ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಹತ್ತಿರವಾದಂತೆಲ್ಲ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಪ್ರತಿಪಕ್ಷ ಕಾಂಗ್ರೆಸ್ ಈಗಾಗಲೆ ವಿವಿಧ ಸಮಾವೇಶಗಳ ಮೂಲಕ ಚುನಾವಣೆ ಮೂಡ್‌ಗೆ ಹೋಗಿದ್ದರೂ, ಆಡಳಿತಾರೂಢ ಪಕ್ಷ ಮಾತ್ರ ಇನ್ನೂ ಗೊಂದಲದಲ್ಲಿದೆ.
ಈ ಸಮಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮುಖ್ಯಸ್ಥರಾಗಿರುವ ಸಾಮಾಜಿಕ ಜಾಲತಾಣ ವಿಭಾಗದಿಂದ ಟ್ವೀಟ್ ಮಾಡಲಾಯಿತು. ಈ ಟ್ವೀಟ್ ಕುರಿತು ಉತ್ತರಿಸುವ ಭರದಲ್ಲಿ ಬಿಜೆಪಿಯಲ್ಲಿ ಅನೇಕ ಗೊಂದಲಗಳು ಮೂಡಿವೆ.
ಸಿಎಂ ಬೊಮ್ಮಾಯಿ ಬದಲಾವಣೆ ಇಲ್ಲ ಎಂದು ಅನೇಕರು ಮುಖಂಡರು ಹೇಳಿದ್ದಾರೆ. ಬೊಮ್ಮಾಯಿ ಅವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇದೇ ವೇಳೆ, ಕುಟುಂಬ ಸಮೇತ ಮಂತ್ರಾಲಯಕ್ಕೆ ತೆರಳುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬೊಮ್ಮಾಯಿ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪಕ್ಷದ ವಲಯದಲ್ಲೂ ಇದೇ ಚರ್ಚೆ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಬದಲಾವಣೆ ಮಾಡುವುದಕ್ಕಿಂತಲೂ, ಬದಲಾವಣೆ ಮಾಡದೇ ಇರುವುದಕ್ಕೇ ಹೆಚ್ಚು ಒಮ್ಮತ ವ್ಯಕ್ತವಾಗುತ್ತಿದೆ. ಈ ಕುರಿತು ಪಕ್ಷದ ವಲಯದಲ್ಲಿ ನಡೆಯುತ್ತಿರುವ ಚರ್ಚೆಯ ಪ್ರಮುಖ ಅಂಶಗಳು ಇಲ್ಲಿವೆ.
1. ಎಸ್.ಎಂ. ಕೃಷ್ಣ ಸರ್ಕಾರ ಬಹುತೇಕ ಐದು ವರ್ಷ ಪೂರ್ಣಗೊಳಿಸಿತು. ನಂತರ ಸಿದ್ದರಾಮಯ್ಯ ಸರ್ಕಾರ ಪೂರ್ಣ ಅವಧಿ ಮುಗಿಸಿತು. ನಡುವೆ ಧರ್ಮಸಿಂಗ್ ಸರ್ಕಾರವಿತ್ತು, ಆಪರೇಷನ್ ಕಮಲದ ನಂತರ ಅದು ಪತನವಾಯಿತು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮೂವರು ಮುಖ್ಯಮಂತ್ರಿ ಆಗಿದ್ದರು. ಈ ಸರ್ಕಾರದಲ್ಲಿ ಈಗಾಗಲೆ ಇಬ್ಬರು ಸಿಎಂ ಆಗಿದ್ದಾರೆ. ಮತ್ತೊಬ್ಬ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ, ಬಿಜೆಪಿ ಸ್ಥಿರ ಸರ್ಕಾರ ನೀಡುವುದಿಲ್ಲ ಎಂದು ಕಾಂಗ್ರೆಸ್ ಪ್ರಚಾರ ಮಾಡುತ್ತದೆ. ಸ್ಥಿರ ಸರ್ಕಾರ ಬೇಕು ಎಂದರೆ ಕಾಂಗ್ರೆಸ್‌ಗೆ ಮತ ನೀಡಬೇಕು ಎಂಬ ಅಭಿಪ್ರಾಯ ಮೂಡುವ ಸಾಧ್ಯತೆಯಿದೆ.
