ಗದಗ: ಮಳೆಯಿಂದಾಗಿ ರಸ್ತೆಯೇ ಕೊಚ್ಚಿ ಹೋಗಿ ಸೃಷ್ಟಿಯಾದ 50 ಅಡಿ ಆಳದ ಕಂದಕಕ್ಕೆ ಇಬ್ಬರು ಬೈಕ್ ಸವಾರರು ಬಿದ್ದು ಸಾವನ್ನಪ್ಪಿದ ಘಟನೆ ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ನಡೆದಿದೆ. ಮಳೆ ನೀರಿನಿಂದಾಗಿ ರಸ್ತೆ ಕೊಚ್ಚಿಹೋಗಿ ಕಂದಕ ಸೃಷ್ಟಿಯಾಗಿತ್ತು. ಸೆಪ್ಟೆಂಬರ್ ೫ರಂದು ರಸ್ತೆ ಕೊಚ್ಚಿ ಹೋಗಿದ್ದರೂ ಇನ್ನೂ ಅದನ್ನು ದುರಸ್ತಿ ಮಾಡಿಸದೆ ಇರುವ ಕಾರಣ ಈ ಸಾವು ಸಂಭವಿಸಿದೆ ಎಂದು ಜನಾಕ್ರೋಶ ವ್ಯಕ್ತವಾಗಿದೆ.
ಗದಗ ಸಮೀಪದ ನಾಗಾವಿ ಗ್ರಾಮದ ಸೆ. 5ರ ರಾತ್ರಿ ರಾಜ್ಯದಲ್ಲೇ ಅತೀ ಹೆಚ್ಚು ಮಳೆ(179.5MM) ಬಿದ್ದ ಕಾರಣ ಗ್ರಾಮದ ರಸ್ತೆ ಕೊರೆದು 50 ಅಡಿ ಕಂದಕ ಬಿದ್ದಿದೆ. ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಸೆ. 11 ರಂದು ಕಂದಕ ಬಿದ್ದ ಸ್ಥಳ ವೀಕ್ಷಣೆ ಮಾಡಿದ್ದರು. ಕಂದಕ ಬಿದ್ದ ಭಯಾನಕ ದೃಶ್ಯಕಂಡು ವಿಚಲಿತರಾಗಿದ್ದರು. ಕಂದಕ ಬಿದ್ದ ಮಾರ್ಗದಲ್ಲಿ ಜನರು ಸಂಚರಿಸದಂತೆ ಎಚ್ಚರ ವಹಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆಗೂ ಸೂಚಿಸಿದ್ದರು. ಆದರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸ್ಥಳದಲ್ಲಿ ಬ್ಯಾರಿಕೇಡ್ ಹಾಕದೇ ನಿರ್ಲಕ್ಷ್ಯ ವಹಿಸಿವೆ. ಕಂದಕ ಬಿದ್ದ ಅರಿವಿಲ್ಲದ ಬೈಕ ಸವಾರರು ಬಿದ್ದು ಸಾವನ್ನಪ್ಪಿದ್ದಾರೆ.
ಇಬ್ಬರು ಯುವಕರು ದುರ್ಮರಣ
ಲಕ್ಕುಂಡಿ ಗ್ರಾಮದ ಮಂಜುನಾಥ ಮಾದರ (19), ಬಸವರಾಜ್ ಜವಳಬೆಂಚಿ (17) ಎಂಬುವರು ಮಂಗಳವಾರ ರಾತ್ರಿ ಲಕ್ಕುಂಡಿ ಗ್ರಾಮದಿಂದ ನಾಗಾವಿ ಮಾರ್ಗವಾಗಿ ಎಲೆಸಿರುಂದ ಗ್ರಾಮಕ್ಕೆ ಸಂಬಂಧಿಕರ ಮನೆಗೆ ಹೊರಟಿದ್ದಾರೆ. ರಾತ್ರಿ ಹೊತ್ತು ಕಂದಕ ಕಂಡಿಲ್ಲ. ಹೀಗಾಗಿ ಈ ದುರ್ಘಟನೆ ಜರುಗಿದೆ. ಇವರ ಮೃತ ದೇಹ ಸಿಕ್ಕ ಸ್ಥಳದಲ್ಲಿ ಕೇಕ್ ತುಣುಕುಗಳು ಸಿಕ್ಕಿದ್ದರಿಂದ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ತೆರಳುತ್ತಿರಬಹುದು ಎಂದು ಅಂದಾಜಿಸಲಾಗಿದೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹೊಣೆ
ನಾಗಾವಿ ಗ್ರಾಮದಿಂದ ಬೆಳದಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ 50 ಅಡಿ ಆಳಕ್ಕೆ ಕೊರೆದು ಕಂದಕ ಸೃಷ್ಟಿ ಆಗಿದ್ದ ವಿಷಯ ಜಿಲ್ಲಾಡಳಿತಕ್ಕೆ ತಿಳಿದಿದೆ. ಸ್ಥಳ ವೀಕ್ಷಣೆಯೂ ಮಾಡಲಾಗಿದೆ. ಆದರೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ.
ಬ್ಯಾರಿಕೇಡ್, ಸುರಕ್ಷತಾ ಫಲಕ ಅಳವಡಿಸದಿರುವುದೇ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳದಲ್ಲಿ ಪೊಲೀಸರ ನಿಯೋಜನೆ ಮಾಡದೇ ಇಲಾಖೆ ನಿರ್ಲಕ್ಷಿಸಿದೆ.. ಹೀಗಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆಯೇ ಈ ಸಾವಿಗೆ ನೇರಹೊಣೆ ಎಂದು ಗ್ರಾಮಸ್ಥರ ಆರೋಪ.
ಜಿಲ್ಲಾ ಆಸ್ಪತ್ರೆಗೆ ಶವ ರವಾನೆ
ಗ್ರಾಮಸ್ಥರ ಆರೋಪ ನಡುವೆಯೂ ಮನವೊಲಿಸಿದ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದ ಸಹಾಯದಿಂದ ಶವಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದರು. ಸ್ಥಳದಲ್ಲಿ ಬ್ಯಾರಿಕೇಡ್ ಹಾಕುವ ಭರವಸೆಯನ್ನು ನೀಡಿದ್ದಾರೆ.