ಮೌನೇಶ್ ಬಡಿಗೇರ್, ಕೊಪ್ಪಳ
ತಾಲೂಕಿನ ಹುಲಿಗಿಯ ಪ್ರಸಿದ್ದ ಹುಲಿಗೆಮ್ಮದೇವಿ ದೇವಸ್ಥಾನದ ಬಳಿ ಇರುವ ತುಂಗಭದ್ರಾ ನದಿ ಅಕ್ಷರಶಃ ಚರಂಡಿಯಾಗಿ ಮಾರ್ಪಟ್ಟಿದೆ. ರಾಜ್ಯ ಸೇರಿದಂತೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದ ಲಕ್ಷಾಂತರ ಭಕ್ತರು ಹುಲಗಿಗೆ ಬರುತ್ತಾರೆ.
ಹುಣ್ಣಿಮೆ, ಮಂಗಳವಾರ ಹಾಗೂ ಶುಕ್ರವಾರದಂದು ಭಕ್ತರ ಸಂಖ್ಯೆ ಹೆಚ್ಚು. ಆದರೆ ಸರಿಯಾದ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣ ತುಂಗಭದ್ರಾ ನದಿಯಲ್ಲಿ ತ್ಯಾಜ್ಯ ಸಂಗ್ರಹವಾಗಿದೆ. ನದಿಸ್ನಾನ ಮಾಡಿ ದೇವಿಯ ದರ್ಶನ ಮಾಡಿದರಾಯ್ತು ಎಂದು ನದಿಗೆ ಸ್ನಾನಕ್ಕೆ ಇಳಿಯುವ ಭಕ್ತರಿಗೆ ಅಕ್ಷರಶಃ ಚರಂಡಿ ನೀರಿನಲ್ಲಿ ಇಳಿದ ಅನುಭವವಾದಂತಿದೆ.
ಇದನ್ನೂ ಓದಿ | ತುಂಗಭದ್ರಾ ನದಿ ತೀರದಲ್ಲಿ ಕಾಣಿಸಿಕೊಂಡ ಮೊಸಳೆ
ನದಿಯ ನೀರು ಸಂಪೂರ್ಣ ಕೊಳಚೆಯಾಗಿದ್ದು ನದಿಯಲ್ಲಿ ಅಪಾರ ಪ್ರಮಾಣದ ಪ್ಲಾಸ್ಟಿಕ್, ಕಸ ಕಡ್ಡಿ, ತ್ಯಾಜ್ಯ ವಸ್ತುಗಳು ತುಂಬಿಕೊಂಡಿದೆ. ಸ್ನಾನ ಮಾಡಿದವರಿಗೆ ಮೈಕೈ ತುರಿಕೆ ಬರುವುದರ ಜತೆಗೆ ಚರ್ಮ ರೋಗವೂ ಅಂಟಿಕೊಳ್ಳುವ ಸಾಧ್ಯತೆ ಇದೆ.
ನದಿಯಲ್ಲಿ ಎಲ್ಲಿ ನೋಡಿದರೂ ಕಸ ಕಡ್ಡಿ, ಬಟ್ಟೆಗಳು ತುಂಬಿಕೊಂಡಿದೆ. ನದಿಯಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆ ಇರುವುದರಿಂದ ನೀರು ಕೊಳೆತು ಗಬ್ಬು ನಾರುತ್ತಿದೆ. ಕೆಲವರು ಅನಿವಾರ್ಯವಾಗಿ ಇದೇ ನೀರಿನಲ್ಲಿ ಸ್ನಾನ ಮಾಡಿ ಇದೇ ನೀರನ್ನು ಕುಡಿಯುತ್ತಾರೆ.
ನದಿಯು ಮುಂದೆ ಹರಿದಂತೆಲ್ಲ ಇದೇ ನೀರು ಜನ ಜಾನುವಾರುಗಳಿಗೆ ಕುಡಿಯಲು ಸರಬರಾಜಾಗುತ್ತದೆ. ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕಾದ ದೇವಸ್ಥಾನ ಆಡಳಿತ ಮಂಡಳಿ ಇತ್ತ ಗಮನ ಹರಿಸುತ್ತಿಲ್ಲ. ಹುಲಗಿ ಭಾಗದಲ್ಲಿ ತುಂಗಭದ್ರಾ ನದಿ ಮಲಿನಗೊಳ್ಳುವುದಕ್ಕೆ ದೇವಸ್ಥಾನದ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಶೀಘ್ರದಲ್ಲೆ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಪವಿತ್ರ ನದಿಯ ನೀರು, ರೋಗ ಹೊತ್ತು ತರುವ ತಾಣವಾಗುತ್ತದೆ ಎಂದು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
ಇದನ್ನೂ ಓದಿ | ಭತ್ತದ ಬೆಲೆ ಕುಸಿತದಿಂದ ಕಂಗಾಲಾದ ರೈತ: ಖರೀದಿ ಕೇಂದ್ರ ಆರಂಭಿಸದ ಸರ್ಕಾರ