Site icon Vistara News

ಪ್ರತಿಭಟನೆಯ ಬಿಸಿ| ಸರಣಿ ಟ್ವೀಟ್‌ ಮಾಡಿ ಎಚ್ಚರಿಸಿದ ಸಿದ್ದರಾಮಯ್ಯ; ದೈಹಿಕ ವಿರೋಧ ಸಲ್ಲ ಎಂದ ಸಿಎಂ

siddaramaiah and bommai

ಬೆಂಗಳೂರು: ಮುಸ್ಲಿಂ ಪ್ರದೇಶಗಳಲ್ಲಿ ಸಾವರ್ಕರ್‌ ಫೋಟೊವನ್ನು (Savarkar Issue) ಯಾಕೆ ಹಾಕಬೇಕಿತ್ತು ಎಂಬ ತಮ್ಮ ಹೇಳಿಕೆ ವಿರುದ್ಧ ಪ್ರತಿಭಟನೆ ತೀವ್ರವಾಗುತ್ತಿದ್ದಂತೆಯೇ ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಬದಲಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ, ಮೊಟ್ಟೆ ಎಸೆಯುವ ಗೂಂಡಾಗಿರಿಯ ರಾಜಕೀಯ ಶುರುಮಾಡಬೇಡಿ. ಅದನ್ನು ಅಂತ್ಯ ಮಾಡುವುದು ಹೇಗೆ ಎಂದು ನಮಗೂ ಗೊತ್ತು. ನಮ್ಮ ಕಾರ್ಯಕರ್ತರು ನಿಮ್ಮವರಂತೆಯೇ ಬೀದಿಗಿಳಿದರೆ ನೀವು ಮನೆಯಿಂದ ಹೊರಬರುವುದು ಕೂಡ ಕಷ್ಟವಾಗಬಹುದು. ಯು.ಪಿ ಮಾದರಿ ಎಂದರೆ ಇದೆನಾ?ʼʼ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

“ನಾವು ಸಮಾಜದಲ್ಲಿ ಸಾಮರಸ್ಯ ಬಯಸುವವರು, ಎಲ್ಲ ಜಾತಿ, ಧರ್ಮದ ಜನರು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು ಎಂದು ಬಯಸುವವರು ನಾವು. ಬಿಜೆಪಿಯವರು ಮತ ಧ್ರುವೀಕರಣಕ್ಕಾಗಿ ಸಮಾಜ ಒಡೆಯುವವರು. ಗೋಡ್ಸೆಗೆ ಪೂಜೆ ಮಾಡುವುದು ದೇಶಪ್ರೇಮವೇ?ʼʼ ಎಂದು ಕೇಳಿರುವ ಅವರು, ಶಿವಮೊಗ್ಗದ ಗಲಭೆಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪನವರೇ ಕಾರಣ. ಸಚಿವ ಸ್ಥಾನ ಕಳೆದುಕೊಂಡು ಮನೆಯಲ್ಲಿರುವ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನ ಖಾತರಿಯೂ ಇಲ್ಲ. ಇದರಿಂದ ಹತಾಶರಾಗಿರುವ ಅವರು ಆರ್‌ಎಸ್‌ಎಸ್‌ ಒಡೆಯರನ್ನು ಒಲಿಸಿಕೊಳ್ಳಲು ಇದೆಲ್ಲ ಮಾಡುತ್ತಿದ್ದಾರೆʼʼ ಎಂದಿದ್ದಾರೆ.