2. ಈಗಿನ ಬಿಜೆಪಿ ಸರ್ಕಾರದಲ್ಲಿ ಬೊಮ್ಮಾಯಿ ಎರಡನೇ ಮುಖ್ಯಮಂತ್ರಿ. ಈ ಹಿಂದೆ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರೂ ವೀರಶೈವ ಲಿಂಗಾಯತ ಸಮುದಾಯಕ್ಕೇ ಸೇರಿದವರು. ಬೊಮ್ಮಾಯಿ ಅವರನ್ನು ಬದಲಾವಣೆ ಮಾಡಿದರೂ ವೀರಶೈವ ಲಿಂಗಾಯತ ಸಮುದಾಯಕ್ಕೇ ಸಿಎಂ ಸ್ಥಾನ ನೀಡಬೇಕು. ಇಲ್ಲದಿದ್ದರೆ ಬೃಹತ್ ಪ್ರಮಾಣದಲ್ಲಿರುವ ಸಮುದಾಯಗಳ ಮತ ಕೈತಪ್ಪುವ ಆತಂಕವಿದೆ. ಇದರಿಂದ, ಇತರೆ ಸಮುದಾಯದ ನಾಯಕರು ಬೇಸರಗೊಳ್ಳುತ್ತಾರೆ.
3. ಇಲ್ಲಿ ಇನ್ನೊಂದು ಅಪಾಯವೂ ಇದೆ. ವೀರಶೈವ ಲಿಂಗಾಯತರನ್ನೇ ಮೂರನೇ ಮುಖ್ಯಮಂತ್ರಿಯಾಗಿ ನೇಮಿಸಿದರೆ ಬೇರೆ ಸಮುದಾಯಗಳು ಸಿಟ್ಟಾಗುತ್ತವೆ. ಬಿಜೆಪಿ ಕೇವಲ ಒಂದೇ ಸಮುದಾಯಕ್ಕೆ ಸೇರಿದೆಯೇ? ಈ ಹಿಂದಿನಿಂದಲೂ ಪಕ್ಷದ ಜತೆಗೆ ನಿಂತಿರುವ ಸಮುದಾಯಗಳಿಗೆ ಇದರಿಂದ ವ್ಯತಿರಿಕ್ತ ಸಂದೇಶ ರವಾನೆ ಆಗುತ್ತದೆ.
4. ವೀರಶೈವ ಲಿಂಗಾಯತ ಸಮುದಾಯದ ಇನ್ನೊಬ್ಬರನ್ನು ಸಿಎಂ ಮಾಡಬೇಕೆಂದರೆ ಬಸವರಾಜ ಬೊಮ್ಮಾಯಿ ಅವರಿಗಿಂತಲೂ ಹೆಚ್ಚು ಡೈನಮಿಕ್, ಹೆಚ್ಚು ಮಾಸ್ ಅಪೀಲ್ ಇರುವಂತಹ ನಾಯಕರು ಬೇಕು. ಈ ಸಮುದಾಯದ ನಾಯಕರಾಗಿ ಲಕ್ಷ್ಮಣ ಸವದಿ ಅವರನ್ನು ಬೆಳೆಸಬೇಕೆಂಬ ವರಿಷ್ಠರ ಪ್ರಯತ್ನ ಫಲ ನೀಡಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸಿಎಂ ಮಾಡಿದರೆ ನಿಯಂತ್ರಣ ಕಷ್ಟ. ಪಕ್ಷದ ಇತರೆ ಹಿರಿಯರಲ್ಲಿ ಅಸಮಾಧಾನ ಭುಗಿಲೇಳುತ್ತದೆ. ಯುವಕರು ಎಂದು ಬಿ.ವೈ. ವಿಜಯೇಂದ್ರ ಅವರನ್ನು ಸಿಎಂ ಸ್ಥಾನಕ್ಕೆ ಏರಿಸುವಷ್ಟು ದೊಡ್ಡ ರಿಸ್ಕ್ ಅನ್ನು ಈ ಸಮಯದಲ್ಲಿ ತೆಗೆದುಕೊಳ್ಳುವುದು ಸವಾಲಿನ ಕೆಲಸ. ಲಿಂಗಾಯತ ಸಮುದಾಯದ ಜಗದೀಶ ಶೆಟ್ಟರ್ ಅವರು ಬೊಮ್ಮಾಯಿ ಅವರಿಗಿಂತ ಡೈನಮಿಕ್ ಆಗಿಲ್ಲ. ಸಚಿವ ಮುರುಗೇಶ ನಿರಾಣಿ ಅವರೂ ಇದೇ ಸಾಲಿನಲ್ಲಿ ನಿಲ್ಲುತ್ತಾರೆ. ಹಾಗಾಗಿ ವೀರಶೈವ ಲಿಂಗಾಯತ ಸಮುದಾಯದಲ್ಲೂ ಬೊಮ್ಮಾಯಿ ಅವರಿಗಿಂತ ಉತ್ತಮ ಆಯ್ಕೆ ಸದ್ಯಕ್ಕೆ ಇಲ್ಲ.
