Site icon Vistara News

ಪತಿಗೆ ಹೃದಯಾಘಾತವೆಂದು ಆಂಬ್ಯುಲೆನ್ಸ್‌ನಲ್ಲಿ ಹೋಗುತ್ತಿದ್ದಾಗ ಸರಣಿ ಅಪಘಾತ; ಪತ್ನಿ ಸೇರಿ ಇಬ್ಬರ ಸಾವು

davanagere accident

ದಾವಣಗೆರೆ: ಪತಿಗೆ ಹೃದಯಘಾತವಾಗಿದೆ ಎಂಬ ಆತಂಕದಲ್ಲಿ ಆಂಬ್ಯುಲೆನ್ಸ್‌ ಮೂಲಕ ದಾವಂತದಲ್ಲಿ ಹೋಗುತ್ತಿದ್ದಾಗ ದುರದೃಷ್ಟವಶಾತ್‌ ಸರಣಿ ಅಪಘಾತವಾಗಿದ್ದು, ಪತ್ನಿ ಮೃತಪಟ್ಟ ಘಟನೆ ದಾವಣಗೆರೆಯ ಹೊರ ವಲಯದ ಕಲ್ಪನಹಳ್ಳಿ ಬಳಿ ನಡೆದಿದೆ. ಇದೇ ವೇಳೆ ಬೈಕ್‌ ಸವಾರರೊಬ್ಬರೂ ಮೃತಪಟ್ಟಿದ್ದಾರೆ.

ಆಂಬ್ಯುಲೆನ್ಸ್, ಟ್ರ್ಯಾಕ್ಟರ್, ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಮೊರಾರ್ಜಿ ದೇಸಾಯಿ ಶಾಲೆಯ ಶಿಕ್ಷಕಿ ಜ್ಯೋತಿ (43), ಬೈಕ್ ಸವಾರ ಮಂಜುನಾಥ್ (68) ಮೃತಪಟ್ಟಿದ್ದಾರೆ. ಪತಿಗೆ ಹೃದಯಾಘಾತವಾಗಿದ್ದರಿಂದ ಆಂಬ್ಯುಲೆನ್ಸ್ ಮೂಲಕ ಪತ್ನಿ ಜ್ಯೋತಿ ಆಸ್ಪತ್ರೆಗೆ ಕರೆದೊಯ್ದುತ್ತಿದ್ದರು. ಆಂಬ್ಯುಲೆನ್ಸ್ ಚಾಲಕ ಟ್ರ್ಯಾಕ್ಟರ್ ಓವರ್‌ಟೇಕ್‌ ಮಾಡುವಾಗ ಟ್ರಾಲಿಗೆ ಆಂಬ್ಯುಲೆನ್ಸ್ ತಗುಲಿದ್ದರಿಂದ ಅಪಘಾತ ಸಂಭವಿಸಿದೆ.

ಈ ವೇಳೆ ಆಂಬ್ಯುಲೆನ್ಸ್‌ ನಜ್ಜುಗುಜ್ಜಾಗಿದ್ದು, ಒಳಗಿದ್ದ ಜ್ಯೋತಿ ತಲೆಗೆ ಬಲವಾದ ಪೆಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆ ಆಂಬ್ಯುಲೆನ್ಸ್‌ ನಿಯಂತ್ರಣ ತಪ್ಪಿದ್ದರಿಂದ ಮುಂದೆ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟಿದ್ದಾರೆ.

ಆಂಬ್ಯುಲೆನ್ಸ್ ಚಾಲಕನಿಗೆ ಸಹ ಗಂಭೀರ ಗಾಯಗಳಾಗಿದೆ. ಹೀಗಾಗಿ ಹೃದಯಾಘಾತವಾಗಿದ್ದ ವ್ಯಕ್ತಿ ಹಾಗೂ ಗಾಯಗಂಡಿದ್ದ ಆಂಬ್ಯುಲೆನ್ಸ್‌ ಚಾಲಕನನ್ನು ಬೇರೊಂದು ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಮುಂದುವರಿದಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Death News | ಮೀನು ಹಿಡಿಯಲು ಹೋದವನು ನೀರು ಪಾಲು; ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕ ಸಾವು

Exit mobile version