ರಾಮನಗರ: ಹಾರೋಹಳ್ಳಿ ತಾಲೂಕು ಕಸಬಾ ಹೋಬಳಿಯ ಮಾರಸಂದ್ರ ಗ್ರಾಮದಲ್ಲಿ ಮೀನು ಹಿಡಿಯಲು ಹೋಗಿ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಫೀಧ್ (11), ಇಬ್ರಾಹಿಂ (12) ಮೃತ ಬಾಲಕರು.
ಮಾರಸಂದ್ರ ಗ್ರಾಮದ (Ramanagara News) ಪಕ್ಕದಲ್ಲಿರುವ ಮಡಿಕೆ ಕೆರೆಗೆ ಮೂವರು ಬಾಲಕರು ಮೀನು ಹಿಡಿಯಲು ಸೋಮವಾರ ತೆರಳಿದ್ದರು. ಈ ವೇಳೆ ಮೂವರ ಪೈಕಿ ಒಬ್ಬ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಹೋಗಿ ಇನ್ನೊಬ್ಬ ಬಾಲಕನೂ ನೀರಿನಲ್ಲಿ ಮುಳುಗಿದ್ದಾನೆ. ಈಜು ಬಾರದ ಕಾರಣ ಇಬ್ಬರೂ ಕೆರೆಯಲ್ಲಿ ಮುಳುಗಿದ್ದಾರೆ.
ಮತ್ತೊಬ್ಬ ಭಯಗೊಂಡು ಓಡಿ ಹೋಗಿದ್ದಾನೆ. ಸ್ಥಳೀಯರು ಬಂದು ನೋಡಿದಾಗ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿರುವ ವಿಷಯ ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.
ಇದನ್ನೂ ಓದಿ | Road Accident : ತಿರುಪತಿ ದರ್ಶನ ಮುಗಿಸಿ ಬರುತ್ತಿದ್ದಾಗ ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಕೆಜಿಎಫ್‌ನ ದಂಪತಿ ಸ್ಥಳದಲ್ಲೇ ಸಾವು
ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲು
ಬೆಂ.ಗ್ರಾಮಾಂತರ: ತಮಿಳುನಾಡಿನ ಹೊಸೂರು ಸಮೀಪದ ಬಾಗಲೂರಿನ ಕೆರೆಯಲ್ಲಿ ಮುಳುಗಿ (Drown in lake) ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಕೆರೆಯಲ್ಲಿ ಈಜಲು ತೆರಳಿದ್ದ ಐವರ ಪೈಕಿ ಇಬ್ಬರು ವಿದ್ಯಾರ್ಥಿಗಳು ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾರೆ.
ಬಾಗಲೂರು ಗ್ರಾಮದ ವಿನೋದ್ ಸಿಂಗ್, ಶಶಾಂಕ್ ಮೃತ ಬಾಲಕರು. ವಿಷಯ ತಿಳಿದು ಬಾಗಲೂರು ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಮೀನು ವಿಚಾರಕ್ಕೆ ದೊಣ್ಣೆಗಳಿಂದ ಬಡಿದಾಟ, ನಾಲ್ವರಿಗೆ ಗಾಯ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹಳೆಯೂರು ಗ್ರಾಮದಲ್ಲಿ ಮನೆಯ ಮುಂದಿನ ಜಮೀನು ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು, ನಾಲ್ವರಿಗೆ ಗಾಯಗಳಾಗಿವೆ. ಗ್ರಾಮದ ನಾರಾಯಣಸ್ವಾಮಿ ಮತ್ತು ಮುನಿ ಆಂಜಿನಪ್ಪ ಕುಟುಂಬಸ್ಥರ ನಡುವೆ ಈ ಹಿಂದಿನಿಂದಲೂ ಮನೆ ಮುಂದಿನ 6 ಗುಂಟೆ ಜಮೀನು ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ ಮುನಿ ಆಂಜಿನಪ್ಪ ಕುಟುಂಬದ ಕಿರಿಕ್‌ನಿಂದಾಗಿ ನಾರಾಯಣಸ್ವಾಮಿ ಕುಟುಂಬಸ್ಥರು ಭಾನುವಾರ ಮನೆ ಮುಂದೆ ಸಿಸಿ ಕ್ಯಾಮೆರಾ ಅಳವಡಿಕೆಗೆ ಮುಂದಾಗಿದ್ದರು. ಹೀಗಾಗಿ ಜಗಳ ನಡೆದು, ಎರಡು ಕುಟುಂಬಗಳ ಸದಸ್ಯರು ದೊಣ್ಣೆಗಳನ್ನು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಇದರಿಂದ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಜಮೀನು ವಿವಾದ ಪ್ರಕರಣದ ವಿಚಾರಣೆ ತಹಸೀಲ್ದಾರ್ ಹಾಗೂ ಎಸಿ ಕೋರ್ಟ್‌ನಲ್ಲಿ ನಡೆಯುತ್ತಿದೆ. ಆದರೆ ಮುನಿ ಆಂಜಿನಪ್ಪ ಮಕ್ಕಳು ಹಾಗೂ ಕುಟುಂಬಸ್ಥರು ಈ ನಡುವೆ ನಾರಾಯಣಸ್ವಾಮಿ ಮನೆಯ ಮುಂದೆಯೇ ಕಸ ಸೇರಿ ಇನ್ನಿತರ ವಸ್ತುಗಳ ಹಾಕಿ ಕಿರಿಕ್ ಮಾಡುತ್ತಲೇ ಇದ್ದರು ಎನ್ನಲಾಗಿದೆ. ಇದರಿಂದ ಸಿಸಿಟಿವಿ ಅಳವಡಿಕೆಗೆ ನಾರಾಯಣಸ್ವಾಮಿ ಮಕ್ಕಳು ಮುಂದಾಗುತಿದ್ದಂತೆ, ಸಿಸಿಟಿವಿ ಯಾಕೋ ಹಾಕಿದಿರಿ ಎಂದು ಮುನಿ ಆಂಜಿನಪ್ಪ ಕಡೆಯವರು ಮನಬಂದಂತೆ ನಾಲ್ವರ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.