5. ಚುನಾವಣೆಗೆ ಇನ್ನು ಆರೇಳು ತಿಂಗಳು ಮಾತ್ರ ಬಾಕಿ ಇದೆ. ಈ ಸಮಯದಲ್ಲಿ ಹೊಸ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪನೆ ಮಾಡಿದರೆ ಸಹಜವಾಗಿ ಕೆಲ ಗೊಂದಲಗಳು ಏರ್ಪಡುತ್ತವೆ. ಇತ್ತೀಚೆಗಷ್ಟೆ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಹೊಸದಾಗಿ ನೇಮಕ ಮಾಡಲಾಗಿದೆ. ಹೊಸದಾಗಿ ನೇಮಕವಾಗಿರುವ ರಾಜೇಶ್ ಅವರು ಪಕ್ಷದ ಹಿಡಿತವನ್ನು ಸಾಧಿಸಲು ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ. ಈ ನಡುವೆ ಉಂಟಾಗುವ ಗೊಂದಲ ನಿವಾರಣೆಗೆ ಕೇಂದ್ರ ನಾಯಕರು ಮಧ್ಯಪ್ರವೇಶ ಮಾಡಬೇಕಾಗುತ್ತದೆ. ಆದರೆ ಕೇಂದ್ರ ನಾಯಕರು ಈಗಾಗಲೆ ಗುಜರಾತ್ ಚುನಾವಣೆಯತ್ತ ಗಮನ ಹರಿಸಿದ್ದು, ಜನವರಿ ವೇಳೆಗೆ ಕರ್ನಾಟಕದತ್ತ ಧಾವಿಸುತ್ತಾರೆ.
6. ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಸ್ ಲೀಡರ್ ಅಲ್ಲ ಎನ್ನಲಾಗುತ್ತಿದ್ದರೂ, ಸಿಎಂ ಆದ ಬಳಿಕ ಬೊಮ್ಮಾಯಿ ತಮ್ಮದೇ ಕಾರ್ಯಶೈಲಿಯ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ. ಸ್ಪಷ್ಟವಾದ ಮಾತುಗಳಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಮಾತಿಗೆ ಪ್ರತಿಕ್ರಿಯೆ ನೀಡುತ್ತ ಬಂದಿದ್ದಾರೆ. ಹಿಂದು ಕಾರ್ಯಕರ್ತರ ಹತ್ಯೆ ವಿಚಾರದಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಹೇಳಲು ಆಸ್ಪದವಾಗದಂತೆ, ಅತ್ಯಂತ ತ್ವರಿತವಾಗಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೊಮ್ಮಾಯಿ ಆಗಾಗ ಹೇಳಿದ್ದಾರೆ. ಹರ್ಷ ಹತ್ಯೆ ಆರೋಪಿಗಳು ಜೈಲಿನಲ್ಲಿ ಮಜಾ ಮಾಡುತ್ತಿರುವುದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಗೃಹಸಚಿವರು ಖಡಕ್ ಆಗಿಲ್ಲದಿರುವುದು ಮುಖ್ಯ ಕಾರಣ ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿದೆ.
