಳ್ಳರು ಸ್ಕೂಟರ್‌ನಲ್ಲಿ ಬಂದು ಚಿನ್ನ ಕಿತ್ತು ಪರಾರಿ ಆಗುತ್ತಿದ್ದರು. ಇದೀಗ ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬರ 50ಗ್ರಾಂ ಚಿನ್ನ ಕದ್ದಿದ್ದ ಕಳ್ಳರನ್ನು ಬಂಧಿಸಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿ 2.40ಲಕ್ಷ ಮೌಲ್ಯದ 27 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version