ಸಾಧನೆಯ ಬಲದಿಂದ ಚುನಾವಣೆಯನ್ನು ಎದುರಿಸಲಿಕ್ಕಾಗದ ಬಿಜೆಪಿ ನಾಯಕರಿಗೆ ಸುಳ್ಳು ಸುದ್ದಿ ಮತ್ತು ಆಧಾರರಹಿತ ಆರೋಪಗಳೇ ಬಂಡವಾಳ. ಹಳೆಯ ಆಟವನ್ನು ಬಿಜೆಪಿ ರಾಜ್ಯದಲ್ಲಿ ಮತ್ತೆ ಶುರುಮಾಡಿದೆ. ಈ ಸುಳ್ಳಿನ ಸರದಾರರಿಗೆ ಸತ್ಯವನ್ನು ಎದುರಿಸುವ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ದೈಹಿಕ ವಿರೋಧ ಸಲ್ಲ
ತಾವು ವಿರೋಧ ಪಕ್ಷದ ನಾಯಕರಾಗಿದ್ದು, ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ತನ್ನದೇ ಆದ ಗೌರವ ಇರುತ್ತದೆ. ಯಾವುದೇ ವಿಷಯದ ಬಗ್ಗೆ ಬಿನ್ನಾಭಿಪ್ರಾಯವಿದ್ದರೆ ಅದನ್ನು ಬಲವಾದ ಅಭಿಪ್ರಾಯಗಳೊಂದಿಗೆ ವಿರೋಧಿಸಬೇಕು. ಯಾವುದೇ ದೈಹಿಕ ಕಾರ್ಯದಿಂದಲ್ಲ. ಇದನ್ನು ಎಲ್ಲರೂ ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವಿಟ್ಟರ್‌ನಲ್ಲಿಯೇ ಸಿದ್ದರಾಮಯ್ಯರಲ್ಲಿ ಮನವಿ ಮಾಡಿದ್ದಾರೆ.

ವಿ.ಡಿ.ಸಾವರ್ಕರ್ ಬಗ್ಗೆ ಅಭಿಮಾನ ಇದ್ದರೆ ಅವರ ಬಗ್ಗೆ ಪುಸ್ತಕ ಬರೆದು, ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ವಿರುದ್ಧದ ಆರೋಪಗಳಿಗೆ ಉತ್ತರ ಕೊಡಿ. ಕೋಮುಗಲಭೆ ಹುಟ್ಟುಹಾಕಲು ಅವರ ಪೋಟೊವನ್ನು ಅಸ್ತ್ರವನ್ನಾಗಿ ಯಾಕೆ ಮಾಡುತ್ತಿದ್ದೀರಿ? ಇದನ್ನೇ ನಾನು ಪ್ರಶ್ನಿಸಿದ್ದು ಎಂದಿರುವ ಅವರು, ಮಹಾತ್ಮ ಗಾಂಧೀಜಿಯವರ ಪೋಟೊ ಹಾಕಿ ಜಾಹೀರಾತು ಕೊಡುತ್ತಿರುವ ರಾಜ್ಯದ ಬಿಜೆಪಿಯವರು, ತಮ್ಮದೇ ಪಕ್ಷದ ಕಾರ್ಯಕರ್ತರು ಗಾಂಧೀಜಿ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ಪೋಟೊ ಮೆರವಣಿಗೆ ಮಾಡಿದ್ದಾರೆ. ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಸಾವರ್ಕರ್ ಅವರನ್ನು ಹೊತ್ತು ಮೆರೆಯುತ್ತಿರುವ ಬಿಜೆಪಿ ನಾಯಕರಲ್ಲಿ ಯಾರಾದರೂ 52 ವರ್ಷಗಳ ಕಾಲ ಆರ್ ಎಸ್ ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜವನ್ನು ಯಾಕೆ ಹಾರಿಸಿರಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುತ್ತೀರಾ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಪೋಟೊವನ್ನು ಪಕ್ಷದ ಕಚೇರಿಯಲ್ಲಿಯೇ ಕಸದ ಬುಟ್ಟಿಗೆ ಎಸೆದಿರುವ ಬಿಜೆಪಿ ನಾಯಕರ ಹೃದಯದೊಳಗೆ ಗಾಂಧೀಜಿಯೂ, ಇಲ್ಲ ಅಂಬೇಡ್ಕರ್ ಅವರೂ ಇಲ್ಲ ಅವರೊಳಗೆ ಇರುವುದು ನಾಥುರಾಮ್ ಗೋಡ್ಸೆ ಮಾತ್ರ. ಈ ಸತ್ಯವನ್ನು ಮೊದಲು ಒಪ್ಪಿಕೊಳ್ಳಿ ಎಂದಿದ್ದಾರೆ.

ಇದನ್ನೂ ಓದಿ| ಸಿದ್ದರಾಮಯ್ಯಗೆ ಹಾಸನದಲ್ಲಿ ಪ್ರತಿಭಟನೆಯ ಬಿಸಿ; ಚಿಕ್ಕಮಗಳೂರಿನಲ್ಲಿಯೂ ನಾಳೆ ಪ್ರತಿಭಟನೆ

Exit mobile version