Site icon Vistara News

ತುಮಕೂರಿನ ಇಬ್ಬರು ಬಿಜೆಪಿ ನಾಯಕರು ಕಾಂಗ್ರೆಸ್‌ನತ್ತ: ರಾಜಣ್ಣ ಹೊಸ ಬಾಂಬ್‌, ಒಬ್ಬರು ಮಾಧುಸ್ವಾಮಿನಾ, ಇನ್ನೊಬ್ರು?

KN Rajanna

ತುಮಕೂರು: ಚುನಾವಣೆಗೆ ಇನ್ನೂ ಎಂಟು ತಿಂಗಳಷ್ಟೇ ಬಾಕಿ ಇದೆ. ಆಗಲೇ ಪಕ್ಷಾಂತರದ ಕಥೆಗಳು ಜೋರಾಗಿ ಚರ್ಚೆಯಲ್ಲಿವೆ. ಅದರ ಭಾಗವಾಗಿ ಹುಟ್ಟಿಕೊಂಡಿರುವ ಹೊಸ ಸುದ್ದಿಯ ಪ್ರಕಾರ, ತುಮಕೂರಿನ ಇಬ್ಬರು ಪ್ರಮುಖ ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಹೋಗ್ತಾರೆ. ಈ ಸುದ್ದಿಯನ್ನು ಹೇಳಿದ್ದು ಬೇರೆ ಯಾರೂ ಅಲ್ಲ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಎನ್‌. ರಾಜಣ್ಣ.

ಮೊದಲು ಬಿಜೆಪಿಯಲ್ಲಿದ್ದು ಬಳಿಕ ಕಾಂಗ್ರೆಸ್‌ಗೆ ಹೋಗಿ ಎರಡು ಬಾರಿ ಶಾಸಕರಾಗಿದ್ದ ಕೆ.ಎನ್‌. ರಾಜಣ್ಣ ಅವರು ಈಗ ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಬರುವ ಬಗ್ಗೆ ಸುದ್ದಿ ಕೊಟ್ಟಿದ್ದಾರೆ. ಅವರು ಹೇಳುವ ಪ್ರಕಾರ, ಸಚಿವ ಮಾಧುಸ್ವಾಮಿ ಅವರೇ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬರಲಿದ್ದಾರೆ.

ಮಾಧುಸ್ವಾಮಿ

ಕೆ.ಎನ್‌. ರಾಜಣ್ಣ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಚಿಕ್ಕನಾಯಕನ ಹಳ್ಳಿಯ ಹಾಲಿ ಶಾಸಕರಾಗಿರುವ ಮಾಧುಸ್ವಾಮಿ ಅವರು ಹೆಸರನ್ನು ಪ್ರಸ್ತಾಪಿಸಿದ್ದಾರೆ. ಮಾಧು ಸ್ವಾಮಿ ಅವರು ಇತ್ತೀಚೆಗೆ ಸರಕಾರ ಸರಿಯಾದ ದಾರಿಯಲ್ಲಿ, ವೇಗದಲ್ಲಿ ಸಾಗುತ್ತಿಲ್ಲ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದರು. ಒಂದು ಹಂತದಲ್ಲಿ ಬಿಜೆಪಿಯನ್ನು ತುಂಬ ಗಟ್ಟಿ ಧ್ವನಿಯಲ್ಲಿ ಸಮರ್ಥಿಸುತ್ತಿದ್ದ ಮಾಧು ಸ್ವಾಮಿ ಅವರು ಬಳಿಕ ತಮ್ಮ ನಡವಳಿಕೆಗಳಿಂದ ಬಿಜೆಪಿಗೆ ಸ್ವಲ್ಪ ಕಿರಿಕಿರಿ ಅನಿಸಿದರು. ಶುದ್ಧ ಹಸ್ತನೆಂದು ಕರೆಸಿಕೊಳ್ಳುವ ಮಾಧುಸ್ವಾಮಿ ಉಳಿದವರ ಬಗ್ಗೆ ಗೌರವ ತೋರಿಸದೆ ಇರುವುದು ಬಿಜೆಪಿಗೆ ಹಲವು ಬಾರಿ ಮುಜುಗರ ತಂದಿದೆ. ಅವರ ನೇರ ನಡೆನುಡಿಗಳು ಕೂಡಾ ಸಮಸ್ಯೆ ತಂದಿವೆ. ಇತ್ತೀಚೆಗೆ ಅವರು ಸಾಮಾನ್ಯ ಎಂಬಂತೆ ಆಡಿದ ಮಾತು ಕೂಡಾ ಸರಕಾರಕ್ಕೆ ದೊಡ್ಡ ಹಿನ್ನಡೆಯನ್ನು ಉಂಟು ಮಾಡಿದೆ. ಇದು ʻಸಿಎಂ ಹೇಳಿದರೆ ರಾಜೀನಾಮೆ ಕೊಡಲು ಸಿದ್ದʼ ಎಂಬ ಮಟ್ಟಕ್ಕೂ ಹೋಗಿತ್ತು. ಇಂಥ ಪರಿಸ್ಥಿತಿಯಲ್ಲಿ ಅವರು ಬಿಜೆಪಿಯಲ್ಲಿ ಉಳಿಯುವುದು ಕಷ್ಟ ಎಂಬ ಕಾರಣಕ್ಕಾಗಿಯೇ ಮಾಧುಸ್ವಾಮಿ ಹೆಸರು ಕೇಳಿಬಂದಿದೆ.

