ಬೆಂಗಳೂರು: ಟಿವಿ ಸೌಂಡ್ ಜೋರಾಗಿದ್ದರಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂಬ ಪಕ್ಕದ ಮನೆಯವರು ಆಕ್ಷೇಪ ಮಾಡಿದ್ದಕ್ಕೆ ಮಹಿಳೆಯೊಬ್ಬರು ಕೆರಳಿದ್ದಾರೆ. ಇದು ಹಲವು ತಿರುವುಗಳನ್ನು ಪಡೆದುಕೊಂಡು ಸಾರ್ವತ್ರಿಕ ಆಕ್ರೋಶದ ರೂಪ ಪಡೆದಿದೆ.
ಘಟನೆ ನಡೆದಿರುವುದು ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಮನೆಯಲ್ಲಿ. ಈ ಮನೆಯ ಮಾಲಕಿ ನೀಲ್ಮಾ ದಿಲೀಪನ್. ಅವರು ಮನೆಯಲ್ಲಿ ಜೋರಾಗಿ ಟೀವಿ ಹಾಕಿದ್ದರಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ದೂರಿದ್ದರು. ಶಬ್ದ ಮಾಲಿನ್ಯದ ಬಗ್ಗೆ ದೂರವಾಣಿ ಮೂಲಕ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ನೀಲ್ಮಾ ಅವರ ಮನೆಗೆ ಭೇಟಿ ನೀಡಿ ವಿಚಾರಣೆಗೆ ಮುಂದಾಗಿದ್ದಾರೆ.
ಪೊಲೀಸರು ಬಂದು ವಿಚಾರಣೆ ನಡೆಸಿದಾಗ ಮನೆಯವರು ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ಮನೆಯ ಟೀವಿಯನ್ನು ಎಷ್ಟು ವಾಲ್ಯೂಮ್‌ನಲ್ಲಿ ಹಾಕಬೇಕು ಎಂದು ಪಕ್ಕದ ಮನೆಯವರು ಡಿಸೈಡ್ ಮಾಡ್ಬೇಕಾ ಎಂದು ಪ್ರಶ್ನಿಸಿದ್ದರು. ನಾವು ಎಲ್ಲ ಬಾಗಿಲು, ಕಿಟಕಿಗಳನ್ನು ಮುಚ್ಚಿ ಟಿವಿ ಹಾಕಿದ್ದೇವೆ. ಪಕ್ಕದ ಮನೆಯವರಿಗೆ ಕಿರಿಕಿರಿ ಆಗುತ್ತಿದೆ ಎಂದರೆ ಏನರ್ಥ ಎಂದು ಆಕ್ಷೇಪಿಸಿದ್ದಾರೆ.
ಈ ನಡುವೆ, ಮನೆಯವರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಜಟಾಪಡಿ ನಡೆದು ಪೊಲೀಸರಲ್ಲಿ ಒಬ್ಬ ಮನೆಯಲ್ಲಿದ್ದ ವ್ಯಕ್ತಿಯ ಕೊರಳ ಪಟ್ಟಿ ಹಿಡಿದು ಜಗಳವಾಡಿದ್ದ. ಈ ಜಟಾಪಟಿ ಮನೆಯ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಈ ನಡುವೆ, ಯಾರೋ ಟೀವಿ ಜೋರಾಗಿ ಹಾಕಿದ್ದಾರೆಂದು ದೂರು ನೀಡಿದ ಮಾತ್ರಕ್ಕೆ ಪೊಲೀಸರು ಮನೆಗೆ ಬಂದು ಅನುಚಿತವಾಗಿ ವರ್ತನೆ ಮಾಡುವುದು ಎಷ್ಟು ಸರಿ? ಮನೆಯವರ ಕೊರಳಪಟ್ಟಿ ಹಿಡಿದಿದ್ದು ಸರಿಯಾ? ಮನೆಯಲ್ಲಿ ಟಿವಿ ಹಾಕುವ ಸ್ವಾತಂತ್ರ್ಯವೂ ನಮಗಿಲ್ಲವೇ ಎಂದು ಮಹಿಳೆ ಪ್ರಶ್ನಿಸಿದ್ದಾರೆ.
ಟ್ವೀಟ್‌ನಲ್ಲಿ ಪ್ರಶ್ನಿಸಿದ ಮಹಿಳೆ
ಅಕ್ಕಪಕ್ಕದ ಮನೆಯವರ ಆಕ್ಷೇಪ ಮತ್ತು ಪೊಲೀಸರ ಅನುಚಿತ ವರ್ತನೆಗಳನ್ನು ಉಲ್ಲೇಖಿಸಿ ನೀಲ್ಮಾ ಅವರು ಟ್ವೀಟ್ ಮಾಡಿದ್ದಾರೆ. ನಾವು ಯಾವುದೇ ನಾಯ್ಸ್ ಪೊಲ್ಯುಷನ್ ಮಾಡಿಲ್ಲ. ಮನೆಯೊಳಗೆ ಟಿವಿ ಹಾಕಿದ್ದೇವಷ್ಟೆ. ಯಾರೋ ಕರೆ ಮಾಡಿದ್ದಾರೆಂದು ಸ್ಥಳಕ್ಕೆ ಬಂದು ಅನುಚಿತವಾಗಿ ವರ್ತಿಸಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಇಷ್ಟೇ ಅಲ್ಲದೆ, wr not safe in my house (ನಾವು ಈ ಮನೆಯಲ್ಲಿ ಸುರಕ್ಷಿತವಾಗಿಲ್ಲ) ಎಂದು ಬರೆದಿದ್ದಲ್ಲದೆ worst country (ಕೆಟ್ಟ ದೇಶ) ಎಂದು ಟ್ವೀಟ್ ಮಾಡಿದ್ದಾರೆ.
ಸಾರ್ವಜನಿಕರ ಆಕ್ರೋಶ
ಈ ನಡುವೆ, ಆಗಿರುವ ಸಣ್ಣ ಜಗಳಕ್ಕೆ ದೇಶದ ಬಗ್ಗೆ ಆಕ್ಷೇಪ ಮಾಡಿದ್ದು, ಕೆಟ್ಟ ದೇಶ ಎಂದು ಹೇಳಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ʻʻಆಗಿರುವ ತಪ್ಪುಗಳನ್ನ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಕಾನೂನು ಮೂಲಕ ಹೋರಾಟ ಮಾಡಬೇಕು. ಅದನ್ನ ಬಿಟ್ಟು ದೇಶದ ಬಗ್ಗೆ ಮಾತನಾಡಿದ್ದು ಸರಿಯಲ್ಲʼʼ ಎಂದು ನೆಟ್ಟಿಗರು ಮಹಿಳೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.