ಚಿತ್ರದುರ್ಗ: ಇಲ್ಲಿನ ಮುರುಘಾಮಠಕ್ಕೆ ಸೇರಿದ ಹುಡುಗಿಯರ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಪೀಠಾಧಿಪತಿಗಳಾದ ಮುರುಘಾಶರಣರೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಸರಣಿ ವಿದ್ಯಮಾನಗಳಿಗೆ ಕಾರಣವಾದ ಬೆನ್ನಿಗೇ ಇನ್ನೊಂದು ಘಟನೆ ನಡೆದಿದೆ. ಈ ಬಾರಿ ಇಲ್ಲಿನ ಹುಡುಗರ ಹಾಸ್ಟೆಲ್‌ನಿಂದ ಇಬ್ಬರು ಬಾಲಕರು ನಾಪತ್ತೆಯಾಗಿದ್ದಾರೆ.
ಮುರುಘಾ ಮಠಕ್ಕೆ ಎಸ್‌ಜೆಎಂ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಾ, ಮಠದ ಜಯದೇವ ಹಾಸ್ಟೆಲ್‌ನಲ್ಲಿ ಆಸರೆ ಪಡೆದಿದ್ದ ಇಬ್ಬರು ಬಾಲಕರು ನಾಪತ್ತೆಯಾಗಿದ್ದರು. 11 ವರ್ಷದ ಕಲ್ಬುರ್ಗಿ ಜಿಲ್ಲೆ ಮೂಲದ ಬಾಲಕ, 13 ವರ್ಷದ ಕೊಪ್ಪಳ ಜಿಲ್ಲೆ ಮೂಲದ ಬಾಲಕ ನಾಪತ್ತೆಯಾದವರು.
ಈ ಮಕ್ಕಳು ಸೆಪ್ಟೆಂಬರ್ ೯ರಿಂದ ನಾಪತ್ತೆಯಾಗಿದ್ದಾರೆ. ಅಂದು ಶಾಲೆಗೆ ಹೋಗಿದ್ದ ಅವರು ಸಂಜೆ ಹಾಸ್ಟೆಲ್‌ಗೆ ಮರಳಿ ಬಂದಿರಲಿಲ್ಲ. ಆದರೆ, ನಿಜವೆಂದರೆ ಹಾಸ್ಟೆಲ್‌ನಿಂದ ಹೊರಟಿದ್ದ ಮಕ್ಕಳು ಅಂದು ಶಾಲೆಗೂ ಹೋಗಿರಲಿಲ್ಲ. ಹಾಸ್ಟೆಲ್‌ನಿಂದ ಹೊರಟವರು ಎಲ್ಲಿ ಹೋಗಿದ್ದಾರೆ ಎಂದು ಗೊತ್ತಾಗಿಲ್ಲ.
ಅವರು ಮನೆಗೆ ಹೋಗಿರಬಹುದಾ ಎಂಬ ಸಂಶಯದಲ್ಲಿ ಪೋಷಕರನ್ನೂ ವಿಚಾರಿಸಲಾಗಿತ್ತು. ಆದರೆ, ಮನೆಗೂ ಹೋಗಿಲ್ಲ ಎಂದು ತಿಳಿದುಬಂತು. ಇದೀಗ ಪೋಷಕರ ಸೂಚನೆಯ ಮೇರೆಗೆ ಹಾಸ್ಟೆಲ್ ಸಿಬ್ಬಂದಿ ಮಕ್ಕಳ ನಾಪತ್ತೆ ಬಗ್ಗೆ ದೂರು ನೀಡಿದ್ದಾರೆ.
ಸೆಪ್ಟೆಂಬರ್ ೧೨ರಂದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೂ ಮಕ್ಕಳು ಪತ್ತೆಯಾಗಿಲ್ಲ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಶ್ರೀಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ, ಇನ್ನೂ 14 ದಿನ ಜೈಲೇ ಗತಿ