7. ಬಸವರಾಜ ಬೊಮ್ಮಾಯಿ ಅವರು ಬಿಜೆಪಿಗೆ ಹೊಸಬರಾದರೂ ರಾಜಕಾರಣಕ್ಕೆ ಹಳಬರು. ಹೈಕಮಾಂಡ್ ಜತೆಗೆ ಹೇಗೆ ಸಂವಹನ ನಡೆಸಬೇಕು ಎಂಬುದನ್ನು ಬಲ್ಲರು. ರಾಜ್ಯದಲ್ಲಿ ನಡೆಯುವ ಪ್ರತಿ ಘಟನೆಯನ್ನೂ ಚಾಚೂತಪ್ಪದೆ ಕೇಂದ್ರದ ವರಿಷ್ಠರಿಗೆ ತಲುಪಿಸುತ್ತಾರೆ. ಈ ಸಂವಹನಕ್ಕೆ ಕೇಂದ್ರದ ವರಿಷ್ಠರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಅಚ್ಚರಿಯೆಂಬಂತೆ ಒಂದು ಸ್ಥಾನ ಗೆಲ್ಲಿಸಿ ಕಳಿಸಿಕೊಟ್ಟ ಬೊಮ್ಮಾಯಿ ತಂತ್ರಕ್ಕೆ ಸ್ವತಃ ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಶುಭಾಶಯ ಹೇಳಿದ್ದರು. ಅಂದರೆ ಹೈಕಮಾಂಡ್ ಹಂತದಲ್ಲಿ ಬೊಮ್ಮಾಯಿ ಅವರಿಗೆ ನಕಾರಾತ್ಮಕ ಅಂಶಗಳು ಅತ್ಯಂತ ಕಡಿಮೆ.
8. ಪಕ್ಷ ಸಂಘಟನೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ ಹಾಗೂ ರಾಜ್ಯ ಬಿಜೆಪಿ ಕಚೇರಿಗೆ ಆಗಿಂದಾಗ ಭೇಟಿ ನೀಡುತ್ತಲೇ ಇರುತ್ತಾರೆ. ಹೀಗಾಗಿ ಕಾರ್ಯಕರ್ತರಿಗೆ ಬೊಮ್ಮಾಯಿ ತೀರಾ ದೂರದಲ್ಲಿದ್ದಾರೆ ಎಂಬ ಭಾವನೆ ಇಲ್ಲ.
9. ಪಕ್ಷದ ಯಾವುದೇ ಶಾಸಕರು ಬೊಮ್ಮಾಯಿ ಅವರನ್ನು ಭೇಟಿ ಮಾಡುವುದು ಕಷ್ಟದ ಕೆಲಸವಲ್ಲ. ನಿಗದಿತ ಸಮಯಕ್ಕೆ ಭೇಟಿಗೆ ಅವಕಾಶ ನೀಡುತ್ತಾರೆ. ಕಾನೂನಿನ ಚೌಕಟ್ಟಿನೊಳಗೆ ಹಾಗೂ ತಮ್ಮ ವಿವೇಚನೆಯೊಳಗೆ ಇದ್ದರೆ ಕೆಲಸ ಮಾಡಿಕೊಡುತ್ತಾರೆ. ಹೆಚ್ಚಿನ ರೀತಿಯಲ್ಲಿ ಜಿಲ್ಲಾ ಪ್ರವಾಸಗಳನ್ನು ನಡೆಸುತ್ತ, ಕಾಮಗಾರಿಗಳಿಗೆ ಚಾಲನೆ, ಉದ್ಘಾಟನೆ ಮಾಡುತ್ತಿದ್ದಾರೆ. ಹೋದೆಡೆಯಲ್ಲೆಲ್ಲ ಸ್ಥಳೀಯ ನಾಯಕರ ಕಾರ್ಯಗಳನ್ನು ವೇದಿಕೆ ಮೇಲಿಂದ ಹೊಗಳಿ ಸ್ಥಳೀಯವಾಗಿ ಅವರ ವರ್ಚಸ್ಸನ್ನು ಹೆಚ್ಚಿಸುತ್ತಿದ್ದಾರೆ. ಇದರಿಂದ ಶಾಸಕರಲ್ಲಿ ಅಸಮಾಧಾನವಿಲ್ಲ.
10. ಸಚಿವರು ಕಾರ್ಯನಿರ್ವಹಣೆ ಮಾಡಲು ಮುಕ್ತ ಅವಕಾಶ ನೀಡಿದ್ದಾರೆ. ಇಲಾಖೆಗಳ ಆಡಳಿತದಲ್ಲಿ ಹೆಚ್ಚಾಗಿ ಮೂಗು ತೂರಿಸುವುದಿಲ್ಲ. ಜಲಸಂಪನ್ಮೂಲ, ಕಾನೂನು ಸೇರಿ ಬೊಮ್ಮಾಯಿ ಅವರಿಗೆ ಹಿಡಿತ ಇರುವ ಇಲಾಖೆಗಳಲ್ಲಿ ಹಿರಿಯ ಸಚಿವರೇ ಇದ್ದಾರೆ. ಯುವ ಸಚಿವರು ತಮ್ಮ ಯೋಜನೆಗಳನ್ನು ತಾವೇ ರೂಪಿಸಲು ಸ್ವಾತಂತ್ರ್ಯ ನೀಡಿದ್ದಾರೆ, ಆದರೆ ಎಲ್ಲದರ ಮೇಲ್ವಿಚಾರಣೆಯನ್ನೂ ನಡೆಸುತ್ತಾರೆ. ಹಾಗಾಗಿ ಸಚಿವರಲ್ಲೂ ಬೊಮ್ಮಾಯಿ ಅವರ ಕುರಿತು ನಕಾರಾತ್ಮಕ ಎನ್ನುವಂತಹ ಅಂಶಗಳು ಹೆಚ್ಚಿಲ್ಲ.
