ಆನೇಕಲ್: ನೀರಿನ ಸಂಪ್ ಸ್ವಚ್ಛತೆಗಿಳಿದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ ಮೃತಪಟ್ಟ ಘಟನೆ ತಾಲೂಕಿನ ಶಿಕಾರಿಪಾಳ್ಯದ ವಾಜಪೇಯಿ ಸರ್ಕಲ್ ಬಳಿಯ ಕಾರ್ಖಾನೆಯಲ್ಲಿ ನಡೆದಿದೆ. ಇದೇ ವೇಳೆ ಕಾರ್ಮಿಕರನ್ನು ರಕ್ಷಣೆ ಮಾಡಲು ಹೋಗಿ ಅಸ್ವಸ್ಥಗೊಂಡ ಕಂಪನಿ ಮಾಲೀಕ ಹಾಗೂ ಮತ್ತೊಬ್ಬ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಹಾರ ಮೂಲದ ಕಾರ್ಮಿಕರಾದ ಚಂದನ್ ರಜ್ ಬನ್ ಸಿಂಗ್(31), ಪಿಂಟು ರಜ್ ಬನ್ ಸಿಂಗ್(22) ಮೃತರು. ಶ್ರೀನಿವಾಸ್ ರೆಡ್ಡಿ ಎಂಬುವವರ ಸನ್ ಶೈನ್ ಹೋಲ್ಡಿಂಗ್ ಕಂಪನಿಯಲ್ಲಿ ದುರ್ಘಟನೆ ನಡೆದಿದೆ. ಸಂಜೆ ಸಂಪ್‌ನಲ್ಲಿ ಕ್ಲೀನ್ ಮಾಡಲು ಕಾರ್ಮಿಕರು ಇಳಿದಿದ್ದರು. ಆ್ಯಸಿಡ್ ಹಾಕಿ ಸ್ವಚ್ಛಗೊಳಿಸುತ್ತಿದ್ದಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ಇದನ್ನೂ ಓದಿ | Elephant Attack : ಇದೆಂಥಾ ದುರಂತ; ಕಾಡಾನೆ ದಾಳಿಗೆ ಆನೆ ನಿಗ್ರಹ ಪಡೆ ಸದಸ್ಯನೇ ಬಲಿ?
ಮೃತರು ಸಹೋದರರಾಗಿದ್ದು, ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಇವರನ್ನು ಉಳಿಸಲು ಮುಂದಾಗಿದ್ದ ಜಗದೀಶ್ ಹಾಗೂ ಮಾಲೀಕ ಶ್ರೀನಿವಾಸ್ ರೆಡ್ಡಿ ಅಸ್ವಸ್ಥಗೊಂಡಿದ್ದರು. ಅವರನ್ನು ಜಿಗಣಿ ವಿಜಯಶ್ರೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಗ್ರಾಪಂ ಸದಸ್ಯ ಲೋಕಾಯುಕ್ತ ಬಲೆಗೆ
ಹಾವೇರಿ: ಲಂಚ ಸ್ವೀಕಾರದ ವೇಳೆ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಳೆಯಿಂದ ಹಾನಿಯಾದ ಮನೆಯ ಜಿಪಿಎಸ್ ಮಾಡಿಸಲು ಗ್ರಾಪಂ ಸದಸ್ಯ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 20 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಾರಡಗಿ ಗ್ರಾಮ ಪಂಚಾಯತಿ ಸದಸ್ಯ ಜಾಫರ್ ಸಾಬ್ ಖಾದರಸಾಬ್ ಸಂಶಿ ಆರೋಪಿ. ದಾದಾಪೀರ್ ಎಂಬುವವರಿಂದ ಲಂಚ ಪಡೆಯುವಾಗ ಸದಸ್ಯ ಸಿಕ್ಕಿಬಿದ್ದಿದ್ದಾರೆ.
ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