ವಿಜಯನಗರ: ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ (Tungabhadra Dam) ಮುರಿದುಹೋಗಿರುವ 19ನೇ ನಂಬರ್ ಗೇಟ್ ಅನ್ನು ಮತ್ತೆ ಅಳವಡಿಸುವ ಕಾರ್ಯ ಡ್ಯಾಂ ಸುರಕ್ಷತಾ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಆರಂಭವಾಗಿದೆ. ಇದೀಗ ಕ್ರೇನ್ ಮೂಲಕ ಸ್ಟಾಪ್ ಲಾಗ್ ಗೇಟ್ ಎಲಿಮೆಂಟ್ ಅನ್ನು ಅಳವಡಿಸಲು ಜಿಂದಾಲ್ ಎಂಜಿನಿಯರ್‌ಗಳು ಮುಂದಾಗಿದ್ದಾರೆ.
5 ಎಲಿಮೆಂಟ್‌ಗಳ ಜೋಡಿಸಲು ಯೋಜನೆ ರೂಪಿಸಲಾಗಿದ್ದು, ತಲಾ ಒಂದು ಎಲಿಮೆಂಟ್ ಅಳವಡಿಕೆಯಿಂದ 25 ಟಿಎಂಸಿ ನೀರು ತಡೆಯಲು ಸಾಧ್ಯವಿದೆ. ಈ ಸಂಬಂಧ ನೂರಾರು ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ. ಇಂದು ಮಳೆ ಕೊಂಚ ಬಿಡುವು ನೀಡಿದ್ದು, ಕಾಮಗಾರಿಗೆ ಅನುಕೂಲವಾಗಿ ಪರಿಣಮಿಸಿದೆ.
13ರಿಂದ 14 ಟನ್ ತೂಕದ ತಾತ್ಕಾಲಿಕ ಗೇಟ್ ಹಾಕಿ ಡ್ಯಾಂ ನೀರು ತಡೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ತುಂಡಾಗಿರುವ ಗೇಟ್ ಬಳಿ ಇರುವ ಚೈನ್ ಲಿಂಕ್ ಜೋಡನೆಯನ್ನು ತಂತ್ರಜ್ಞರು ಆರಂಭಿಸಿದ್ದಾರೆ. ಗೇಟ್‌ನಲ್ಲಿ ಸಿಲುಕಿದ್ದ ಕಟ್ ಆಗಿರೋ ಚೈನ್ ಲಿಂಕ್ ತೆರವು ಕಾರ್ಯವೂ ಪ್ರಗತಿಯಲ್ಲಿದೆ. ಡ್ಯಾಂ ಸಿಬ್ಬಂದಿ ಕ್ರೇನ್ ಮೂಲಕ ಹಳೆ ಚೈನ್ ಲಿಂಕ್ ತೆರವು ಮಾಡಲು ಮಂದಾಗಿದ್ದಾರೆ.
ತಪ್ಪಿದ ದುರಂತ
ಜಲಾಶಯದ ಮೇಲ್ಬಾಗಕ್ಕೆ ಗುರುವಾರ ಗೇಟ್ ರವಾನಿಸಲಾಗುತ್ತಿದ್ದು, ಟ್ರಕ್‌ನಿಂದ ಪ್ಲೇಟ್‌ಗಳನ್ನು ಇಳಿಸುವಾಗ ಒಮ್ಮೆ ಬ್ಯಾಲೆನ್ಸ್ ತಪ್ಪಿತ್ತು. ಅದೃಷ್ಟವಶಾತ್ ಯಾವುದೇ ಸಮಸ್ಯೆಯಾಗಲಿಲ್ಲ. ನಂತರ ಕ್ರೇನ್ ಮೂಲಕ ಬೆಲ್ಟ್ ಹಾಕಿ ಕಬ್ಬಿಣ ಪೇಲ್ಟ್‌ಗಳನ್ನು ಜಲಾಶಯದ ಮೇಲ್ಭಾಗಕ್ಕೆ ಸಾಗಿಸಲಾಯಿತು.
