ತುಮಕೂರು: ಬಿಜೆಪಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರು ಹೈಡ್ರಾಮಾ ಸೃಷ್ಟಿಸಿದ ಘಟನೆ ನಗರದಲ್ಲಿ (Tumkur News) ಸೋಮವಾರ ರಾತ್ರಿ ನಡೆದಿದೆ. ಮಾಜಿ ಪ್ರಧಾನಿ ದೇವೇಗೌಡ ಅವರಿದ್ದ ವೇದಿಕೆಗೆ ನುಗ್ಗಿ ಗೊಂದಲ ಸೃಷ್ಟಿಸಿದ ಕಾಂಗ್ರೆಸ್ ಕಾರ್ಯಕರ್ತೆಯರು, ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಹೈಡ್ರಾಮಾ ಸೃಷ್ಟಿಸಿದರು.
ತುಮಕೂರಿನ ಕುಂಚಿಟಿಗರ ಸಭಾಭವನದಲ್ಲಿ ನಡೆಯುತ್ತಿದ್ದ ಮೈತ್ರಿ ಸಮಾವೇಶದಲ್ಲಿ ಕಾರ್ಯಕರ್ತೆಯರ ಸೋಗಿನಲ್ಲಿ ಬಂದು ಸಭೆಯಲ್ಲಿ ಕೂತಿದ್ದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯವರು, ಗ್ಯಾರಂಟಿಗಳಿಂದ ಗ್ರಾಮೀಣ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆ ಖಂಡನೀಯ ಎಂದು ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಕಾರ್ಯಕರ್ತೆಯರು ಘೋಷಣೆ ಕೂಗಿದರು. ನಂತರ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಇದನ್ನೂ ಓದಿ | CM Siddaramaiah: ಎಚ್.ಡಿ. ದೇವೇಗೌಡರೇ ಇತಿಹಾಸ ನಿಮ್ಮನ್ನು ಖಂಡಿತಾ ಕ್ಷಮಿಸುವುದಿಲ್ಲ: ಸಿಎಂ ಸಿದ್ದರಾಮಯ್ಯ
ಘಟನೆ ಬಗ್ಗೆ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಪ್ರತಿಕ್ರಿಯಿಸಿ, ಇವತ್ತು ಬಿಜೆಪಿ- ಜೆಡಿಎಸ್ ಸಭೆಯಲ್ಲಿ ಹಿರಿಯರಾದ ಮಾಜಿ ಪ್ರಧಾನಿ ದೇವೇಗೌಡರು ಹಾಜರಿದ್ದರು. ಅವರು ಮಾತನಾಡುವಾಗ ಇಬ್ಬರು ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಮಫ್ತಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತೆಯರ ರೀತಿ ಬಂದಿದ್ದಾರೆ. ದೇವೇಗೌಡರನ್ನು ಏನು ಮಾಡೋಕೆ ಬಂದಿದ್ದರೋ ಗೊತ್ತಿಲ್ಲ, ಘೋಷಣೆ ಕೂಗಿಕೊಂಡು ಒಳಗೆ ಬರೋದಕ್ಕೆ ಹೋದರು. ಇದು ಖಂಡನಾರ್ಹ ಎಂದು ಕಿಡಿಕಾರಿದರು.
ತುಮಕೂರಿನಲ್ಲಿ ಈ ರೀತಿಯಾದ ಯಾವುದೇ ಘಟನೆ ನೋಡಿರಲಿಲ್ಲ. ಯಾವುದೇ ವಿರೋಧ ಪಕ್ಷವಾದರೂ ಗೌರವಯುತವಾಗಿ ಸುದ್ದಿಗೋಷ್ಠಿ ನಡೆಸಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಆದರೆ ಈ ರೀತಿ ಕಳುಹಿಸೋದು ಕಾಂಗ್ರೆಸ್‌ನ ಸಂಸ್ಕೃತಿ. ಅವರಿಗೇನಾದರೂ ತಾಕತ್ತಿದ್ದರೆ ಚುನಾವಣೆಯಲ್ಲಿ ಮಾಡಬೇಕು, ಈ ರೀತಿ ಶಿಖಂಡಿ ಥರ ಮಾಡೋದಲ್ಲ. ಅವರು ನೇರವಾಗಿ ಬರಬೇಕಿತ್ತು, ಹಿಂದೆ ನಿಂತ್ಕೊಂಡು ಯಾರನ್ನೋ ಕಳುಹಿಸೋದಲ್ಲ. ದೇವೇಗೌಡರ ಮೇಲೆ ಏನು ಮಾಡೋಕೆ ಬಂದಿದ್ರು ಅವರು ಎಂದು ಆಕ್ರೋಶ ಹೊರಹಾಕಿದರು.
ನಾವು ಈ ಬಗ್ಗೆ ಎಸ್‌ಪಿಯವರಿಗೆ ಹೇಳಿ, ಖಂಡಿಸುತ್ತೇವೆ. ಈ ಥರ ಏನಾದರೂ ಆಗುತ್ತೆ ಎಂದು ನಾವು ಮುಂಚೆಯೇ ಎಸ್‌ಪಿಯವರಿಗೆ ಹೇಳಿದ್ದೆವು. ಈ ರೀತಿ ಮಾಡೋದು ಕಾಂಗ್ರೆಸ್ ನಾಯಕರಿಗೆ ಶೋಭೆ ತರೋದಿಲ್ಲ, ಅವರಾಗಿ ಅವರು ಬರಲ್ಲ, ಅವರಿಗೆ ಧೈರ್ಯ ಇರಲ್ಲ. ಅವರಿಗೆ ಯಾರಾದ್ರೂ ಚಿತಾವಣೆ ಮಾಡಿ ಕಳುಹಿಸಿರುತ್ತಾರೆ. ಅವರಿಗೆ ಧಮ್ಮಿದ್ರೆ ಜನರ ಬಳಿ ಹೋಗಿ ಮತ ಹಾಕಿಸಿಕೊಳ್ಳಲಿ ಎಂದು ಹೇಳಿದರು.
ಇದನ್ನೂ ಓದಿ | Narendra Modi : ಮೋದಿ ನೀಡಿದ 10 ಭರವಸೆಗಳು, ಪ್ರಧಾನಿಯ ವಿಶೇಷ ಸಂದರ್ಶನದ ವಿವರ ಇಲ್ಲಿದೆ
ಸಭೆ ಮಾಡೋವಾಗ ಈ ರೀತಿ ನಡೆದುಕೊಳ್ಳೋದು ಅವರಿಗೆ ಗೌರವ ತರೋದಿಲ್ಲ. ಇದರ ಬಗ್ಗೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ. ಕಳೆದ ಹದಿನೈದು ದಿನದಿಂದ ನಮ್ಮ ಅಭ್ಯರ್ಥಿ ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಂಡು, ಆ ಸಭೆಯಲ್ಲಿ ಸೇರಿದ್ದ ಜನ, ಮುಖಂಡರನ್ನು ನೋಡಿ ಹತಾಶೆಗೆ ಒಳಗಾಗಿದ್ದಾರೆ. ಜನರನ್ನು ಡೈವರ್ಟ್ ಮಾಡಬೇಕು ಎಂದು ಸಣ್ಣಪುಟ್ಟ ವಿಚಾರಕ್ಕೆಲ್ಲ ಈ ರೀತಿ ಮಾಡುತ್ತಿದ್ದಾರೆ. ಅವರು ಸೋಲೋದು ಖಚಿತ ಎಂದು ವಾಗ್ದಾಳಿ ನಡೆಸಿದರು.