ʻʻಮಾಧುಸ್ವಾಮಿ ಅವರೇ ನನ್ನನ್ನು ಕೇಳಿದ್ರು. ತಿಪಟೂರಲ್ಲಿ ಸೀಟ್ ಕೊಡ್ಸಿ, ನಾನು ಕಾಂಗ್ರೆಸ್ ಗೆ ಬರ್ತೀನಿ ಅಂದಿದ್ರು. ಅವ್ರು ಕಾಂಗ್ರೆಸ್ ಗೆ ಬಂದ್ರೆ ನಾನು ಸ್ವಾಗತ ಮಾಡ್ತೀನಿ. ಮಂತ್ರಿ ಇದ್ದಾಗಲೇ ನನ್ನತ್ರ ಈ ಬಗ್ಗೆ ಮಾತನಾಡಿದ್ರುʼʼ ಎನ್ನುವುದು ರಾಜಣ್ಣ ಅವರ ನೇರ ಮಾತು.

ಸುರೇಶ್‌ ಗೌಡ

ರಾಜಣ್ಣ ಅವರು ಪ್ರಸ್ತಾಪಿಸಿದ ಇನ್ನೊಂದು ಹೆಸರು ಸುರೇಶ್‌ ಗೌಡ ಅವರದು. ಇತ್ತೀಚೆಗೆ ಸಿಎಂ ಬದಲಾವಣೆಯ ಮಾತುಗಳನ್ನಾಡಿ ಬಿಜೆಪಿ ಸರ್ಕಾರದ ವಲಯದಲ್ಲಿ ಬಿರುಗಾಳಿ ಎಬ್ಬಿಸಿದವರು ಅವರು. ಸಿಎಂ ಬೊಮ್ಮಾಯಿ ಅವರೇ ಸುರೇಶ್‌ ಗೌಡರನ್ನು ಇತ್ತೀಚೆಗೆ ಕರೆದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಬಿಜೆಪಿಯಲ್ಲಿ ಸುರೇಶ್‌ ಗೌಡರ ಬಗ್ಗೆ ಈಗ ಆಕ್ರೋಶವಿದೆ.
ʻʻಮಾಜಿ ಶಾಸಕ ಸುರೇಶ್ ಗೌಡ ಕೂಡ ಕಾಂಗ್ರೆಸ್ ಕದ ತಟ್ಟಿದ್ರು. ಅವರದೊಂದು ಕೇಸ್ ಇದೆ. ಆ ಕೇಸ್ ಇತ್ಯರ್ಥ ಆದ್ಮೇಲೆ ಕಾಂಗ್ರೆಸ್ ಗೆ ಬರ್ತೀನಿ ಅಂದಿದ್ರು. ಆ ನಂತರ ಸುರೇಶ್ ಗೌಡ ನನ್ನ ಕೈಗೆ ಸಿಕ್ಕಿಲ್ಲ. ಈಗ ಏನು ಬದಲಾವಣೆ ಆಗಿದ್ಯೋ ಗೊತ್ತಿಲ್ಲʼʼ- ಇದು ಸುರೇಶ್‌ ಗೌಡರ ವಿಚಾರದಲ್ಲಿ ರಾಜಣ್ಣ ಹೇಳಿರುವ ಮಾತು. ಹಾಗಿದ್ದರೆ ಇಬ್ಬರೂ ನಾಯಕರು ಬಿಜೆಪಿಗೆ ಸ್ವಲ್ಪ ಡ್ಯಾಮೇಜ್‌ ಮಾಡಿ ಪಕ್ಷ ತೊರೆಯುವ ಪ್ರಯತ್ನ ಮಾಡಿದ್ರಾ ಎಂಬ ಪ್ರಶ್ನೆಯೂ ಉದ್ಭವಾಗುತ್ತದೆ.

ಒಟ್ಟಿನಲ್ಲಿ ರಾಜಣ್ಣ ಅವರು ಹೇಳಿದ್ದು ಸತ್ಯವಾ? ಈ ಇಬ್ಬರು ನಾಯಕರು ಕಾಂಗ್ರೆಸ್‌ ಕಡೆಗೆ ಒಲವು ತೋರಿಸಿದ್ದು ನಿಜವಾ ಎನ್ನುವುದು ತಕ್ಷಣಕ್ಕೆ ಸ್ಪಷ್ಟವಾಗುವುದು ಕಷ್ಟ. ಮುಂದಿನ ವರ್ಷದ ಜನವರಿ ಹೊತ್ತಿಗೆ ಚಿತ್ರಣ ಕ್ಲಿಯರ್‌ ಆಗಬಹುದು.

ಇದನ್ನೂ ಓದಿ| ಸಿಎಂ ಕೇಳಿದ್ರೆ ರಾಜೀನಾಮೆ: ಸಹೋದ್ಯೋಗಿಗಳು ಎನ್ನೋದಕ್ಕೆ ಗೌರವ ಉಳಿದಿಲ್ಲ ಎಂದ ಮಾಧುಸ್ವಾಮಿ

Exit mobile version