ಬೆಂಗಳೂರು: ಟೊಮ್ಯಾಟೊ ಸಹಿತ ವಾಹನ ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಆರ್‌ಎಂಸಿ ಯಾರ್ಡ್ ಬಳಿ ವಾಹನದಲ್ಲಿ ಟೊಮ್ಯಾಟೊ ಸಾಗಿಸುತ್ತಿದ್ದಾಗ, ಬಂಧಿತ ಆರೋಪಿಗಳು ಸೇರಿ ಐವರು, ರೈತನ ಮೇಲೆ ಹಲ್ಲೆ ನಡೆಸಿ 250 ಕೆ.ಜಿ ಟೊಮ್ಯಾಟೊ ತುಂಬಿದ್ದ ವಾಹನವನ್ನು ಹೈಜಾಕ್ (Tomatoes Stolen) ಮಾಡಿದ್ದರು.
ತಮಿಳುನಾಡು ಮೂಲದ ಭಾಸ್ಕರ ಮತ್ತು ಸಿಂಧುಜಾ ಬಂಧಿತ ದಂಪತಿ. ಜುಲೈ 8ರಂದು ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ರೈತರೊಬ್ಬರು ಕೋಲಾರಕ್ಕೆ ವಾಹನದಲ್ಲಿ ಟೊಮ್ಯಾಟೊ ಸಾಗಿಸುತ್ತಿದ್ದರು. ಆ ವಾಹನವನ್ನು ಕಾರಿನಲ್ಲಿ ಬಂದಿದ್ದ ಮೂವರು ಹಿಂಬಾಲಿಸಿದ್ದರು. ಆರ್‌ಎಂಸಿ ಯಾರ್ಡ್ ಠಾಣೆ ವ್ಯಾಪ್ತಿಗೆ ಬಂದಾಗ ವಾಹನ ಟಚ್ ಆದಂತೆ ನಾಟಕವಾಡಿ ಟೊಮ್ಯಾಟೊ ತುಂಬಿದ್ದ ಬೊಲೆರೋ ನಿಲ್ಲಿಸಿ ಡ್ರೈವರ್‌ಗೆ ಹಲ್ಲೆ ಮಾಡಿದ್ದರು.
ನಂತರ ಗಾಡಿ ಡ್ಯಾಮೇಜ್ ಆಗಿದೆ, ಹಣ ಕೊಡು ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ರೈತ ಹಣ ಇಲ್ಲ ಎಂದಾಗ ಮೊಬೈಲ್ ಮೂಲಕ ಹಣ ಟ್ರಾನ್ಸ್‌ಫರ್ ಮಾಡಿಸಿಕೊಂಡಿದ್ದರು. ನಂತರ ರೈತ ಮತ್ತು ಚಾಲಕನ ಸಮೇತ ಟೊಮ್ಯಾಟೊ ತುಂಬಿದ್ದ ಇಡೀ ಗಾಡಿಯನ್ನೇ ಹೈಜಾಕ್ ಮಾಡಿಕೊಂಡು ಹೋಗಿದ್ದರು. ಬಳಿಕ ಅವರನ್ನು ಚಿಕ್ಕಜಾಲ ಬಳಿ ಬಿಟ್ಟು ಟೊಮ್ಯಾಟೊ ತುಂಬಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದರು.
ಇದನ್ನೂ ಓದಿ | Youth drowned : ಕತ್ತಲಲ್ಲಿ ಮೀನು ಹಿಡಿಯಲು ಹೋದ ಯುವಕರ ಸಾವು!
ಆರೋಪಿಗಳು ವಾಹನ ಸಮೇತ ಚೆನ್ನೈಗೆ ತೆರಳಿ 3 ಲಕ್ಷ ರೂ. ಮೌಲ್ಯದ ಟೊಮ್ಯಾಟೊಗಳನ್ನು ಮಾರಾಟ ಮಾಡಿದ ನಂತರ ಬೆಂಗಳೂರಿನಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಲಾಡಿ ಜೋಡಿಯನ್ನು ಆರ್‌ಎಂಸಿ ಯಾರ್ಡ್ ಪೊಲೀಸರು ಶನಿವಾರ ಬಂಧಿಸಿದ್ದು, ಇನ್ನುಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಯುವತಿಗೆ ಲೈಂಗಿಕ ಕಿರುಕುಳ ನೀಡಿದ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸವಾರ ಅರೆಸ್ಟ್
ಬೆಂಗಳೂರು: ಬೆಂಗಳೂರಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. (Physical Abuse) ಬೈಕ್ ಸವಾರ ಗುರು ವೆಂಕಟಪ್ಪ ಬಂಧಿತ ಆರೋಪಿಯಾಗಿದ್ದಾನೆ. ಹಾವೇರಿ ಮೂಲದ ಗುರುವೆಂಕಟಪ್ಪ ಸಂಪಂಗಿರಾಮನಗರದಲ್ಲಿ ಸ್ನೇಹಿತನೊಂದಿಗೆ ವಾಸವಿದ್ದ.