11. ಕಾನೂನು ವಿಷಯಗಳ ಜತೆಗೆ ಆರ್ಥಿಕ ವಿಚಾರದಲ್ಲೂ ಬೊಮ್ಮಾಯಿ ಹೆಚ್ಚು ಅರಿವು ಹೊಂದಿದ್ದಾರೆ. ಇತ್ತೀಚೆಗೆ ಜಿಎಸ್‌ಟಿ ದರ ಸಮಿತಿಯ ಅಧ್ಯಕ್ಷರಾಗಿಯೂ ನೇಮಕವಾಗಿದ್ದಾರೆ. ಜಿಎಸ್‌ಟಿ ಸಭೆಯಲ್ಲಿ ಬೊಮ್ಮಾಯಿ ನೀಡಿದ ಪ್ರಸ್ತಾವನೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಯಥಾವತ್ತಾಗಿ ಅಳವಡಿಸಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಮೇಲೆ 40% ಲಂಚ ಆರೋಪ ಇದೆಯಾದರೂ ಅದು ಕೆಲ ಸಚಿವರ ಮೇಲೆ ಇದೆಯೇ ಹೊರತು, ಸಿಎಂ ಮೇಲೆ ನೇರವಾಗಿ ಆರೋಪಗಳು ಬಂದಿಲ್ಲ. ಹಾಗಾಗಿ ಆಡಳಿತಾತ್ಮಕವಾಗಿಯೂ ಕೇಂದ್ರದಲ್ಲಿ ಉತ್ತಮ ಅಭಿಪ್ರಾಯವಿದೆ.
12. ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಮುಖಂಡರ ಜತೆಗೆ ಆಗಿಂದಾಗ ಸಭೆಗಳನ್ನು ನಡೆಸುತ್ತ, ಸಂಪರ್ಕಿಸುತ್ತ ಮಾಹಿತಿ ಹಂಚಿಕೊಳ್ಳುತ್ತಾರೆ. ಆರ್‌ಎಸ್‌ಎಸ್‌ಗೆ ಹೆಚ್ಚು ಆಪ್ತವಾದಂತಹ ಗೋಹತ್ಯೆ ನಿಷೇಧ ಕಾನೂನು ಸುಗ್ರೀವಾಜ್ಞೆ ತಂದಿದ್ದಾರೆ, ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುತ್ತೇವೆ ಎಂದು ಘೋಷಿಸಿದ್ದಾರೆ, ಹಿಜಾಬ್ ವಿಚಾರದಲ್ಲಿಯೂ ನಿಪುಣತೆಯಿಂದ ಕಾನೂನಾತ್ಮಕವಾಗಿಯೇ ಜಯ ಗಳಿಸಿದ್ದಾರೆ. ಹೀಗಾಗಿ ಆರ್‌ಎಸ್‌ಎಸ್ ಕಡೆಯಿಂದಲೂ ವಿರೋಧದ ದನಿ ಬಲವಾಗಿಲ್ಲ. ಹಾಗಾಗಿ ಬಸವರಾಜ ಬೊಮ್ಮಾಯಿ ಸ್ಥಾನ ಪಲ್ಲಟ ಆಗುವ ಸಾಧ್ಯತೆ ಕಡಿಮೆ.
ಇದನ್ನೂ ಓದಿ | ಕಟೀಲು ಬದಲಾವಣೆ ಮುನ್ಸೂಚನೆ ನೀಡಿದ ಮಾಜಿ ಸಿಎಂ: ಮುಖ್ಯಮಂತ್ರಿಗೆ ಯಡಿಯೂರಪ್ಪ ಅಭಯ