ಚಿಕ್ಕಬಳ್ಳಾಪುರ: ಜಮೀನಿಗೆ ಹಾಕಿದ್ದ ವಿದ್ಯುತ್ ಬೇಲಿ (Electric Fence) ಸ್ಪರ್ಷಿಸಿ ಇಬ್ಬರು ರೈತರು ದಾರುಣವಾಗಿ ಪ್ರಾಣ (Two Farmers dead) ಕಳೆದುಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ (Chikkaballapura News) ಗೌರಿಬಿದನೂರು ತಾಲ್ಲೂಕಿನ ಕುರುಡಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟವರನ್ನು ಕುರುಡಿ ಗ್ರಾಮದ ತಿಪ್ಪೇಸ್ವಾಮಿ (26) ಹಾಗೂ ಅಂಬರೀಶ್ (28) ಎಂದು ಗುರುತಿಸಲಾಗಿದೆ.
ವೆಂಕಟೇಶಪ್ಪ ಎನ್ನುವವರಿಗೆ ಸೇರಿದ ಜಮೀನು ಬಳಿ ಘಟನೆ ನಡೆದಿದೆ. ವೆಂಕಟೇಶಪ್ಪ ತನ್ನ ಜಮೀನಿಗೆ ಕಾಡು ಪ್ರಾಣಿಗಳ ಕಾಟವನ್ನು ತಡೆಯಲು ಅನಧಿಕೃತವಾಗಿ ವಿದ್ಯುತ್ ಬೇಲಿ (Illegal Electric Fence) ಹಾಕಿದ್ದರು. ತಿಪ್ಪೇಸ್ವಾಮಿ ಮತ್ತು ಅಂಬರೀಷ್ ಅವರು ತಮ್ಮ ಪಕ್ಕದ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ಬೇಲಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಪ್ರಾಣ ಕಳೆದುಕೊಂಡಿದ್ದಾರೆ.
ಸಾಮಾನ್ಯವಾಗಿ ವಿದ್ಯುತ್ ಬೇಲಿ ಹಾಕುವುದಿದ್ದರೆ ಅಲ್ಪ ಪ್ರಮಾಣದ ವಿದ್ಯುತ್ ಹಾಯಿಸಲಾಗುತ್ತದೆ. ಸಾಮಾನ್ಯವಾಗಿ ಸೋಲಾರ್ ಬೇಲಿ ಬಳಸಲಾಗುತ್ತದೆ. ಪ್ರಾಣಿಗಳು ಬಂದರೆ ಅವುಗಳಿಗೆ ಸಣ್ಣದಾಗಿ ಶಾಕ್ ಹೊಡೆಯುವಂತೆ ವೋಲ್ಟೇಜ್ ಸೆಟ್ ಮಾಡಲಾಗುತ್ತದೆ. ಅಂದರೆ ಇದಕ್ಕೆ ಪ್ರತ್ಯೇಕ ಸಲಕರಣೆ ಬೇಕಾಗುತ್ತದೆ. ಆದರೆ, ವೆಂಕಟೇಶಪ್ಪ ಮಾತ್ರ ಬೋರ್ ವೆಲ್ ವಯರನ್ನೇ ನೇರವಾಗಿ ತಂತಿ ಬೇಲಿಗೆ ಕನೆಕ್ಟ್ ಮಾಡಿ ವಿದ್ಯುತ್ ಹರಿಸಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ವಿಭಾಗದ ಡಿವೈಎಸ್ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Mandya Accident: ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದ ಕಾರು; ನಾಲ್ವರು ಸ್ಥಳದಲ್ಲೇ ದುರ್ಮರಣ
ಅಕ್ರಮ ವಿದ್ಯುತ್ ಬೇಲಿ ತೆರವಿಗೆ ಕಠಿಣ ಕ್ರಮ ಅಗತ್ಯ
ರಾಜ್ಯ ಹಲವು ಭಾಗಗಳಲ್ಲಿ ಅದರಲ್ಲೂ ಮುಖ್ಯವಾಗಿ ಪಶ್ಚಿಮ ಘಟ್ಟದ ಆನೆಗಳ ದಾಳಿ ಹೆಚ್ಚಾಗಿರುವ ಪ್ರದೇಶದಲ್ಲಿ ಸೋಲಾರ್ ವಿದ್ಯುತ್ ಬೇಲಿ ಬದಲು ಹೈವೋಲ್ಟೇಜ್ ವಿದ್ಯುತ್ ಹಾಯಿಸುವುದು ನಡೆಯುತ್ತಿದೆ. ಸಣ್ಣ ಪ್ರಮಾಣದ ಶಾಕ್‌ಗೆ ಪ್ರಾಣಿಗಳು ಬಗ್ಗುವುದಿಲ್ಲ ಎಂಬ ಕಾರಣಕ್ಕಾಗಿ ರೈತರು ಇದಕ್ಕೆ ಮೊರೆ ಹೋಗುತ್ತಿದ್ದಾರೆ. ಆದರೆ, ಇದು ಪ್ರಾಣಾಂತಕವಾಗುತ್ತಿದೆ. ಅವುಗಳ ಸಮೀಕ್ಷೆ ನಡೆಸಿ ತೆಗೆಸಬೇಕಾದ ಮತ್ತು ಹಾಗೆ ನೇರ ವಿದ್ಯುತ್ ಸಂಪರ್ಕ ಕೊಟ್ಟವಿಗೆ ದಂಡ ವಿಧಿಸಬೇಕಾದ ಅನಿವಾರ್ಯತೆ ಇದೆ.
