Site icon Vistara News

Rain News: ಅಥಣಿಯಲ್ಲಿ ಸಿಡಿಲು ಬಡಿದು ಇಬ್ಬರ ಸಾವು; ರಾಮನಗರದಲ್ಲಿ 4 ಮೇಕೆ ಬಲಿ, ಮೂವರಿಗೆ ಗಾಯ

lightning strike to coconut tree

#image_title

ಬೆಳಗಾವಿ/ರಾಮನಗರ: ರಾಜ್ಯದ ವಿವಿಧೆಡೆ ಮಂಗಳವಾರ ಸಂಜೆ ಸುರಿದ ಭಾರಿ ಮಳೆ (Rain News) ಸಾಕಷ್ಟು ಅನಾಹುತ ಸೃಷ್ಟಿಸಿದೆ. ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದರೆ, ರಾಮನಗರದಲ್ಲಿ ಸಿಡಿಲಿಗೆ 4 ಮೇಕೆಗಳು ಬಲಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ.

ಅಥಣಿಯಲ್ಲಿ ಸಿಡಿಲು ಬಡಿದು ಮಹಿಳೆ, ಯುವಕ ಸಾವು

ಬೆಳಗಾವಿ ಚಿಕ್ಕೋಡಿ ಉಪ ವಿಭಾಗದ ವಿವಿಧೆಡೆ ಭಾರಿ ಮಳೆಯಾಗಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಸಿಡಿಲಿನಿಂದ ಅಥಣಿ ತಾಲೂಕಿನ ದೇಸಾಯರಹಟ್ಟಿಯಲ್ಲಿ ಮಹಿಳೆ ಹಾಗೂ ಕೋಹಳ್ಳಿ (ಕೆಸ್ಕರ ದಡ್ಡಿ) ಗ್ರಾಮದಲ್ಲಿ ಯುವಕ ಕೊನೆಯುಸಿರೆಳೆದಿದ್ದಾರೆ.

ದೇಸಾಯರಹಟ್ಟಿಯ ವಿಠಾಬಾಯಿ ಕುಂಬಾರ (55) ಮತ್ತು ಕೋಹಳ್ಳಿಯ (ಕೆಸ್ಕರ ದಡ್ಡಿ) ಅಮೂಲ್ ಜಯಸಿಂಗ ಕಾನಡೆ (24) ಮೃತರು. ಜಾನುವಾರು ಮೇಯಿಸಲು ಹೋಗಿದ್ದಾಗ ಸಿಡಿಲು ಬಡಿದಿದ್ದರಿಂದ ಮಹಿಳೆ ಹಾಗೂ ಯುವಕ ಮೃತ ಪಟ್ಟಿದ್ದಾರೆ.

ಇನ್ನು ಜಿಲ್ಲೆಯ ವಿವಿಧೆಡೆ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಅಥಣಿ ತಾಲೂಕಿನ ಬಿರಡಿ ಗ್ರಾಮದಲ್ಲಿ ಕೆಲ ಮನೆಗಳ ಚಾವಣಿ ಶೀಟ್‌ಗಳು ಹಾರಿ ಹೋಗಿದ್ದು, ಐದು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಹಾಗೆಯೇ ಉಗಾರ ಬುರ್ದುಕ ಗ್ರಾಮದಲ್ಲಿ ಸರ್ಕಾರಿ ಶಾಲೆ ಶೆಡ್‌ನ ಶಿಟ್‌ಗಳು ಹಾರಿ ಹೋಗಿವೆ.

ಪೊಗತ್ಯಾನಟ್ಟಿ ಗ್ರಾಮದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆ ಗಿಡಗಳು ನೆಲಕಚ್ಚಿವೆ. ಬಿರಡಿ ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಹೊತ್ತಿ ಉರಿದ ಘಟನೆ ನಡೆದಿದೆ.

ಇದನ್ನೂ ಓದಿ | Rain News: ಮಳೆ ಅಬ್ಬರ, ರಸ್ತೆ ಕಾಣದೆ ಬಿದ್ದ ಬೈಕ್‌ ಸವಾರ, ಗಾಳಿಗೆ ಹಾರಿ ಹೋದ ಮದುವೆ ಶಾಮಿಯಾನ

ರಾಮನಗರದಲ್ಲಿ ಸಿಡಿಲು ಬಡಿದು 4 ಮೇಕೆ ಸಾವು, ಮೂವರಿಗೆ ಗಾಯ

ರಾಮನಗರ ತಾಲೂಕಿನ ಅಣ್ಣಹಳ್ಳಿ ಗ್ರಾಮದಲ್ಲಿ ಮಳೆಗೆ ಮನೆಯೊಂದರ ಚಾವಣಿ ಸಿಮೆಂಟ್‌ ಶೀಟ್‌ಗಳು ಹಾನಿಯಾಗಿವೆ.

