Site icon Vistara News

Shivamogga attack | ಸುನಿಲ್‌ ಕೊಲೆ ಯತ್ನಕ್ಕೆ ಟ್ವಿಸ್ಟ್‌: ಸಮೀರ್‌ನ ಸೋದರಿಯನ್ನು ಚುಡಾಯಿಸಿದ್ದೇ ಕಾರಣ ಎಂದ ಎಸ್‌ಪಿ

Shivamogga- sunil sameer

ಶಿವಮೊಗ್ಗ: ಜಿಲ್ಲೆಯ ಸಾಗರದ ನೆಹರೂ ನಗರದಲ್ಲಿ ಬಜರಂಗ ದಳ ಸಹ ಸಂಚಾಲಕ ಸುನಿಲ್‌ ಹತ್ಯಾ ಯತ್ನ ಪ್ರಕರಣಕ್ಕೆ (Shivamogga attack) ಹೊಸ ತಿರುವು ಸಿಕ್ಕಿದೆ. ಇದು ಹಿಂದು ಮತ್ತು ಮುಸ್ಲಿಂ ಸಂಘರ್ಷ ಎಂದು ಇದುವರೆಗೆ ಹೇಳಲಾಗಿತ್ತು. ಆದರೆ, ಇದು ವೈಯಕ್ತಿಕ ಜಗಳದಿಂದ ನಡೆದಿರುವ ಹಲ್ಲೆ ಯತ್ನ. ಸುನಿಲ್‌ ತನ್ನ ಸೋದರಿಯನ್ನು ಚುಡಾಯಿಸಿದ್ದರಿಂದ ಸಿಟ್ಟುಗೊಂಡು ಸಮೀರ್‌ ಹಲ್ಲೆಗೆ ಮುಂದಾಗಿದ್ದಾನೆ ಎಂದು ಎಸ್‌ಪಿ ಮಿಥುನ್‌ ಕುಮಾರ್‌ ತಿಳಿಸಿದ್ದಾರೆ. ಸುನಿಲ್‌ ಸಮೀರ್‌ನ ಸೋದರಿಯನ್ನು ಚುಡಾಯಿಸಿದ್ದಕ್ಕೆ ಸಂಬಂಧಿಸಿದ ಕಾಲ್‌ ರೆಕಾರ್ಡ್ಸ್‌ ಕೂಡಾ ಸಿಕ್ಕಿದೆ ಎಂದು ಎಸ್ಪಿ ಹೇಳಿದ್ದಾರೆ.

ಬಜರಂಗ ದಳದ ನಗರ ಸಹ ಸಂಚಾಲಕ ಸುನೀಲ್ ಅವರು ಸೋಮವಾರ ಬೆಳಗ್ಗೆ ಬೈಕ್‍ನಲ್ಲಿ ತಮ್ಮ ಮನೆಯಿಂದ ಬಿ.ಎಚ್. ರಸ್ತೆಯ ಆಭರಣ ಜ್ಯುವೆಲರ್ಸ್ ಪಕ್ಕದ ಜಿಯೋ ಕಚೇರಿಗೆ ಹೋಗುತ್ತಿದ್ದಾಗ ಸಮೀರ್‌ ಎಂಬಾತ ತಲವಾರಿನಿಂದ ಹಲ್ಲೆ ಮಾಡಲು ಮುಂದಾಗಿದ್ದ. ಅದೃಷ್ಟವಶಾತ್‌ ಸುನಿಲ್‌ ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡಿದ್ದಾರೆ. ಸಮೀರ್‌ನ ಪತ್ತೆಗಾಗಿ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದ ಸಾಗರ ಟೌನ್ ಪೊಲೀಸರು ಸಮೀರ್‌ನನ್ನು ಬಂಧಿಸಿದ್ದಾರೆ. ಜತೆಗೆ ಆತನ ಜತೆ ಸೇರಿದ್ದಾರೆ ಎಂದು ಹೇಳಲಾದ ಇಮಿಯಾನ್‌ ಮತ್ತು ಮನ್ಸೂರ್‌ ಅವರನ್ನೂ ಬಂಧಿಸಲಾಗಿದೆ. ಇದೀಗ ಸಮೀರ್‌ನ ವಿಚಾರಣೆ ಸಂದರ್ಭ ಕೊಲೆ ಯತ್ನದ ಹಿಂದಿನ ಕಾರಣಗಳು ಬಯಲಾಗಿವೆ.

ಎಸ್‌ಪಿ ಮಿಥುನ್‌ ಕುಮಾರ್‌ ಹೇಳಿದ್ದೇನು?
ಸಾಗರದಲ್ಲಿ ನಡೆದಿರುವ ಘಟನೆ ವೈಯಕ್ತಿಕವಾದುದು. ಬಜರಂಗದಳದ ಸಹಸಂಚಾಲಕರಾಗಿರುವ ಸುನಿಲ್, ತನ್ನ ಸೋದರಿಯನ್ನು ಚುಡಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಸಮೀರ್‌ ವೈಯಕ್ತಿಕ ದ್ವೇಷದಿಂದ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿಸಿದರು.

