Site icon Vistara News

ಆಕಸ್ಮಿಕ ಫೈರ್‌ಗೆ ಮೃತಪಟ್ಟವನ ಪ್ರಕರಣಕ್ಕೆ ಟ್ವಿಸ್ಟ್; ತಪ್ಪಿಸಿಕೊಳ್ಳಲು ಬಂದೂಕು ಬದಲಿಸಿ ಸಿಕ್ಕಿಬಿದ್ದ ಸ್ನೇಹಿತರು

ಬಂದೂಕು

ಶಿವಮೊಗ್ಗ: ನೇಗಿಲೋಣಿ ಯುವಕ ಅಂಬರೀಶ್ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅಂಬರೀಶ್‌ ಸಾವು ಆತನ ಬಳಿಯಿದ್ದ ನಾಡಬಂದೂಕು ಸಿಡಿದಿದ್ದರಿಂದ ಆಗಿಲ್ಲ, ಬದಲಿಗೆ ಲೈಸೆನ್ಸ್‌ ಹೊಂದಿದ್ದ ಇನ್ನೊಬ್ಬನ ಬಂದೂಕಿನಿಂದ ಹಾರಿದ ಗುಂಡು ಅದಾಗಿದೆ. ಅದೂ ಸಹ ಆಕಸ್ಮಿಕ ಫೈರ್‌ ಆಗಿಯೇ ಯುವಕ ಮೃತಪಟ್ಟಿದ್ದಾನೆ. ಆದರೆ, ಎಲ್ಲಿ ತಮ್ಮ ಮೇಲೆ ಈ ಕೇಸ್‌ ಬಂದುಬಿಡುತ್ತದೆ ಎಂದು ಹೆದರಿ ಮಾಡಿಕೊಂಡ ಎಡವಟ್ಟೇ ಈಗ ಪೊಲೀಸರ ಅತಿಥಿಯಾಗುವಂತೆ ಮಾಡಿದೆ.

ಆ.18ರಂದು ಅಂಬರೀಶ್ ತನ್ನ ಸ್ನೇಹಿತರಾದ ಕೀರ್ತಿ(30) ಮತ್ತು ನಾಗರಾಜ(39) ಜತೆ ತೋಟಕ್ಕೆ ಕಾಡು ಪ್ರಾಣಿಗಳನ್ನು ಓಡಿಸಲು ಹೋಗಿದ್ದರು. ಆಗ ಆಕಸ್ಮಿಕವಾಗಿ ಬಂದೂಕು ಮಿಸ್‌ ಫೈರ್‌ ಆಗಿದ್ದು, ಅಂಬರೀಶ್‌ ಸ್ಥಳದಲ್ಲೇ ಮೃತಪಟ್ಟಿದ್ದರು. ಮೊದಲಿಗೆ ಅಂಬರೀಷ್‌ ಬಳಿಯಿದ್ದ ನಾಡ ಬಂದೂಕು ಮಿಸ್‌ ಫೈರ್‌ ಆಗಿ ದುರಂತ ಸಂಭವಿಸಿರಹುದು ಎಂದು ಭಾವಿಸಲಾಗಿತ್ತು.

ಇದನ್ನೂ ಓದಿ | ದೇವಸ್ಥಾನದ ಬಳಿ ನಡೆದ ಕೊಲೆ ಕಾರಣ ಬಯಲು: ನಾನು ಮಲಗೋ ಜಾಗದಲ್ಲಿ ನೀನು ಮಲಗಿದ್ಯಾಕೆ ಎಂದು ಹತ್ಯೆ!

ಆದರೆ, ಪೋಸ್ಟ್‌ ಮಾರ್ಟಂ ವರದಿ ಪ್ರಕಾರ, ಅಂಬರೀಷ್‌ ಮೇಲೆ ಹಾರಿದ್ದ ಗುಂಡು ನಾಡಬಂಧೂಕಿನದ್ದಾಗಿರಲಿಲ್ಲ. ಹೀಗಾಗಿ ಕೀರ್ತಿ ಮತ್ತು ನಾಗರಾಜನನ್ನು ವಿಚಾರಣೆಗೊಳಪಡಿಸಿದಾಗ ಸಂಪೂರ್ಣ ವೃತ್ತಾಂತ ಬೆಳಕಿಗೆ ಬಂದಿದೆ. ಕಾಡಿಗೆ ಸ್ನೇಹಿತರ ಜತೆ ತೆರಳಿದ್ದಾಗ ಅಂಬರೀಶ್‌ ನಾಡ ಬಂದೂಕನ್ನು ತೆಗೆದುಕೊಂಡು ಹೋಗಿದ್ದ. ಹಾಗೆಯೇ ನಾಗರಾಜ ಕೂಡ ಲೈಸೆನ್ಸ್‌ ಹೊಂದಿದ್ದ ಬಂದೂಕನ್ನು ತೆಗೆದುಕೊಂಡು ಹೋಗಿದ್ದ. ಆದರೆ, ನಾಗರಾಜನ ಬಂಧೂಕು ಮಿಸ್‌ ಫೈರ್‌ ಆಗಿ ಅಂಬರೀಷ್‌ ಮೃತಪಟ್ಟಿದ್ದರಿಂದ ಕೊಲೆ ಕೇಸ್‌ ಮೈಮೇಲೆ ಬರಲಿದೆ ಎಂದು ಹೆದರಿ, ಅಂಬರೀಷ್‌ ಬಂದೂಕೇ ಫೈರ್‌ ಆಗಿ ಮೃತಪಟ್ಟಿದ್ದಾನೆಂದು ಬಿಂಬಿಸಲಾಗಿದೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲಾಗಿದೆ.

ಮೂವರೂ ಸೇರಿ ಕಾಡು ಬೆಕ್ಕನ್ನು ಬೇಟೆ ಮಾಡಿರುವುದಾಗಿ ಹೇಳಿರುವ ಆರೋಪಿ ಕೀರ್ತಿ, ಶಿಕಾರಿಗೆ ಹೋಗಿದ್ದಾಗ ಅಂಬರೀಶ್‌ ಲೈಸೆನ್ಸ್‌ ಹೊಂದಿದ್ದ ನಾಗರಾಜನ ಬಂದೂಕು ಮಿಸ್‌ ಫೈರ್‌ ಆಗಿ ಮೃತಪಟ್ಟಿದ್ದಾನೆ. ಆದರೆ ಕೃತ್ಯ ಮರೆಮಾಚಲು ನಾಗರಾಜ್ ಜತೆ ಸೇರಿ ಬಂದೂಕು ಬದಲಾಯಿಸಿದ್ದಾಗಿ ಕೀರ್ತಿ ಹೇಳಿಕೆ ನೀಡಿದ್ದಾನೆ. ಹೀಗಾಗಿ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ | ಗಣೇಶ ವಿಸರ್ಜನೆ | ಡಿಜೆ ಸೌಂಡ್‌ಗೆ ವ್ಯಕ್ತಿ ಹೃದಯಾಘಾತದಿಂದ ಸಾವು?

Exit mobile version