ಬೆಂಗಳೂರು/ಮೈಸೂರು/ಹುಬ್ಬಳ್ಳಿ: ಟಿಪ್ಪು ಸುಲ್ತಾನ್‌ನನ್ನು (Tippu Sultan) ಉರಿಗೌಡ ಹಾಗೂ ನಂಜೇಗೌಡ ಹೊಡೆದು ಹಾಕಿದಂತೆ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನೂ ಹೊಡೆದು ಹಾಕಿ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ (Ashwathnarayan) ನೀಡಿರುವ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ರಾಜಕೀಯ ನಾಯಕರು ಖಂಡಿಸಿದ್ದಾರೆ. ಇದೇ ವೇಳೆ ಸಚಿವರ ವಿರುದ್ಧ ಬೆಂಗಳೂರಿನ ಮಲ್ಲೇಶ್ವರ ಹಾಗೂ ಹುಬ್ಬಳ್ಳಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಚುನಾವಣೆ (Karnataka Election) ಹಿನ್ನೆಲೆಯಲ್ಲಿ ರಾಜಕೀಯ ವಾಕ್ಸಮರಗಳು ಹೆಚ್ಚಾಗುತ್ತಿದ್ದು, ಈಗ ನೀಡುವ ಹೇಳಿಕೆಗಳು ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.
ಅಶ್ವತ್ಥನಾರಾಯಣ ಹೇಳಿದ್ದೇನು?
ಟಿಪ್ಪುವಿನ ಜಾಗಕ್ಕೆ ಸಿದ್ದರಾಮಯ್ಯ ಬಂದು ಬಿಡುತ್ತಾರೆ. ನಿಮಗೆ ಸಾವರ್ಕರ್ ಬೇಕಾ? ಇಲ್ಲವೇ ಟಿಪ್ಪು ಬೇಕಾ? ನೀವೇ ತೀರ್ಮಾನವನ್ನು ತೆಗೆದುಕೊಳ್ಳಿ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳುತ್ತಿದ್ದಂತೆ ಸಭೆಯಲ್ಲಿ ಸೇರಿದ್ದ ಕಾರ್ಯಕರ್ತರೆಲ್ಲರೂ, ನಮಗೆ ಸಾವರ್ಕರ್ ಬೇಕು ಎಂದು ಹೇಳಿದ್ದಾರೆ. ಮತ್ತೆ ಮತ್ತೆ ಇದನ್ನೇ ಕೇಳಿದಾಗಲೂ ಎಲ್ಲರೂ ಸಾವರ್ಕರ್ ಎಂದೇ ಉತ್ತರಿಸಿದ್ದರು. ಆಗ ಮತ್ತೆ ಮಾತನಾಡಿದ ಸಚಿವರು, ಹಾಗಾದರೆ ಟಿಪ್ಪು ಸುಲ್ತಾನನ್ನು ಎಲ್ಲಿಗೆ ಕಳುಹಿಸಬೇಕು? ಟಿಪ್ಪುವನ್ನು ಉರಿಗೌಡ, ನಂಜೇಗೌಡ ಏನ್ ಮಾಡಿದರು? ಎಂದು ಕೇಳಿದ್ದರು. ಆಗ ಅಲ್ಲಿನ ಕಾರ್ಯಕರ್ತರು ಹೊಡೆದು ಹಾಕಿದರು ಎಂದು ಉತ್ತರಿಸಿದ್ದರು. ಅದಕ್ಕೆ ಸಚಿವರು, “ಹೌದು. ಟಿಪ್ಪುವನ್ನು ಉರಿಗೌಡ, ನಂಜೇಗೌಡ ಹೊಡೆದು ಹಾಕಿದಂತೆ ಇವರನ್ನೂ ಹೊಡೆದು ಹಾಕಬೇಕು ಎಂದು ಹೇಳುತ್ತಾ, ನಮ್ಮತನವನ್ನು ನಾವು ಕಾಪಾಡಬೇಕೆಂದರೆ ಬಿಜೆಪಿಯಿಂದ ಮಾತ್ರ ಸಾಧ್ಯ. ಹೀಗಾಗಿ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕರೆ ನೀಡಿದ್ದರು.
ಮಲ್ಲೇಶ್ವರದಲ್ಲಿ ಕೇಸ್
ಸಚಿವ ಅಶ್ವತ್ಥನಾರಾಯಣ ಅವರ ಹೇಳಿಕೆ ವಿರುದ್ಧ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡ ಮನೋಹರ್ ಸೇರಿದಂತೆ ಹಲವರು ಕೊಲೆ ಯತ್ನ ಆರೋಪದಡಿ ಪ್ರಕರಣವನ್ನು ದಾಖಲಿಸಿದ್ದಾರೆ. ಸಚಿವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯಲ್ಲೂ ಕೇಸ್
ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗವು ಗೋಕುಲ್ ರೋಡ್ ಠಾಣೆಯಲ್ಲಿ ಸಚಿವ ಅಶ್ವತ್ಥನಾರಾಯಣ ವಿರುದ್ಧ ದೂರು ದಾಖಲಿಸಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಮೈಸೂರಲ್ಲಿ ಪ್ರತಿಭಟನೆ
ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಸಚಿವ ಅಶ್ವತ್ಥ ನಾರಾಯಣ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದನ್ನು ಖಂಡಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಅಶ್ವತ್ಥ ನಾರಾಯಣ ಅವರ ಪ್ರತಿಕೃತಿ ದಹಿಸಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.