ಸುನಿಲ್‌ ಕಳೆದ ನಾಲ್ಕೈದು ತಿಂಗಳಿನಿಂದ ಚುಡಾಯಿಸುತ್ತಿದ್ದ. ಈ ವಿಷಯದಲ್ಲಿ ಸಮೀರ್‌ ಹಲವು ಬಾರಿ ಸುನಿಲ್‌ಗೆ ಎಚ್ಚರಿಕೆಯನ್ನೂ ನೀಡಿದ್ದ ಎನ್ನಲಾಗಿದೆ. ಇಷ್ಟಾಗಿಯೂ ಸುನಿಲ್‌, ಸಮೀರ್‌ನ ತಂಗಿಯ ಫೋನ್‌ ಕೂಡಾ ನಂಬರ್‌ ಕೂಡಾ ಕೇಳಿದ್ದ ಎನ್ನಲಾಗಿದೆ. ಹೀಗಾಗಿ ಸಮೀರ್, ಸುನಿಲ್ ವಿರುದ್ಧ ಸಿಕ್ಕಾಪಟ್ಟೆ ಸಿಟ್ಟಾಗಿದ್ದ ಎಂದು ಎಸ್‌ಪಿ ವಿವರಿಸಿದ್ದಾರೆ.

ʻʻಎರಡ್ಮೂರು ಬಾರಿ ಸಮೀರ್ ಸುನಿಲ್‌ಗೆ ಎಚ್ಚರಿಕೆ ನೀಡಿದ್ದ. ತಂಗಿಯ ವಿಷಯಕ್ಕೆ ಬರಬೇಡ ಎಂದು ಹೇಳಿದ್ದಾನೆ. ಆದರೆ, ಸುನಿಲ್‌ ಮತ್ತೆ ಮತ್ತೆ ತನ್ನ ಚಾಳಿ ಮುಂದುವರಿಸಿದ್ದ. ಸೋಮವಾರ ಸಮೀರ್‌ ಮೇಕೆಗೆ ಹುಲ್ಲು ತರಲೆಂದು ಹೊರಟಿದ್ದ. ಈ ಸಂದರ್ಭದಲ್ಲಿ ಸುನಿಲ್‌ ದ್ವಿಚಕ್ರ ವಾಹನದಲ್ಲಿ ಬಂದಿದ್ದ. ಆಗ ಹುಲ್ಲು ಕೊಯ್ಯಲೆಂದು ಹಿಡಿದಿದ್ದ ಕತ್ತಿಯನ್ನೇ ಹಿಡಿದು ಆತನ ಕಡೆಗೆ ಧಾವಿಸಿದ್ದ. ಈ ನಡುವೆ ಅವರಿಬ್ಬರು ಬೈದಾಡಿಕೊಂಡಿದ್ದಾರೆʼʼ ಎಂದು ಪೊಲೀಸರು ತಿಳಿಸಿದರು.

ಇತರ ಇಬ್ಬರ ಪಾತ್ರವೇನು?
ಈ ನಡುವೆ ಸಮೀರ್‌ ಜತೆಗೆ ಇಮಿಯಾನ್‌ ಮತ್ತು ಮನ್ಸೂರ್‌ನನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ. ಇವರು ಈ ಹಲ್ಲೆ ಪ್ರಕರಣದಲ್ಲಿ ಹೇಗೆ ಶಾಮೀಲಾಗಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ. ಕ್ರಿಕೆಟ್ ಮ್ಯಾಚ್ ಸಂಬಂಧ ಸಮೀರ್, ಇಮಿಯಾನ್, ಮನ್ಸೂರ್ ಒಂದು ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಕ್ರಿಕೆಟ್‌ ಮುಗಿಸಿ ಬಂದು ಲಾಡ್ಜ್‌ನಲ್ಲಿ ಉಳಿದಿದ್ದರು. ಹೀಗಾಗಿ ಅಲ್ಲೇನಾದರೂ ಕೊಲೆ ಯತ್ನದ ಬಗ್ಗೆ ಚರ್ಚೆ ನಡೆದು ಕಾರ್ಯಗತಗೊಳಿಸಲಾಯಿತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾಲ್‌ ರೆಕಾರ್ಡ್ಸ್‌ ಇದೆ ಎಂದ ಎಸ್‌ಪಿ
ಬಜರಂಗ ದಳ ಸಹ ಸಂಚಾಲಕ ಸುನಿಲ್‌ ಸಮೀರ್‌ನ ಸೋದರಿಗೆ ಚುಡಾಯಿಸಿದ ವಿಚಾರಕ್ಕೆ ಸಂಬಂಧಿಸಿ ಕರೆಗಳ ದಾಖಲೆಗಳು ಸಿಕ್ಕಿವೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಇಂಥ ವೈಯಕ್ತಿಕ ವಿಚಾರಗಳಿದ್ದಾಗ ಯಾರೂ ಈ ರೀತಿ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಪೊಲೀಸರ ಗಮನಕ್ಕೆ ತರಬೇಕು ಎಂದು ಎಸ್‌ಪಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Shivamogga attack | ಬಜರಂಗ ದಳ ಮುಖಂಡನ ಕೊಲೆ ಯತ್ನ ಖಂಡಿಸಿ ಸಾಗರ ಬಂದ್‌, ಆಜಾದ್‌ ರಸ್ತೆಯಲ್ಲಿ ಉದ್ವಿಗ್ನ ಸ್ಥಿತಿ

Exit mobile version