ರಾಮನಗರ: ಲಾರಿಗೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವುದು ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ದೇವರ ಹೊಸಹಳ್ಳಿ ಬಳಿ ನಡೆದಿದೆ.
ಚನ್ನಪಟ್ಟಣ ತಾಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿ ಭೀಕರ ಅಪಘಾತ ನಡೆದಿದೆ. ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರು ಕಡೆಗೆ 6 ಪ್ರಯಾಣಿಕರು ಬುಧವಾರ ಹೋಗುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಲಾರಿ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ 13 ವರ್ಷದ ಬಾಲಕಿ ಹಾಗೂ 20 ವರ್ಷದ ಯುವತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ರಾಮನಗರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಚನ್ನಪಟ್ಟಣ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.
ಇದನ್ನೂ ಓದಿ | Road accident : ಟೆಂಪೊ, ಬೈಕ್ ನಡುವೆ ಅಪಘಾತ; ಮೂವರು ಸ್ನೇಹಿತರ ದಾರುಣ ಮರಣ
ಹೆದ್ದಾರಿಯಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಹೆದ್ದಾರಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಇತ್ತೀಚೆಗೆ ಇದೇ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಡಿವೈಡರ್ ಡಿಕ್ಕಿಯಾಗಿದ್ದರಿಂದ ಮೂವರು ಯುವಕರು ಮೃತಪಟ್ಟಿದ್ದರು. ಚನ್ನಪಟ್ಟಣ ತಾಲೂಕಿನ ಕೋಲೂರು ಗೇಟ್ ಬಳಿಯ ಚಾಮುಂಡೇಶ್ವರಿ ಆಸ್ಪತ್ರೆ ಬಳಿ ಅಪಘಾತ ನಡೆದಿತ್ತು.
ಟೆಂಪೊ, ಬೈಕ್ ನಡುವೆ ಅಪಘಾತ; ಮೂವರು ಸ್ನೇಹಿತರ ದಾರುಣ ಮರಣ
ಬೆಳಗಾವಿ: ಜಿಲ್ಲೆಯ (Belagavi news) ಚಿಕ್ಕೋಡಿ ತಾಲೂಕಿನ ಬಸವನಾಳ ಗಡ್ಡೆ ಎಂಬಲ್ಲಿ ಮಂಗಳವಾರ ತಡರಾತ್ರಿ ಟೆಂಪೋ ಹಾಗೂ ಬೈಕ್ ಮಧ್ಯೆ ಅಪಘಾತ (Road accident) ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಸ್ನೇಹಿತರಾಗಿರುವ ಮೂವರು ಒಂದೇ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಮೂವರು ಸ್ನೇಹಿತರು ಚಿಕ್ಕೋಡಿಯಿಂದ ಕೆರೂರು ಗ್ರಾಮಕ್ಕೆ ಬೈಕ್ ಮೇಲೆ ತೆರಳುತ್ತಿದ್ದರು. ಈ ವೇಳೆ ಬೈಕ್ ಮತ್ತು ಟೆಂಪೊ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಕೆರೂರು ಗ್ರಾಮದ ನಿವಾಸಿಗಳಾದ ಪ್ರಶಾಂತ ಖೋತ(22) ಹಾಗೂ ಕಲ್ಲಪ್ಪ ಹಿರೇಕೋಡಿ(23) ಸ್ಥಳದಲ್ಲೇ ಮೃತಪಟ್ಟರು. ಬೆಳಗಾವಿ ನಿವಾಸಿ ಚಂದ್ರಕಾಂತ ಪಾಟೀಲ್ (22) ಎಂಬವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು.
ಇದನ್ನೂ ಓದಿ | Road accident : ನಿದ್ರೆಯಲ್ಲಿದ್ದ ಮೂವರ ಮೇಲೆ ಹರಿದ ಜೆಸಿಬಿ, ಜಮೀನಿನಲ್ಲೇ ಹೆಣವಾದ ಕಾರ್ಮಿಕರು
ಚಿಕ್ಕೋಡಿ- ವಿಜಯಪುರ ರಸ್ತೆಯ ಮೇಲೆ ನಡೆದ ದುರ್ಘಟನೆ ಇದಾಗಿದ್ದು, ಸ್ಥಳಕ್ಕೆ ಚಿಕ್ಕೋಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕೋಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.