Site icon Vistara News

Murder Case : ಭೂ ವಿಜ್ಞಾನಿ ಪ್ರತಿಮಾ ಕೊಲೆಗೆ ಟ್ವಿಸ್ಟ್‌; ಹಣ-ಒಡವೆ ಕದಿಯೋಕೆ ಸ್ಕೆಚ್‌ ಹಾಕಿದ್ದ ಹಂತಕ!

geologist Pratima murder case

ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ (Mines and Geology) ಇಲಾಖೆಯ ಹಿರಿಯ ಭೂವಿಜ್ಞಾನಿ (Senior Scientist) ಪ್ರತಿಮಾ (45) ಅವರನ್ನು ನ. 4ರಂದು ಕುತ್ತಿಗೆಗೆ ಹಗ್ಗ ಬಿಗಿದು ಕತ್ತು ಕೊಯ್ದು ಕೊಲೆ (Murder Case) ಮಾಡಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಕೆಲಸದಿಂದ ತೆಗೆದ ಕಾರಣಕ್ಕೆ ಆರೋಪಿ ಕಿರಣ್‌ ಕೊಲೆ ಮಾಡಿದ್ದ ಎಂದು ತಪ್ಪೊಪ್ಪಿಕೊಂಡಿದ್ದ. ಆದರೆ, ಈಗ ವಿಚಾರಣೆ ವೇಳೆ ಆತನ ಮತ್ತೊಂದು ಮುಖ ಬಯಲಾಗಿದೆ. ಅವರ ಬಳಿ ಹಣ, ಒಡವೆ ಇರುವುದು ತಿಳಿದಿದ್ದರಿಂದಲೇ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ.

ಪೊಲೀಸರ ವಶದಲ್ಲಿದ್ದಾಗ ಮೊದಲಿಗೆ ತನ್ನ ಕೆಲಸ ತೆಗೆದ ಕೋಪಕ್ಕೆ ಕೊಲೆ ಮಾಡಿದ್ದೆ ಎಂದಿದ್ದ. ನನ್ನ ತಪ್ಪನ್ನು ಕ್ಷಮಿಸಿ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಿ ಎಂದಿದ್ದೆ. ಅದಕ್ಕೆ ಒಪ್ಪದೇ ಇದ್ದಾಗ ಹೀಗೆ ಮಾಡಿದೆ ಎಂದು ಕಥೆ ಕಟ್ಟಿದ್ದ ಕಿರಣ್‌, ನಂತರ ಅಲ್ಲಿಯೇ ಇದ್ದ ಹದಿನೈದು ಸಾವಿರ ರೂಪಾಯಿಯನ್ನು ತೆಗೆದುಕೊಂಡು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದೆ ಎಂದು ಹೇಳಿಕೆ ನೀಡಿದ್ದ.

5 ಲಕ್ಷ ರೂ. ನಗದು, ಚಿನ್ನ ದೋಚಿದ್ದ ಕಿರಣ್‌

ಆರೋಪಿ ಕಿರಣ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಮತ್ತಷ್ಟು ವಿಚಾರಗಳು ಗೊತ್ತಾಗುತ್ತಾ ಹೋಗಿದೆ. ಕೊಲೆ ಬಳಿಕ ಮನೆಯಲ್ಲಿ ಇದ್ದ ಹಣ ಮತ್ತು ಚಿನ್ನವನ್ನು ಕಿರಣ್‌ ದೋಚಿದ್ದ. ಮನೆಯಲ್ಲಿ ಇದ್ದ ಐದು ಲಕ್ಷ ರೂ. ನಗದನ್ನು ಕದ್ದೊಯ್ದಿದ್ದ. ಪ್ರತಿಮಾ ಕೈಯಲ್ಲಿ ಇದ್ದ ಎರಡು ಚಿನ್ನದ ಬಳೆ, ಒಂದು ಬ್ರೇಸ್‌ಲೆಟ್‌ ದೋಚಿದ್ದ. ಇವುಗಳ ಮೌಲ್ಯ ಸರಿಸುಮಾರು ಮೂರೂವರೆಯಿಂದ ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನ ದೋಚಿದ್ದ.