ರಾಮನಗರ: ರೇಷ್ಮೆನಾಡು ರಾಮನಗರದಲ್ಲಿ ವರುಣ ಅಬ್ಬರಿಸಿದ್ದು, ಸಿಡಿಲು ಬಡಿದು 4 ಮೇಕೆ ಮೃತಪಟ್ಟು, ಮೂವರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಅಣ್ಣಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಂಜೆ ಕುರಿ ಮೇಯಿಸಿಕೊಂಡು ವಾಪಸ್‌ ಮನೆಗೆ ಬರುವಾಗ ಜೋರು ಮಳೆ ಸುರಿದಿದೆ. ಈ ವೇಳೆ ಸಿಡಿಲು ಬಡಿದು ನಾಲ್ಕು ಮೇಕೆ ಸ್ಥಳದಲ್ಲೇ ಸಾವಿಗೀಡಾಗಿದ್ದು, ಕುರಿಗಾಹಿಗಳಾದ ಲಿಂಗಯ್ಯ, ನರಸಿಂಹಯ್ಯ, ನಾಗೇಂದ್ರಗೆ ಗಾಯಗಳಾಗಿವೆ. ಇವರನ್ನು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಅಣ್ಣಹಳ್ಳಿ ಗ್ರಾಮದಲ್ಲಿ ಮಳೆಗೆ ಮನೆಯೊಂದರ ಚಾವಣಿ ಸಿಮೆಂಟ್‌ ಶೀಟ್‌ಗಳು ಹಾನಿಯಾಗಿವೆ.

ಇದನ್ನೂ ಓದಿ | Weather Report: ಮುಂದಿನ 3 ದಿನ ಬಿರುಗಾಳಿ ಸಹಿತ ಭಾರಿ ಮಳೆ; ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ

ಭಾರಿ ಗಾಳಿ ಮಳೆಗೆ ಹಾರಿ ಹೋದ ರಾಜ್ಯ ಹೆದ್ದಾರಿ ಟೋಲ್‌ ಗೇಟ್‌ ಚಾವಣಿ

ಧಾರವಾಡ ತಾಲೂಕಿನ ರಾಜ್ಯ ಹೆದ್ದಾರಿಯಲ್ಲಿ ಟೋಲ್‌ ಗೇಟ್‌ ಚಾವಣಿ ಹಾರಿ ಹೋಗಿರುವುದು.

ಧಾರವಾಡ: ಭಾರಿ ಗಾಳಿ ಸಹಿತ ಸುರಿದ ಮಳೆಯಿಂದಾಗಿ ರಾಜ್ಯ ಹೆದ್ದಾರಿಯಲ್ಲಿರುವ ಟೋಲ್‌ಗೇಟ್‌ ಚಾವಣಿ ಕಿತ್ತು ಹೋಗಿರುವ ಘಟನೆ ಧಾರವಾಡ ತಾಲೂಕಿನ ಮರೇವಾಡ ರಸ್ತೆಯಲ್ಲಿ ಸಂಭವಿಸಿದೆ. ಬಿರುಗಾಳಿ ತೀವ್ರತೆಗೆ ಕಬ್ಬಿಣದ ರಾಡ್ ಸಮೇತ ಶೀಟ್‌ಗಳು ಹಾರಿ ಪಕ್ಕದ ಹೊಲದಲ್ಲಿ ಬಿದ್ದಿವೆ. ಇನ್ನು ಗಾಳಿಯ ರಭಸಕ್ಕೆ ಟೋಲ್‌ಗೇಟ್ ಹತ್ತಿರವೇ ಇದ್ದ ಕೆಲ ವಿದ್ಯುತ್ ಕಂಬಗಳು ಸಹ ಮುರಿದು ಬಿದ್ದಿವೆ. ಚಾವಣಿ ಹಾರಿ ಹೋಗುವ ಸಂದರ್ಭದಲ್ಲಿ ಟೋಲ್ ಸಿಬ್ಬಂದಿ ಕೂಡ ಒಳಗಡೆಯೇ ಇದ್ದರು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

Exit mobile version