ತುಮಕೂರು: ಮಹಿಳೆಯೊಬ್ಬಳು ಸಾಲ ತೀರಿಸಲಾಗದೆ ಅಕ್ಕನ ಮಗಳನ್ನೇ ಮಾರಾಟ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸುಜಾತ ಎಂಬಾಕೆ ಕೇವಲ 35 ಸಾವಿರ ರೂ. ಸಾಲದ ಬದಲಿಗೆ ಬಾಲಕಿಯನ್ನು ಜೀತಕ್ಕಾಗಿ ಮಾರಾಟ ಮಾಡಿದ್ದಳು. ಆಂಧ್ರದ ಹಿಂದೂಪುರದಲ್ಲಿ ಈ ಘಟನೆ ನಡೆದಿತ್ತು. ತುಮಕೂರು ನಗರದ (Tumkur News) ದಿಬ್ಬೂರು ನಿವಾಸಿಯಾದ ಚೌಡಮ್ಮ ಎಂಬುವರ ಪುತ್ರಿಯನ್ನು ಆಕೆ ತಂಗಿ ಸುಜಾತ ಮಾರಾಟ ಮಾಡಿದ್ದಳು. ಚೌಡಮ್ಮ ತನ್ನ ತಂಗಿ ಸುಜಾತ ಬಾಣಂತನಕ್ಕೆಂದು ಮಗಳನ್ನು ಹಿಂದೂಪೂರಕ್ಕೆ ಕಳಿಸಿದ್ದಳು.
ಬಳಿಕ ಬಾಲಕಿಯನ್ನು ದಿಬ್ಬೂರಿಗೆ ಕರೆತರಲು ಚೌಡಮ್ಮ ಹಿಂದೂಪುರದ ತಂಗಿಯ ಮನೆಗೆ ತೆರಳಿದ್ದಳು. ಈ ವೇಳೆ ಮಗಳು ತಂಗಿ ಮನೆಯಲ್ಲಿ ಇಲ್ಲದೇ ಇದ್ದಾಗ ಗಾಬರಿಗೊಂಡಿದ್ದರು. ಆಗ ತಂಗಿ ಸುಜಾತಳನ್ನು ದಬಾಯಿಸಿದಾಗ ಅಸಲಿ ಕಥೆ ಬಿಚ್ಚಿಟ್ಟಿದ್ದಾಳೆ. ಸುಜಾತ ಶ್ರೀರಾಮುಲು ಎಂಬುವನಿಗೆ ಮಾರಾಟ ಮಾಡಿರುವ ಬಗ್ಗೆ ಹೇಳಿಕೊಂಡಿದ್ದಳು.
ಬಾಲಕಿಯನ್ನು ಖರೀದಿಸಿದ್ದ ಶ್ರೀರಾಮುಲು ಬಾತುಕೋಳಿ ಮೇಯಿಸಲು ಒತ್ತೆಯಾಳಾಗಿ ಇರಿಸಿಕೊಂಡಿದ್ದ. ವಿಷಯ ತಿಳಿದ ಚೌಡಮ್ಮ ಮಗಳನ್ನು ತನ್ನೊಂದಿಗೆ ಕಳುಸುವಂತೆ ಬೇಡಿಕೊಂಡಿದ್ದರು. ಆದರೆ ಇದಕ್ಕೆ ಶ್ರೀರಾಮುಲು ಒಪ್ಪಿರಲಿಲ್ಲ.
ಬಾಲಕಿಯನ್ನು ತಾನು ಖರೀದಿಸಿದ್ದು, ಸಾಲದ ಹಣ ಕೊಟ್ಟು ಕರೆದುಕೊಂಡು ಹೋಗುವಂತೆ ಹೇಳಿದ್ದ. ವಾಪಸ್ ತುಮಕೂರಿಗೆ ಬಂದಿದ್ದ ಚೌಡಮ್ಮ ಮಗಳ ಸ್ಥಿತಿಯ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ದೂರನ್ನಾಧರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದ ಕಾರ್ಮಿಕ ಇಲಾಖೆ ಅಧಿಕಾರಿಗಳು, ತಕ್ಷಣ ಎಚ್ಚೆತ್ತು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.
