ಬೆಂಗಳೂರು: ಎಗ್ ರೈಸ್ ಅಂಗಡಿ ಮೇಲೆ ವಾಟರ್ ಟ್ಯಾಂಕ್ ಬಿದ್ದಿದ್ದರಿಂದ ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ (Water Tank Collapse) ಶಿವಾಜಿನಗರ ಸರ್ಕಲ್ನ ಓಕ್ ಟೌನ್ ಬಿಲ್ಡಿಂಗ್ ಬಳಿ ಬುಧವಾರ ರಾತ್ರಿ ನಡೆದಿದೆ.
ದುರ್ಘಟನೆಯಲ್ಲಿ ಎಗ್ ರೈಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಹಾಗೂ ಎಗ್ ರೈಸ್ ತಿನ್ನಲು ಬಂದಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಈ ಪೈಕಿ ಒಬ್ಬರು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 15 ಲಕ್ಷ ರೂ. ಮೌಲ್ಯದ ವಸ್ತುಗಳು ಸಿಸಿಬಿ ವಶಕ್ಕೆ
ನಾಲ್ಕು ಅಂತಸ್ತಿನ ಕಟ್ಟಡದ ಮೇಲಿದ್ದ ವಾಟರ್ ಟ್ಯಾಂಕ್ ಗೋಡೆ ಸಮೇತ ಕುಸಿದು, ಕಟ್ಟಡದ ಪಕ್ಕದಲ್ಲಿದ್ದ ತಳ್ಳುವ ಗಾಡಿ ಮೇಲೆ ಬಿದ್ದಿದೆ. ನೀರು ತುಂಬಿದ್ದ ಸಿಂಟೆಕ್ಸ್ ಟ್ಯಾಂಕ್ ಬಿದ್ದ ರಭಸಕ್ಕೆ ತಳ್ಳುವ ಗಾಡಿಯಲ್ಲಿ ಎಗ್ ರೈಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಹಾಗೂ ತಿನ್ನಲು ಬಂದಿದ್ದ ಗ್ರಾಹಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಇದೇ ವೇಳೆ ಮತ್ತಿಬ್ಬರಿಗೆ ಗಾಯಗಳಾಗಿದ್ದು, ಈ ಪೈಕಿ ಒಬ್ಬರ ತಲೆಗೆ ಗಂಭೀರ ಗಾಯವಾಗಿದೆ.