ಉತ್ತರ ಕನ್ನಡ: ಅಂಕೋಲಾದಲ್ಲಿ (Karnataka Election 2023) ಮೇ 3ರಂದು ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ವೇದಿಕೆ ಹಂಚಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರಾದ ಶಿವರಾಮ್ ಹೆಬ್ಬಾರ್ ಮತ್ತು ದಿನಕರ ಶೆಟ್ಟಿ ಅವರಿಗೆ ಸಂಕಷ್ಟ ಎದುರಾಗಿದೆ. ಅವರು ಗಳಿಸಿರುವ ವಿಧಾನಸಭಾ ಸದಸ್ಯತ್ವದ ಮೇಲೆ ಆರು ವರ್ಷಗಳ ಅನರ್ಹತೆಯ ತೂಗುಗತ್ತಿ ತೂಗುತ್ತಿದೆ. ಮೋದಿ ರ್ಯಾಲಿ ಆಯೋಜನೆ ಸೇರಿದಂತೆ ಒಟ್ಟು ಚುನಾವಣೆಗೆ ಬಳಸಿರುವ ಹಣ ಚುನಾವಣಾ ಆಯೋಗ ನಿಗದಿ ಮಾಡಿರುವ ಮಿತಿಯನ್ನು ಮೀರಿದೆ ಎಂದು ಹೇಳಲಾಗುತ್ತಿದ್ದು. ಅದು ಸಾಬೀತಾದರೆ ಆಯೋಗ ಅವರ ಸದಸ್ಯತ್ವ ಅನರ್ಹಗೊಳಿಸಲಿದೆ.
ಮೇ 3ರಂದು ಅಂಕೋಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ನಡೆಸಿದ್ದ ವೇಳೆ ಶಿವರಾಮ್ ಹೆಬ್ಬಾರ್ ಮತ್ತು ದಿನಕರ ಶೆಟ್ಟಿ ಸೇರಿದಂತೆ ಆರು ಬಿಜೆಪಿ ಅಭ್ಯರ್ಥಿಗಳು ವೇದಿಕೆ ಹಂಚಿಕೊಂಡಿದ್ದರು. ಈ ಸಭೆಗೆ 1.10 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಜಿಲ್ಲಾ ಸಮಿತಿಯು ಹೇಳಿದೆ. ಈ ಮೊತ್ತವನ್ನು ಆರು ಮಂದಿಗೆ ಸಮಾನಾಗಿ ಹಂಚಿದರೆ ತಲಾ 18.33 ಲಕ್ಷ ರೂಪಾಯಿಗಳಾಗುತ್ತದೆ. ಬಿಜೆಪಿ ಕಾರ್ಯಕರ್ತರಿಗೆ ಈ ಕಾರ್ಯಕ್ರಮಕ್ಕೆ ಬರಲು ಒಟ್ಟು 800 ಬಸ್ಗಳನ್ನು ಬುಕ್ ಮಾಡಲಾಗಿತ್ತು. ಇದರಲ್ಲಿ 150 ಬಸ್ಗಳು ಗೋವಾದ ರಾಜ್ಯ ಸಾರಿಗೆ ಸಂಸ್ಥೆಗೆ (ಕದಂಬ) ಸೇರಿದ್ದು. ಉಳಿದ ಬಸ್ಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸಂಬಂಧಿಸಿದ್ದು. ಆಯೋಜಕರಿಗೆ ಕೆಎಸ್ಆರ್ಟಿಸಿ 1. 35 ಕೋಟಿ ರೂಪಾಯಿ ಬಿಲ್ ನೀಡಿದೆ. ಗೋವಾ ರಾಜ್ಯ ಸಂಸ್ಥೆಯ ಬಿಲ್ ಕುರಿತ ಮಾಹಿತಿ ಇನ್ನೂ ಚುನಾವಣಾಧಿಕಾರಿಗಳಿಗೆ ತಲುಪಿಲ್ಲ. ಈ ಹಣ ಸೇರ್ಪಡೆಗೊಂಡು ತಲಾ ಹಂಚಿದಾಗ ಪ್ರತಿಯೊಬ್ಬರ ಪಾಲು 35 ಲಕ್ಷ ರೂಪಾಯಿ ದಾಟುತ್ತದೆ.
ಮೂಲಗಳು ಹೇಳುವ ಪ್ರಕಾರ ಈ ಎಲ್ಲ ಅಭ್ಯರ್ಥಿಗಳು ಮೋದಿ ರ್ಯಾಲಿಯಲ್ಲದೆ ಇನ್ನೂ ಹಲವಾರು ಚುನಾವಣಾ ಪ್ರಚಾರ ಸಭೆಗಳನ್ನು ಏರ್ಪಡಿಸಿದ್ದರು. ಅದರಲ್ಲೊಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರದ್ದು. ರೀತಿ ರ್ಯಾಲಿಗಳು, ಕರಪತ್ರಗಳ ಹಂಚಿಕೆ, ಚುನಾವಣಾ ಪ್ರಚಾರ ಸಾಮಾಗ್ರಿಗಳಿಗೆ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಇವೆಲ್ಲವೂ ಸೇರಿದರೆ 40 ಲಕ್ಷ ರೂಪಾಯಿ ಗಡಿ ದಾಟುವುದು ಖಚಿತ ಎನ್ನಲಾಗಿದೆ.
ಆರೋಪ ನಿರಾಕರಣೆ
ಮಿತಿಗಿಂತ ಖರ್ಚು ಹೆಚ್ಚು ಮಾಡಲಾಗಿದೆ ಎಂಬ ಆರೋಪವನ್ನು ಆರು ಅಭ್ಯರ್ಥಿಗಳು ನಿರಾಕರಿಸಿದ್ದಾರೆ. ಬಸ್ಗಳನ್ನು ಬುಕ್ ಮಾಡಿರುವುದು ನಾವಲ್ಲ. ಮೋದಿ ಅಭಿಮಾನಿಗಳು ಎಂದಿದ್ದಾರೆ. ಮೋದಿ ರ್ಯಾಲಿ ಸೇರಿದಂತೆ ಎಲ್ಲ ರೀತಿಯ ಪ್ರಚಾರಕ್ಕೆ ಕೇವಲ 37 ಲಕ್ಷ ರೂಪಾಯಿ ಮಾತ್ರ ಖರ್ಚಾಗಿದೆ ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ : ವಿಸ್ತಾರ TOP 10 NEWS : ಮಹಿಳೆಯರ ಫ್ರೀ ಓಡಾಟ, ಅಕ್ಕಿಗಾಗಿ ಬಿಜೆಪಿ-ಕಾಂಗ್ರೆಸ್ ಕಿತ್ತಾಟ.. ಹೀಗೆ ಪ್ರಮುಖ ಸುದ್ದಿ ಸಂಚಯ
ಗೋವಾ ರಸ್ತೆ ಸಾರಿಗೆ ಸಂಸ್ಥೆಯಿಂದ ಮಾಹಿತಿ ಕೇಳಿದ್ದೇವೆ. ಅಲ್ಲಿಂದ ಬಿಲ್ ವಿವರ ಬಂದ ಬಳಿಕ ನಾವು ವರದಿ ತಯಾರಿ ಮಾಡಿ ಚುನಾವಣಾ ಆಯೋಗಕ್ಕೆ ಕಳುಹಿಸುತ್ತೇವೆ ಎಂಬುದಾಗಿ ಜಿಲ್ಲಾ ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.