ತಾಯಿಯ ಸಮಯಪ್ರಜ್ಞೆಯಿಂದ 11 ವರ್ಷದ ಬಾಲಕಿ ಬಚಾವ್ ಆಗಿದ್ದಾಳೆ. ಸದ್ಯ ಬಾಲಕಿಯನ್ನು ಅಧಿಕಾರಿಗಳು ಜಿಲ್ಲಾ ಬಾಲ ಮಂದಿರದಲ್ಲಿರಿಸಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಇತ್ತ ಆರೋಪಿಗಳು ಕಾಲ್ಕಿತ್ತಿದ್ದು, ಪೊಲೀಸರು ಅವರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ: Elephant Attack: ಕಾಡಾನೆ ದಾಳಿಗೆ ಫಾರೆಸ್ಟ್ ವಾಚರ್ ಬಲಿ; ಮೃತದೇಹ ತೆಗೆಯದೆ ಪರಿಹಾರಕ್ಕಾಗಿ ಗ್ರಾಮಸ್ಥರ ಪ್ರತಿಭಟನೆ
ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು; ಗಾಣಗಾಪುರದಲ್ಲಿ ಭಕ್ತೆ ಜಲಸಮಾಧಿ
ರಾಯಚೂರು: ಹಟ್ಟಿ ಚಿನ್ನದ ಗಣಿಯಲ್ಲಿ (Hutti Gold Mine) ಮಣ್ಣು ಕುಸಿದು (Accident news) ಕಾರ್ಮಿಕರೊಬ್ಬರು (Labourer Death) ಸಾವಿಗೀಡಾಗಿದ್ದಾರೆ. ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಪುಣ್ಯಕ್ಷೇತ್ರ ಗಾಣಗಾಪುರದಲ್ಲಿ ಸ್ನಾನಕ್ಕಾಗಿ ನದಿನೀರಿಗಿಳಿದ ಭಕ್ತೆಯೊಬ್ಬರು ಜಲಸಮಾಧಿ (Drowned) ಆಗಿದ್ದಾರೆ.
ಹಟ್ಟಿ ಚಿನ್ನದ ಗಣಿಯಲ್ಲಿ ನಿನ್ನೆ ರಾತ್ರಿ ಶಿಫ್ಟ್‌ನಲ್ಲಿ ಕಾರ್ಯ ನಿರ್ವಹಿಸುವಾಗ ಮಣ್ಣು ಕುಸಿದು ಒಬ್ಬರು ಕಾರ್ಮಿಕ ಸಾವಿಗೀಡಾಗಿದ್ದಾರೆ. ಮೃತ ಕಾರ್ಮಿಕರನ್ನು ಮೌನೇಶ್ (48) ಎಂದು ಗುರುತಿಸಲಾಗಿದೆ. ಇನ್ನೂ ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಒಬ್ಬ ಕಾರ್ಮಿಕರ ಕಾಲು ಕತ್ತರಿಸಿಹೋಗಿದೆ.
ಗಾಯಾಳು ಕಾರ್ಮಿಕರನ್ನು ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಇವರೆಲ್ಲ MS ಸಿಂಕಿ ಒಳಗೆ ಅಂದರೆ ಗಣಿಯ ಅತ್ಯಂತ ಕೊನೆಯ ಆಳದ ಲೆವೆಲ್‌ನಲ್ಲಿ ಕೆಲಸ ಮಾಡುತ್ತಿದ್ದವರು. ಲಾಸ್ಟ್ ಲೆವೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಮಣ್ಣು ಕುಸಿದಿತ್ತು.
ಪುಣ್ಯಸ್ನಾನ ಮಾಡುವಾಗ ಮಹಿಳೆ ಜಲಸಮಾಧಿ
ಕಲಬುರಗಿ: ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದ ಬಳಿಯ ಭೀಮಾ ನದಿಯಲ್ಲಿ ಸ್ನಾನ ಮಾಡುವ ವೇಳೆ ಕಾಲು ಜಾರಿ ಬಿದ್ದು ಮುಳುಗಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರ ಬಳಿಯಿರುವ ಭೀಮಾ ನದಿಯಲ್ಲಿ ಅನಾಹುತ ಸಂಭವಿಸಿದೆ.
ಶೈಲಿ ಗೋಡೆ (23) ಭೀಮಾ ನದಿಯಲ್ಲಿ ಬಿದ್ದು ಸಾವನ್ನಪ್ಪಿದ ಮಹಿಳೆ. ಮಹಾರಾಷ್ಟ್ರದ ದೌಂಡ್ ತಾಲೂಕಿನ ವಂಡಅಡವಿ ಗ್ರಾಮದವರದಾದ ಇವರು ಕುಟುಂಬ ಸಮೇತ ಗಾಣಗಾಪುರದ ದತ್ತಾತ್ರೇಯ ದರ್ಶನಕ್ಕೆ ಆಗಮಿಸಿದ್ದರು. ದರ್ಶನಕ್ಕೂ ಮುನ್ನ ಭೀಮಾ ನದಿಯಲ್ಲಿ ಪುಣ್ಯಸ್ನಾನಕ್ಕೆ ಕುಟುಂಬ ತೆರಳಿತ್ತು. ಈ ವೇಳೆ ಭೀಮಾ ನದಿಯ ಚಕ್ರೇಶ್ವರ ತೀರ್ಥದಲ್ಲಿ ಸ್ನಾನ ಮಾಡಲು ತೆರಳಿದ್ದಾಗ ಅವಘಡ ನಡೆದಿದೆ. ಮೃತದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿಗಳು ಮತ್ತು ಪೊಲೀಸರು ಹೊರತೆಗೆದಿದ್ದಾರೆ. ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