ಪ್ರವೇಶವಿಲ್ಲ
78ನೇ ಸ್ವಾತಂತ್ರ್ಯ ದಿನೋತ್ಸವದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯ ವೀಕ್ಷಣೆಗೆ ಬಂದ ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಜಲಾಶಯ ಗೇಟ್ ಕಿತ್ತು ಹೋಗಿರುವುದರಿಂದ ಮತ್ತು ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಜಲಾಶಯ ವೀಕ್ಷಣೆಗೆ ಬಂದವರು ರಾಷ್ಟ್ರೀಯ ಹೆದ್ದಾರಿ ಮೇಲೆ ಕಿಕ್ಕಿರಿದು ಸೇರಿದ್ದಾರೆ. ಕಾರು, ಬೈಕ್ ಕಾಲ್ನಡಿಗೆ ಮೂಲಕ ಬಂದ ಪ್ರವಾಸಿಗರು ರಸ್ತೆ ಬದಿ ನಿಂತೇ ಜಲ ವೈಭವವನ್ನು ಕಣ್ತುಂಬಿ ಕೊಳ್ಳುತ್ತಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಪ್ರವಾಸಿಗರು ನಿಂತಿರುವ ಕಾರಣ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ವಾಹನಗಳು ವೇಗವಾಗಿ ಬರುತ್ತಿರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರವಾಸಿಗರನ್ನ ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡುವಂತಾಗಿದೆ.
ದುರ್ದೈವದ ಸಂಗತಿ
ರಾಯಚೂರು: ತುಂಗಭದ್ರಾ ಡ್ಯಾಂ 19ನೇ ಕ್ರಸ್ಟ್ ಗೇಟ್ ಕಟ್ ಆಗಿದ್ದು ಬಹಳ ದುರ್ದೈವದ ವಿಷಯ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ರಾಯಚೂರಿನಲ್ಲಿ ಹೇಳಿದ್ದಾರೆ. ʼʼಈ ಬಾರಿ ನಮ್ಮ ಡ್ಯಾಂ ಸಂಪೂರ್ಣವಾಗಿ ತುಂಬಿತ್ತು. ಆದರೆ ಗೇಟ್ ತುಂಡಾಗಿರೋದರಿಂದ ನೀರನ್ನ ಬೀಡಬೇಕಾಗಿದೆ. ಆ ಗೇಟ್‌ನ ರಿಪೇರಿ ಕಾರ್ಯ ಕೂಡ ನಡೆಯುತ್ತಿದೆ. ನಾನು ಕೂಡ ಅಲ್ಲಿಯೇ ಹೋಗಿ ಮಾರ್ನಿಟರ್ ಮಾಡುತ್ತೇನೆʼʼ ಎಂದು ತಿಳಿಸಿದ್ದಾರೆ.
ʼʼಹವಾಮಾನ ಇಲಾಖೆಯ ಪ್ರಕಾರ ಆಗಸ್ಟ್ ಕೊನೆಯ ವಾರದಲ್ಲಿ ಮಳೆಯಾಗುವ ಅಂದಾಜಿದೆ. ಅದರಿಂದ ಮತ್ತೆ ನಮ್ಮ ಡ್ಯಾಂ ತುಂಬುತ್ತೆ ಅನ್ನೋ ನೀರಿಕ್ಷೆಯಿದೆ. ಸದ್ಯಕ್ಕೆ ರೈತರಿಗೆ ಆತಂಕ ಕಾಡೋದು ಸಹಜ. ಮಳೆಯಾದ್ರೆ ಮತ್ತೊಮ್ಮೆ ಡ್ಯಾಂ ತುಂಬುತ್ತೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳೋಣ. ಗೇಟ್ ತುಂಡಾಗಲು ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಅವರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. 105 ಟಿಎಂಸಿ ತುಂಬಿರುವ ಡ್ಯಾಂನಿಂದ ಅರ್ಧ ನೀರು ಖಾಲಿ ಮಾಡಬೇಕಿದ್ದು, ಈ ಬಗ್ಗೆ ನಮಗೂ ಬೇಸರವಿದೆʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Tungabhadra Dam: ನೀರಿನ ರಭಸದ ನಡುವೆಯೇ ಇಂದಿನಿಂದ ಗೇಟ್ ಅಳವಡಿಸುವ ಕಾರ್ಯ; ತಜ್ಞ ಕನ್ನಯ್ಯ ನಾಯ್ಡು ಸಾಹಸ