ಗುಂಡ್ಲುಪೇಟೆ ಸಮಿಪದ ಕುರುಬರಹುಂಡಿಯಲ್ಲಿ ಇತ್ತೀಚೆಗೆ ಅಕ್ರಮ ವಿದ್ಯುತ್ ಬೇಲಿ ಸ್ಪರ್ಶಿಸಿ ಸಲಗ ಸಾವಿಗೀಡಾಗಿದ ಸಂದರ್ಭದಲ್ಲಿ ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ರಾಜ್ಯದಾದ್ಯಂತ ಅಕ್ರಮ ವಿದ್ಯುತ್ ಬೇಲಿಗಳ ವಿರುದ್ಧ ಕ್ರಮ ಜರುಗಿಸಲು ಸೂಚನೆ ನೀಡಿದ್ದರು.
ಗುಂಡ್ಲುಪೇಟೆ ಸಮಿಪದ ಕುರುಬರಹುಂಡಿಯಲ್ಲಿ ಅಕ್ರಮ ವಿದ್ಯುತ್ ಬೇಲಿ ಸ್ಪರ್ಶಿಸಿ ಸಲಗ ಸಾವಿಗೀಡಾಗಿರುವುದು ನೋವಿನ ಸಂಗತಿ.
— Eshwar Khandre (@eshwar_khandre) July 18, 2023
ರಾಜ್ಯದಾದ್ಯಂತ ಅಕ್ರಮ ವಿದ್ಯುತ್ ಬೇಲಿಗಳ ವಿರುದ್ಧ ಕ್ರಮ ಜರುಗಿಸಲು ಸೂಚನೆ ನೀಡಿದ್ದೇನೆ. ಪ್ರಸಕ್ತ ವರ್ಷದಲ್ಲಿ ಈವರೆಗೆ 9 ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿರುವುದು ಅತ್ಯಂತ ವಿಷಾದಕರ ಸಂಗತಿ. ಇಂತಹ ಅಕ್ರಮ… pic.twitter.com/P5cXH872rB
ಆಗ ಟ್ವೀಟ್ ಮಾಡಿದ್ದ ಅವರು, ʻʻಪ್ರಸಕ್ತ ವರ್ಷದಲ್ಲಿ ಈವರೆಗೆ 9 ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿರುವುದು ಅತ್ಯಂತ ವಿಷಾದಕರ ಸಂಗತಿ. ಇಂತಹ ಅಕ್ರಮ ವಿದ್ಯುತ್ ಬೇಲಿಗಳನ್ನು ತಿಳಿಯದೆ ಮುಟ್ಟಿ ಹಲವರು ಸಾವಿಗೀಡಾಗಿರುವ ಘಟನೆಗಳೂ ಈ ಹಿಂದೆ ನಡೆದಿವೆ. ಈ ಭೂಮಿಯಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಬೆಳೆ ರಕ್ಷಣೆಗೆ ರೈತರು ವೈಜ್ಞಾನಿಕವಾಗಿ ಸೌರ ವಿದ್ಯುತ್ ಬೇಲಿ ಅಳವಡಿಸಿಕೊಳ್ಳಬೇಕೆ ಹೊರತು ಈ ರೀತಿ ವನ್ಯಮೃಗಗಳ ಅಥವಾ ಯಾವುದೇ ವ್ಯಕ್ತಿಯ ಸಾವಿಗೆ ಕಾರಣವಾಗುವುದು ಸರಿಯಲ್ಲ. ಪ್ರತಿಯೊಂದು ಜೀವವೂ ಅಮೂಲ್ಯ ರೈತರೂ ಈ ವಿಷಯದಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಸ್ಪಂದಿಸಬೇಕು. ಅರಣ್ಯಾಧಿಕಾರಿಗಳು ತಮ್ಮ ತಮ್ಮ ವಲಯದಲ್ಲಿರುವ ಅಕ್ರಮ ವಿದ್ಯುತ್ ತಂತಿಬೇಲಿಗಳ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆʼʼ ಎಂದು ಹೇಳಿದ್ದರು.