ಗುರು ವೆಂಕಟಪ್ಪ ಶುಕ್ರವಾರ ರೂಂನಲ್ಲಿದ್ದಾಗ ಗೆಳೆಯನ ಬೈಕ್ ನಲ್ಲಿ ಹೊರ ಬಂದಿದ್ದ. ಈ ವೇಳೆ ಅದೇ ಬೈಕ್ ನಲ್ಲಿ ರ‍್ಯಾಪಿಡೋ ಮುಖಾಂತರ ಯುವತಿಯನ್ನು ಪಿಕ್ ಮಾಡಿದ್ದ. ಮಾರ್ಗ ಮಧ್ಯೆ ಯುವತಿ ಜೊತೆ ಆತ ಅಸಭ್ಯವಾಗಿ ವರ್ತಿಸಿದ್ದ.
ಈ ಬಗ್ಗೆ ಟ್ವಿಟರ್ ನಲ್ಲಿ ಯುವತಿ ಮಾಹಿತಿ ಹಂಚಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಏನಿದು ಪ್ರಕರಣ? ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ ಯುವತಿಗೆ ಲೈಂಗಿಕ ಕಿರುಕುಳ (Physical Abuse) ನೀಡಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿತ್ತು. ಬೈಕ್‌ನಲ್ಲಿ ಹೋಗುವಾಗ ಚಾಲಕ ಅನುಚಿತವಾಗಿ ವರ್ತಿಸಿ, ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಕಿರುಕುಳ ನೀಡಿದ್ದಾನೆ ಎಂದು ಯುವತಿ ಆರೋಪಿಸಿದ್ದಳು.
ಅಥಿರಾ ಪುರುಷೋತ್ತಮನ್ ಲೈಂಗಿಕ ಕಿರುಕುಳಕ್ಕೊಳಗಾದ ಯುವತಿ. ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರ ಖಂಡಿಸಿ ನಗರದ ಟೌನ್ ಹಾಲ್ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಯುವತಿ ಅಥಿರಾ ಪುರುಷೋತ್ತಮನ್, ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಮನೆಗೆ ಹೋಗಲು ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದಳು.
ಬಾಡಿಗೆ ಆಟೋ ಬುಕ್ ಮಾಡಲು ನಾನು ಪ್ರಯತ್ನಿಸಿದ್ದೆ. ಆದರೆ, ರೈಡ್ ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರ‍್ಯಾಪಿಡೋಬೈಕ್ ಆ್ಯಪ್‌ನಲ್ಲಿ ಬೈಕ್ ಟ್ಯಾಕ್ಸಿ ಬುಕ್ ಮಾಡಬೇಕಾಯಿತು. ಆದರೆ, ನಾನು ಬುಕ್ ಮಾಡಿದ್ದ ಬೈಕ್‌ಗೆ ಬದಲಾಗಿ ಚಾಲಕ ಬೇರೆ ಬೈಕ್‌ನಲ್ಲಿ ಬಾಡಿಗೆಗೆ ಬಂದಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ಆತ ಬೈಕ್ ಸರ್ವೀಸ್‌ಗೆ ಬಿಟ್ಟಿರುವುದಾಗಿ ಹೇಳಿದ. ನಂತರ ಆ್ಯಪ್‌ನಲ್ಲಿ ರೈಡ್ ಪರಿಶೀಲಿಸಿಕೊಂಡು ಬೈಕ್ ಹತ್ತಿದ್ದೆ ಎಂದು ಅಥಿರಾ ತಿಳಿಸಿದ್ದಾಳೆ.
ಇದನ್ನೂ ಓದಿ | Road Accident : ಪ್ರಾಣಕ್ಕೆ ಕುತ್ತು ತಂದ ವಿಂಡೋ ಸೀಟು; ಸವಾರರಿಬ್ಬರ ಜೀವ ತೆಗೆದ ಕಾರು
ಬೈಕ್ ಟ್ಯಾಕ್ಸಿಯಲ್ಲಿ ಮನೆಗೆ ಹೋಗುವಾಗ ಚಾಲಕ ತನ್ನ ಜತೆ ಅನುಚಿತವಾಗಿ ವರ್ತಿಸಿದ. ಆತ ಒಂದು ಕೈಯಲ್ಲಿ ಬೈಕ್ ಚಲಾಯಿಸುತ್ತಾ, ಮತ್ತೊಂದು ಕೈಯಲ್ಲಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಇದರಿಂದ ಭಯವಾಗಿ ಮಾರ್ಗದುದ್ದಕ್ಕೂ ಮೌನವಾಗಿದ್ದೆ. ನನ್ನ ಮನೆ ಇರುವ ಸ್ಥಳ ಆತನಿಗೆ ತಿಳಿಯಬಾರದು ಎಂಬ ಉದ್ದೇಶದಿಂದ ಮನೆಯು 200 ಮೀಟರ್ ದೂರವಿರುವಾಗಲೇ ಬೈಕ್ ನಿಲ್ಲಿಸಲು ಹೇಳಿದ್ದೆ. ಆದರೆ, ನಾನು ಮನೆಗೆ ಹೋದ ಮೇಲೆಯೂ ಆತ ನನಗೆ ಕರೆ ಮಾಡಿ, ಸಂದೇಶ ಕಳುಹಿಸುತ್ತಿದ್ದ. ಆತನ ಕಿರುಕುಳ ತಾಳಲಾರದೆ ನಂಬರ್ ಬ್ಲಾಕ್ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಯುವತಿ ಹೇಳಿದ್ದಾಳೆ.