ಸ್ನೇಹಿತನ ಕೈಗೆ ಕೊಟ್ಟಿದ್ದ!

ಈ ಒಡವೆಗಳನ್ನು ತೆಗೆದುಕೊಂಡು ಹೋಗಿ ಕೋಣನ ಕುಂಟೆ ಬಳಿಯ ಗೆಳೆಯ ಶಿವು ನಿವಾಸದಲ್ಲಿ ಇಟ್ಟಿದ್ದ ಎನ್ನಲಾಗಿದೆ. ನನಗೆ ಯಾರೋ ಕೊಡಬೇಕಿತ್ತು. ನಿಮ್ಮ ಮನೆಯಲ್ಲಿ ಇರಲಿ. ನಾನು ನಂತರ ಮಲೆ ಮಹದೇಶ್ವರ ಬೆಟ್ಟ ಹೋಗಿ ಬಂದ ಮೇಲೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿ ನಂಬಿಸಿದ್ದ. ಆರೋಪಿ ವಿಚಾರಣೆ ಆಗುವವರೆಗೂ ಕಿರಣ್ ಕೊಟ್ಟಿದ್ದ ಹಣ ಯಾವುದು ಎಂಬುದು ಶಿವುಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಹಣ ತಂದು ಕೊಟ್ಟಿದ್ದ ಎಂಬುದು ಪೊಲೀಸರಿಗೆ ಸ್ಪಷ್ಟವಾದ ಹಿನ್ನೆಲೆಯಲ್ಲಿ ಶಿವನನ್ನು ಪೊಲೀಸರು ಸಾಕ್ಷಿಯನ್ನಾಗಿ ಮಾಡಿದ್ದಾರೆ. ಅಲ್ಲದೆ, ಆರೋಪಿ ಕಡೆಯಿಂದ ಐದು ಲಕ್ಷ ರೂ. ನಗದು ಮತ್ತು ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: KRS Backwater : ಕೆಆರ್‌ಎಸ್ ಹಿನ್ನೀರಿನಲ್ಲಿ ಮುಳುಗಿ ಮೈಸೂರಿನ ಮೂವರು ಸಾವು

ಪ್ಲ್ಯಾನ್‌ ಮಾಡಿಯೇ ನುಗ್ಗಿದ್ದ ಕಿರಣ್!‌

ಹೇಗೂ ತನ್ನನ್ನು ಕೆಲಸದಿಂದ ತೆಗೆಯಲಾಗಿದೆ. ಅಲ್ಲದೆ, ಪ್ರತಿಮಾ ಮನೆಯಲ್ಲಿ ಹಣ ಹಾಗೂ ಒಡವೆ ಇದ್ದೇ ಇರುತ್ತದೆ. ಹೀಗಾಗಿ ಅವುಗಳನ್ನು ಕದಿಯಬೇಕು. ಒಂದು ವೇಳೆ ವಿಚಾರ ಗೊತ್ತಾದರೆ ಪ್ರತಿಮಾರನ್ನು ಅಲ್ಲಿಯೇ ಕೊಲೆ ಮಾಡಬೇಕು ಎಂದು ತೀರ್ಮಾನಿಸಿ ಕಿರಣ್‌ ಅಲ್ಲಿಗೆ ಬಂದಿದ್ದ. ಆದರೆ, ಕೊಲೆ ಮಾಡಲು ಆತ ಯಾವುದೇ ಆಯುಧವನ್ನು ತಂದಿರಲಿಲ್ಲ. ಬದಲಾಗಿ ಕೊಲೆ ಮಾಡುವ ನಿರ್ಧಾರಕ್ಕೆ ಬಂದೇ ಅಲ್ಲಿಗೆ ಬಂದಿದ್ದ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.

Exit mobile version