Site icon Vistara News

Modi in Karnataka: ಮೋದಿ ರೋಡ್ ಶೋ ವೇಳೆ ಭದ್ರತಾ ವೈಫಲ್ಯ; ನಿಷೇಧಿತ ಪ್ರದೇಶಕ್ಕೆ ನುಗ್ಗಿದ ಇಬ್ಬರು ವಶಕ್ಕೆ

Modi in Karnataka

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರ ರೋಡ್‌ ಶೋ ವೇಳೆ ಭದ್ರತಾ ವೈಫಲ್ಯ ಉಂಟಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದುಪೊಲೀಸರು ವಿಚಾರಣೆ ನಡೆಸಿದ್ದಾರೆ. ರೋಡ್‌ ಶೋ ವೇಳೆ ಬ್ಯಾರಿಕೇಡ್ ಹಾರಿ ಬಂದ ಯುವಕ ಹಾಗೂ ನಿಷೇಧಿತ ಪ್ರದೇಶದಲ್ಲಿ ನುಗ್ಗಿದ ಎನ್‌ಸಿಸಿ ಅಧಿಕಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಪ್ಪಳ ಮೂಲದ ಯುವಕ ಬಸವರಾಜ್ (29) ಹಾಗೂ ಎನ್‌ಸಿಸಿ ಅಧಿಕಾರಿ ರಾಜ್ ಗೌರವ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶನಿವಾರ ದಾವಣಗೆರೆಯಲ್ಲಿ ನಡೆದ ಬಿಜೆಪಿಯ ಬೃಹತ್‌ ಸಮಾವೇಶದ ಸಂದರ್ಭದಲ್ಲೂ ಪ್ರಧಾನಿ ಮೋದಿ ಅವರು ಬೃಹತ್‌ ಪೆಂಡಾಲ್‌ನ ಸುತ್ತ ವಾಹನದಲ್ಲಿ ರೋಡ್‌ ಶೋ ನಡೆಸುತ್ತಿದ್ದರೆ ಯುವಕ ಬಸವರಾಜ್ ಬ್ಯಾರಿಕೇಡ್​ ಹಾರಿ ಮೋದಿ ಅವರಿದ್ದ ವಾಹನದತ್ತ ದೌಡಾಯಿಸಿದ್ದ. ಕೂಡಲೇ ಎಚ್ಚೆತ್ತ ಗಾಂಧಿನಗರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ | Modi in Karnataka: ದಾವಣಗೆರೆ ಮಹಾ ಸಂಗಮದ ಆವರಣದಲ್ಲೇ ಮೋದಿ ರೋಡ್‌ ಶೋ ನಡೆಸಿದ್ದೇಕೆ?

ಇನ್ನು ರೋಡ್‌ ಶೋಗೂ ಮೊದಲು ಸಂಗಮದಲ್ಲಿ ಪ್ರಧಾನ ಮಂತ್ರಿ ಆಗಮನದ ವೇಳೆ ಡಿ ಜೋನ್‌ನಲ್ಲಿ ಪ್ರವೇಶ ಮಾಡಿದ್ದ ಎನ್‌ಸಿಸಿ ಅಧಿಕಾರಿ ರಾಜ್ ಗೌರವ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಈಗ ಎನ್‌ಸಿಸಿ ಅಧಿಕಾರಿಯಾಗಿರುವ ರಾಜ್ ಗೌರವ್‌ ಮೋದಿ ಅವರ ಜತೆ ಪೋಟೊ ತೆಗೆಸಿಕೊಳ್ಳಲು ಎನ್‌ಸಿಸಿ ನುಗ್ಗಿದ್ದಾರೆ ಎನ್ನಲಾಗಿದೆ. ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಬಿಟ್ಟು ಕಳುಹಿಸಿದ್ದಾರೆ.

ರಾಜ್ಯಾದ್ಯಂತ ನಡೆದ ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆಯ ಸಮಾರೋಪ ಸಮಾರಂಭ ದಾವಣಗೆರೆಯಲ್ಲಿ ಆಯೋಜನೆಯಾಗಿತ್ತು. ಅಲ್ಲಿ ಸುಮಾರು 2 ಲಕ್ಷ ಜನರಿಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗಿತ್ತು. ಅವರ ಮಧ್ಯೆ ಪ್ರಧಾನಿಯವರು ವಾಹನದ ಮೂಲಕ ರೋಡ್‌ ಶೋ ನಡೆಸಿದರು. ಈ ವೇಳೆ ಭದ್ರತಾ ಲೋಪ ಕಂಡುಬಂದಿದೆ.

Exit mobile version