ತುಮಕೂರು: ಸ್ವತಃ ಅಮಿತ್ ಶಾ (Amit Shah) ಅವರೇ ಮನೆಗೆ ಬಂದು ಕೂತ್ಕೊಂಡು ಎರಡು ಕಡೆ ಚುನಾವಣೆಗೆ ನಿಲ್ಲಬೇಕು ಎಂದು ಹೇಳಿದರೆ ನಾನೇನು ಮಾಡ್ಲಿ ಹೇಳಿ ಸ್ವಾಮೀಜಿ..: ಹೀಗೆ ಸಿದ್ದಗಂಗಾ ಶ್ರೀಗಳ (Siddaganga Shri) ಮುಂದೆ ವಿಧಾನಸಭಾ ಚುನಾವಣೆಯ ಸೋಲಿನ ನೋವು ತೋಡಿಕೊಂಡಿದ್ದಾರೆ ವಿ.ಸೋಮಣ್ಣ (V Somanna).
ತುಮಕೂರಿನ ಸಿದ್ದಗಂಗಾ ಮಠದಲ್ಲಿ ತಾವು ನಿರ್ಮಿಸಿರುವ ಸಭಾಭವನದ ಉದ್ಘಾಟನಾ ಸಮಾರಂಭಕ್ಕೆಂದು ಬಂದಿದ್ದ ವೇಳೆ ಸ್ಥಳೀಯ ಮುಖಂಡರೊಬ್ಬರು ಗೋವಿಂದರಾಜ ಕ್ಷೇತ್ರ ಬಿಟ್ಟು ಹೋಗಬಾರದಿತ್ತು ಎಂದು ಮಾತು ಆರಂಭಿಸಿದಾಗ ಸೋಮಣ್ಣ ನಿಜಕ್ಕೂ ಬೇಸರಗೊಂಡರು.
ʻʻಹೌದು, ಅದೇ ನಾನು ಮಾಡಿದ ಮಹಾ ಅಪರಾಧ. ಅಮಿತ್ ಷಾ ಅವರು ಬಂದು ಎರಡೂವರೆ ಗಂಟೆ ಮನೆಯಲ್ಲಿ ಕುತ್ಕೊಂಡ್ ಬಿಟ್ರು. ಅವರೇ ನಿಂತ್ಕೋ ಅಂದಾಗ ನಾನು ಏನ್ ಮಾಡಬೇಕು. ಏನ್ ಮಾಡಲಿ ಹೇಳಿ ಸ್ವಾಮೀಜಿ. ಇಲ್ಲ, ನಿಲ್ಲುವುದಿಲ್ಲ ಅಂತ ಹೇಳಿದೆ. ಆಗ ಪ್ರಧಾನಿ ನರೇಂದ್ರ ಮೋದಿ ಅವರು ನನ್ನನ್ನು ದೆಹಲಿಗೆ ಕರೆಸಿಕೊಂಡರು. ನಾಲ್ಕು ದಿನ ಅಲ್ಲೇ ಇಟ್ಕೊಂಡ್ರು, ನೀನು ನಿಂತ್ಕೊ ಅಂತ ಹೇಳಿದಾಗ ಏನು ಮಾಡಬೇಕುʼʼ ಎಂದು ಸಿದ್ದಗಂಗಾ ಶ್ರೀಗಳ ಎದುರು ಸೋಲಿನ ನೋವು ತೋಡಿಕೊಂಡರು ವಿ.ಸೋಮಣ್ಣ.
ವಿ. ಸೋಮಣ್ಣ ಅವರು ಗೋವಿಂದರಾಜ ನಗರ ಕ್ಷೇತ್ರದಲ್ಲಿ ಹಿಂದೆ ಗೆದ್ದಿದ್ದವರು. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಚಾಮರಾಜ ನಗರ ವಿಧಾನಸಭಾ ಕ್ಷೇತ್ರ ಮತ್ತು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು. ಮತ್ತು ಎರಡೂ ಕಡೆ ಸೋಲು ಅನುಭವಿಸಿದ್ದರು. ವರಿಷ್ಠರ ಮಾತು ಕೇಳಿ ಕೆಟ್ಟೆ ಎಂದು ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ.
ಒಂದು ಕಡೆ ಹೈಕಮಾಂಡ್ ಮಾತು ಕೇಳಿ ಎರಡು ಕಡೆ ಸ್ಪರ್ಧೆ ಮಾಡಿ ಸೋತ ನೋವು, ಇನ್ನೊಂದು ಕಡೆ ರಾಜ್ಯ ಬಿಜೆಪಿಯಲ್ಲಿ ಅವರನ್ನು ಕಡೆಗಣಿಸಿರುವುದರಿಂದ ಆಕ್ರೋಶಿತರಾಗಿರುವ ಅವರು ಪಕ್ಷ ತ್ಯಾಗದ ಯೋಚನೆ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.
ಇತ್ತೀಚೆಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಡಿಸೆಂಬರ್ ಆರರವರೆಗೆ ಮಾತನಾಡದಂತೆ ವರಿಷ್ಠರು ಸೂಚನೆ ನೀಡಿದ್ದಾರೆ. ಅದರ ಬಳಿಕ ಎಲ್ಲವನ್ನೂ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಅಂದರೆ, ಅವರು ಡಿಸೆಂಬರ್ ಆರರ ಬಳಿಕ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರುವ ಸಾಧ್ಯತೆ ಕಂಡುಬಂದಿದೆ.
ಇದನ್ನೂ ಓದಿ: V Somanna : ಡಿ. 6ಕ್ಕೆ ವಿ. ಸೋಮಣ್ಣ ಮಹತ್ವದ ಘೋಷಣೆ; ಬಿಜೆಪಿಗೆ ಗುಡ್‌ಬೈ ಫಿಕ್ಸ್?
ಗುರುವಾರ ಮೈಸೂರು ಮತ್ತು ಚಾಮರಾಜನಗರದಲ್ಲಿ ಮಾತನಾಡಿದ ವಿ. ಸೋಮಣ್ಣ ಅವರು, ಡಿ.6ರ ನಂತರ ನನ್ನ ಮನಸ್ಸಿನ ಭಾವನೆ ಹೇಳುತ್ತೇನೆ. ನಮ್ಮ ಪಕ್ಷದಲ್ಲಿ ಒಂದು ರೀತಿ ಸೋಮನಹಳ್ಳಿ ಮುದುಕಿ ಕಥೆ ಆಗಿದೆ. 6ನೇ ತಾರೀಕು ಆದ ಮೇಲೆ ಅದನ್ನು ವಿವರಿಸ್ತೀನಿ. ಹೈಕಮಾಂಡ್ ಸೂಚನೆ ತಲೆ ಮೇಲೆ ಹೊತ್ತು ದುಡಿಮೆ ಮಾಡಿದ ಮೇಲೆ ಯಾವ ರೀತಿ ನನಗೆ ಹೊಡೆತ ಆಯ್ತು ಎನ್ನುವುದನ್ನು ಡಿ.6 ಆದ ನಂತರ ಹೇಳುತ್ತೇನೆ. ಬಿಡಿ, ಬಿಡಿಯಾಗಿ ವಿವರಿಸ್ತೀನಿʼʼ ಎಂದು ಹೇಳಿದ್ದಾರೆ. ಡಿಸೆಂಬರ್ ಆರರವರೆಗೆ ಮಾತನಾಡದಂತೆ ವರಿಷ್ಠರು ಸೂಚಿಸಿದ್ದಾಗಿ ಸೋಮಣ್ಣ ಹೇಳಿದ್ದರು.