ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ (Raichur News) ದಡೆಸುಗೂರಿನ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದಾಗ ಸಹೋದರರಿಬ್ಬರು ಮುಳುಗಿ ಮೃತಪಟ್ಟಿದ್ದಾರೆ.
ದಡೆಸುಗೂರು ಗ್ರಾಮದ ಮುದಿಯಪ್ಪ ಎಂಬುವವರ ಪುತ್ರರಾದ ಅಮರ್ (18), ಮಲ್ಲಿಕಾರ್ಜುನ (16) ಮೃತರು. ಸೋಮವಾರ ಮಧ್ಯಾಹ್ನ ಬಿಸಿಲು ಹೆಚ್ಚಾಗಿದ್ದರಿಂದ ತುಂಗಭದ್ರಾ ನದಿಯಲ್ಲಿ ಈಜಲು ಅಣ್ಣ, ತಮ್ಮ ತೆರಳಿದ್ದರು. ನದಿಯಲ್ಲಿ ಈಜುತ್ತಿದ್ದಾಗ ಕೆಸರಿನಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಂಗಭದ್ರಾ ನದಿ ದಂಡೆಯಲ್ಲಿ ಮೃತರ ಪೋಷಕರು ಭತ್ತದ ರಾಶಿ ಹಾಕಿದ್ದರು. ಹೀಗಾಗಿ ಅಲ್ಲಿಗೆ ಆಗಮಿಸಿದ್ದ ಸಹೋದರರು ಸೇರಿ ಮೂವರು ನದಿಗೆ ಈಜಲು ಹೋಗಿದ್ದರು. ಮೊದಲಿಗೆ ಮಲ್ಲಿಕಾರ್ಜುನ ನದಿಯಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಹೋಗಿ ಅಮರ್ ಕೂಡ ನೀರು ಪಾಲಾಗಿದ್ದಾನೆ. ಈ ವೇಳೆ ಮತ್ತೊಬ್ಬ ಬಾಲಕ ಪೋಷಕರಿಗೆ ಮಾಹಿತಿ ನೀಡಿದ್ದಾನೆ. ನಂತರ ಮೀನುಗಾರರು ಹಾಗೂ ಸ್ಥಳೀಯರು ಆಗಮಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಇದನ್ನೂ ಓದಿ | Karnataka Election: ವಿವಿಧೆಡೆ ಪಕ್ಷಗಳ ಕಾರ್ಯಕರ್ತರ ಚಕಮಕಿ; ಬಿಜೆಪಿ- ಕಾಂಗ್ರೆಸ್ ಬೆಂಬಲಿಗರಿಗೆ ಹಲ್ಲೆ, ಗಾಯ
ಬೈಕ್ ಅಪಘಾತದಲ್ಲಿ ಸವಾರ ಸಾವು
ವಿಜಯಪುರ: ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಡೆಗೋಡೆಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವುದು ಜಿಲ್ಲೆಯ ಬಸವನಬಾಗೇಬಾಡಿ ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿ ನಡೆದಿದೆ. ಮೃತರ ಹೆಸರು ಹಾಗೂ ವಿಳಾಸ ಲಭ್ಯವಾಗಿಲ್ಲ. ಅಪಘಾತಕ್ಕೆ ಅತೀ ವೇಗವೇ ಕಾರಣ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಸ್ತಿ ವಿಚಾರಕ್ಕೆ ಅಣ್ಣನಿಗೆ ಚಾಕು ಇರಿದು ಕೊಲೆಗೈದ ತಮ್ಮ
ದಾವಣಗೆರೆ: ಮನೆ ಹಾಗೂ ಆಸ್ತಿ ವಿಚಾರಕ್ಕೆ ಅಣ್ಣನಿಗೇ ಚಾಕುವಿನಿಂದ ಇರಿದು ತಮ್ಮ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಪ್ರಶಾಂತ್ ನಗರ ನಿವಾಸಿ ಗುಂಡಪ್ಪ ಎಂಬುವವರ ಪುತ್ರ ಕೆ.ಜಿ.ಕುಮಾರ್ ಕೊಲೆಯಾದ ವ್ಯಕ್ತಿ, ರಾಜು ಕೊಲೆ ಅರೋಪಿ.
ಗುಂಡಪ್ಪನಿಗೆ ಇಬ್ಬರು ಹೆಂಡತಿಯರಿದ್ದು ಮೊದಲ ಹೆಂಡತಿ ಮಗ ಕೊಲೆಯಾಗಿದ್ದಾನೆ. ಮೊದಲ ಪತ್ನಿ ಪುತ್ರ ಕುಮಾರ್ ಹಾಗೂ 2ನೇ ಹೆಂಡ್ತಿ ಪುತ್ರ ರಾಜು ನಡುವೆ ಆಸ್ತಿ ಕಲಹ ನಡೆದಿದ್ದು, ಇಬ್ಬರ ಆಸ್ತಿ ವ್ಯಾಜ್ಯ ನ್ಯಾಯಾಲಯದಲ್ಲಿತ್ತು
ಇದನ್ನೂ ಓದಿ | Road Accident : ಕಾರು- ಬೈಕ್ ನಡುವೆ ಭೀಕರ ಅಪಘಾತ; ಮೂವರ ದುರ್ಮರಣ
ಭಾನುವಾರ ರಾತ್ರಿ ಕುಮಾರ್ ಮೇಲೆ ತಮ್ಮ ರಾಜು ಮತ್ತು ಮಾರುತಿ ಎಂಬುವರು ಹಲ್ಲೆ ನಡೆಸಿದ್ದಾರೆ. ಹೀಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್‌ನನ್ನು ಸ್ಥಳೀಯರು ಹರಿಹರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೂ ಮತ್ತೆ ಆಸ್ಪತ್ರೆಗೆ ಸಹೋದರ ರಾಜು ನುಗ್ಗಿ ಅಣ್ಣನ ಮೇಲೆ ಹಲ್ಲೆ ಮಾಡಿ, ಚಾಕು ಇರಿದು ಕೊಲೆ ಮಾಡಿದ್ದಾನೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.