Site icon Vistara News

Road accident: ಹಿಟ್‌ ಆ್ಯಂಡ್‌ ರನ್‌ಗೆ ಇಬ್ಬರು ರೈತರು ಬಲಿ, ಟಿಪ್ಪರ್‌ ಬಡಿದು ಇಬ್ಬರು ಯುವಕರು ಸಾವು

Hagaribommahallli accident

#image_title

ವಿಜಯಪುರ/ ಬೆಂಗಳೂರು: ವಿಜಯಪುರದ ಹಗರಿಬೊಮ್ಮನಹಳ್ಳಿ ಮತ್ತು ಬೆಂಗಳೂರು ನಗರದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ (Road accident) ಇಬ್ಬರು ರೈತರು ಮತ್ತು ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.

ಹಿಟ್‌ ಆ್ಯಂಡ್‌ ರನ್‌ಗೆ ಬಲಿಯಾದ ರೈತರು

ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿ ತಾಂಡಾದಿಂದ ಬೆಣ್ಣಿಕಲ್ಲು ರಸ್ತೆ ಮಾರ್ಗ ಮಧ್ಯೆ ಟಿವಿಎಸ್‌ ಎಕ್ಸೆಲ್‌ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು (Hit and run) ಇಬ್ಬರು ರೈತರು (Two Farmers) ಪ್ರಾಣ ಕಳೆದುಕೊಂಡಿದ್ದಾರೆ.

ಕೋಗಳಿ ತಾಂಡಾ ನಿವಾಸಿಗಳು ಟೀಕ್ಯಾನಾಯ್ಕ( 51) ನೀಲ್ಯಾನಾಯ್ಕ (55) ಎಂಬ ರೈತರು ಬೆಳಗಿನ ಜಾವ ಟಿವಿಎಸ್ ಎಕ್ಸೆಲ್ ನಲ್ಲಿ ಹೊಲಕ್ಕೆ ಹೋಗುವಾಗ ಅಪಘಾತ ಸಂಭವಿಸಿದೆ. ಅವರು ಹೋಗುತ್ತಿದ್ದಾಗ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅವರಿಬ್ಬರು ಹೊಲದಲ್ಲಿ ನೀರು ಹಾಯಿಸಲು ಹೋದಾಗ ದುರಂತ ನಡೆದಿದೆ.

ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮೈಲಾಪುರ, ಹಗರಿಬೊಮ್ಮನಹಳ್ಳಿ ಸಿಪಿಐ ಟಿ.ಮಂಜಣ್ಣ, ಪಿಎಸ್ಐ ಸರಳ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರೈತರ ಸಾವಿನ ಸುದ್ದಿ ಕೇಳಿ ಸ್ವತಃ ವಿಜಯನಗರ ಎಸ್‌ಪಿ ಶ್ರೀಹರಿ ಬಾಬು ಕೂಡಾ ಧಾವಿಸಿದರು.

ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿಪ್ಪರ್‌ ಚಾಲಕನ ಅಜಾಗರೂಕತೆಗೆ ಇಬ್ಬರು ಯುವಕರ ಸಾವು

ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ನಡೆದ ಅಪಘಾತದ ದೃಶ್ಯ

ಬೆಂಗಳೂರಿನಲ್ಲಿ ನಡೆದ ಒಂದು ಅಪಘಾತ ಇಬ್ಬರು ಯುವಕರನ್ನು ಬಲಿ ಪಡೆದಿದೆ. ಟಿಪ್ಪರ್ ಚಾಲಕನ ಅಜಾಗರೂಕ ಚಾಲನೆಯಿಂದ ಇಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಪುಲಿಕೇಶಿನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯೂಸುಫ್ (19), ಫರಾಜ್ (19) ಮೃತ ದುರ್ಧೈವಿಗಳು.

ಯೂಸುಫ್ (19), ಫರಾಜ್ (19) ಅವರು ಖಾಸಗಿ ಹೋಟೆಲ್‌ ಒಂದರಲ್ಲಿ ಕಾರ್ಮಿಕರಾಗಿರುವ ಹೊರ ರಾಜ್ಯದ ಯುವಕರು. ಅವರು ರಾತ್ರಿ 2 ಗಂಟೆಯ ಹೊತ್ತಿಗೆ ಕೆಲಸ ಮುಗಿಸಿ ತಮ್ಮ ವಾಸದ ಮನೆಯತ್ತ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಸಂಚಾರಿ ನಿಯಮ ಉಲ್ಲಂಘಿಸಿ ಒನ್ ವೇಯಲ್ಲಿ ಬಂದ ಟಿಪ್ಪರ್ ಚಾಲಕ ನೇರವಾಗಿ ಬೈಕ್‌ ಮೇಲೆ ಬರುತ್ತಿದ್ದ ಯುವಕರ ಮೇಲೆ ನುಗ್ಗಿಸಿದ್ದಾನೆ. ಘಟನೆಯಲ್ಲಿ ಯುವಕರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪುಲಿಕೇಶಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕ ಸುನಿಲ್‌ ಎಂಬಾತನನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : Road Accident: ಬೆಳಗಾವಿಯಲ್ಲಿ ಭೀಕರ ಅಪಘಾತಕ್ಕೆ ಒಬ್ಬ ಬಲಿ; ಹತ್ತಕ್ಕೂ ಹೆಚ್ಚು ಜನ ಗಂಭೀರ

ರಾಜ್ಯದ ಹಲವು ಭಾಗಗಳಲ್ಲಿ ಇತ್ತೀಚೆಗೆ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ. ಇದರ ನಡುವೆ ಮೈಸೂರು -ಬೆಂಗಳೂರು ದಶಪಥ ಹೆದ್ದಾರಿ ಅಪಘಾತಗಳ ತಾಣವಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಜನರು ಅಜಾಗರೂಕವಾಗಿ ಚಾಲನೆ ಮಾಡುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದ್ದರೆ, ಕೆಲವೊಮ್ಮೆ ರಸ್ತೆ ಅವ್ಯವಸ್ಥೆಯೂ ಪ್ರಾಣ ಕಸಿಯುತ್ತಿದೆ.

Exit mobile version