Site icon Vistara News

COVID Subvariant JN1: ರಾಜ್ಯದಲ್ಲಿ ಕೋವಿಡ್‌ನಿಂದ ಇಬ್ಬರ ಸಾವು

Corona Case

ಬೆಂಗಳೂರು: ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ಉಪತಳಿ ಜೆಎನ್‌ 1 ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆಯು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಡುವೆ ರಾಜ್ಯದಲ್ಲಿ ಇಬ್ಬರು ಕೊರೊನಾದಿಂದ ಮೃತಪಟ್ಟಿರುವುದು ಕಂಡುಬಂದಿದೆ.

ಬೆಂಗಳೂರಿನ ಚಾಮರಾಜಪೇಟೆಯ 64 ವರ್ಷದ ವ್ಯಕ್ತಿಯೊಬ್ಬರು ಮಲ್ಲಿಗೆ ಆಸ್ಪತ್ರೆಯಲ್ಲಿ ಡಿ.14ರಂದು ಕೋವಿಡ್‌ನಿಂದ ಮೃತಪಟ್ಟಿರುವುದಾಗಿ ಬುಧವಾರ ಬೆಳಗ್ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದರು. ಅದೇ ರೀತಿ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ 44 ವರ್ಷದ ಮತ್ತೊಬ್ಬ ಪುರುಷ ಮೃತಪಟ್ಟಿರುವುದು ವರದಿಯಾಗಿದೆ. ಇವರು ಡಿಸೆಂಬರ್‌ 16ರಂದು ಮೃತಪಟ್ಟಿದ್ದಾರೆ.

ಚಾಮರಾಜಪೇಟೆಯ ವ್ಯಕ್ತಿ ಶ್ವಾಸಕೋಶ ಸಮಸ್ಯೆಯಿಂದ ಹಾಗೂ ಮತ್ತೊಬ್ಬರು ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಇಬ್ಬರಿಗೂ ಕೊರೊನಾ ದೃಢವಾಗಿದೆ. ಆದರೆ ಇವರು ಕೋವಿಡ್ JN1 ರೂಪಾಂತರಿ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ಟೆಸ್ಟ್‌ ಬಳಿಕ ಆರೋಗ್ಯ ಇಲಾಖೆ ಮಾಹಿತಿ ನೀಡಲಿದೆ.

ರಾಜ್ಯದಲ್ಲಿ ಒಂದೇ ದಿನಕ್ಕೆ 22 ಕೊರೊನಾ ಕೇಸ್‌!

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 22 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 808 ಜನರಿಗೆ ಕೋವಿಡ್‌ ಟೆಸ್ಟ್‌ ಮಾಡಿದ್ದು, ಈ ಪೈಕಿ 22 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು. ಇದರಿಂದ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 92 ಕ್ಕೇರಿದೆ.

ಬೆಂಗಳೂರಿನಲ್ಲಿ 19 ಪ್ರಕರಣ, ದಕ್ಷಿಣ ಕನ್ನಡ 1, ಬಳ್ಳಾರಿಯಲ್ಲಿ 2 ಪ್ರಕರಣ ಪತ್ತೆಯಾಗಿದೆ. 92 ಸಕ್ರಿಯ ಪ್ರಕರಣಗಳಲ್ಲಿ 72 ಮಂದಿಗೆ ಹೋಮ್‌ ಐಸೋಲೇಷನ್‌ನಲ್ಲಿ ಇರಲು ಸೂಚನೆ ನೀಡಲಾಗಿದೆ. 20 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಐಸಿಯುನಲ್ಲಿ 7 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈವರೆಗೆ ರಾಜ್ಯದಲ್ಲಿ ಕೋವಿಡ್‌ನಿಂದ ಇಬ್ಬರು ಮೃತಪಟ್ಟಿದ್ದು, ಕೋವಿಡ್ ಪಾಸಿಟಿವಿಟಿ ದರ ಶೇ.2.47 ಇದ್ದು, ಮರಣ ಪ್ರಮಾಣ ದರ ಶೇ. 10 ಇರುವುದು ವರದಿಯಾಗಿದೆ.

ರಾಜ್ಯದಲ್ಲಿ ಈವರೆಗೆ ಒಟ್ಟು 40,89,150 ಕೋವಿಡ್ ಪ್ರಕರಣ ದಾಖಲಾಗಿದ್ದು, ಈ ಪೈಕಿ 40,48,695 ಮಂದಿ ಗುಣಮುಖರಾಗಿದ್ದಾರೆ. 40,320 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ | COVID Subvariant JN1: ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್‌ ಕಡ್ಡಾಯ; ಮತ್ತೇನಿದೆ ಕೊರೊನಾ ನಿರ್ಬಂಧ?

ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ

ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ತಿಳಿಸಿದ್ದಾರೆ. ಕೇರಳ ಗಡಿ ಭಾಗದಲ್ಲಿ ಕರ್ನಾಟಕದ 4 ಜಿಲ್ಲೆಗಳಿವೆ. ಹೀಗಾಗಿ ರಾಜ್ಯದಲ್ಲಿ ನಾವು ಮುಂಜಾಗ್ರತೆ ಕ್ರಮ ವಹಿಸಿದ್ದೇವೆ. ಸದ್ಯಕ್ಕೆ ಕರ್ನಾಟಕದಲ್ಲಿ ಪ್ಯಾನಿಕ್ ಆಗುವಂತಹ ಪರಿಸ್ಥಿತಿ ಇಲ್ಲ. ನಾವು ಕೋವಿಡ್ ಟೆಸ್ಟಿಂಗ್‌ಗಳನ್ನು ಹೆಚ್ಚು ಮಾಡುತ್ತಿದ್ದೇವೆ. ಐಸಿಯು ಬೆಡ್, ವೆಂಟಿಲೇಟರ್ಸ್, ಆಕ್ಷಿಜನ್ ಸೇರಿದಂತೆ ಅಗತ್ಯ ಮೂಲಸೌಕರ್ಯವನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಂಡಿದ್ದೇವೆ. ಈಗಾಗಲೇ ಎಲ್ಲ ಜಿಲ್ಲಾಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದಾಗ ಕೇಂದ್ರದ ನೆರವನ್ನು ಕೋರಲಾಗುವುದು. ಆಗ ಸಹಕಾರ ನೀಡಿ ಎಂದು ಮನವಿ ಮಾಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version