ಶಿವಮೊಗ್ಗ: ಶಿವಮೊಗ್ಗದಲ್ಲಿ ವಿದ್ಯುತ್ ಆಘಾತಕ್ಕೆ ಬಲಿಯಾಗಿ (Electrocution) ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆಗೆ ಅಡ್ಡಲಾಗಿದ್ದ ಮರವನ್ನು ಕತ್ತರಿಸುವಾಗ ಅವಘಡ ಸಂಭವಿಸಿದೆ.
ಗುಂಟೂರು ಮೂಲದ ಚಲ್ಲಾ ಸೋಮಶೇಖರ್ ಹಾಗೂ ಇನ್ನೊಬ್ಬ ವ್ಯಕ್ತಿ ಮೃತಪಟ್ಟ ದುರ್ದೈವಿಗಳು. ಇವರಿಬ್ಬರೂ ಕೂಲಿ ಕಾರ್ಮಿಕರಾಗಿದ್ದಾರೆ.
ಶಿವಮೊಗ್ಗ ನಗರದ ಊರುಗಡೂರು ಬಳಿ ರಸ್ತೆಗೆ ಅಡ್ಡಲಾಗಿದ್ದ ಮರಗಳನ್ನು ಕತ್ತರಿಸಿ ವಿಲೇವಾರಿ ಮಾಡುವಾಗ ವಿದ್ಯುತ್ ತಂತಿ ಇರುವುದು ತಿಳಿಯದೆ ಅವಘಡ ಸಂಭವಿಸಿದೆ. ಒಮ್ಮಿಂದೊಮ್ಮೆಗೇ ವಿದ್ಯುತ್ ಪ್ರವಹಿಸಿ ಇಬ್ಬರೂ ಎಸೆಯಲ್ಪಟ್ಟು ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆ ಬೆನ್ನಲ್ಲೇ ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತಾದರೂ ಮಾರ್ಗ ಮಧ್ಯದಲ್ಲೇ ಇಬ್ಬರೂ ಕೊನೆಯುಸಿರು ಎಳೆದಿದ್ದಾರೆ. ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇವರಿಬ್ಬರೂ ಶಿವಮೊಗ್ಗದಲ್ಲಿ ಮನೆ ಮಾಡಿಕೊಂಡಿದ್ದು, ರಸ್ತೆಗೆ ಅಡ್ಡಲಾಗಿರುವ ಮರಗಳನ್ನು ವಿಲೇವಾರಿ ಮಾಡುವ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: Road Accident : ನಾಳೆ ಇಬ್ಬರು ಹೆಣ್ಣುಮಕ್ಕಳ ಮದುವೆ ಇತ್ತು; ಇವತ್ತು ಅಪಘಾತದಲ್ಲಿ ಅಪ್ಪನೇ ಇಲ್ಲವಾದರು!
ಕಂಟೇನರ್ ಪಲ್ಟಿಯಾಗಿ ಚಾಲಕ, ಕ್ಲೀನರ್ ಸಾವು; ಐಸ್‌ಕ್ರೀಂ ಚೆಲ್ಲಾಪಿಲ್ಲಿ
ಆನೇಕಲ್: ಐಸ್ ಕ್ರೀಂ ಕಂಟೇನರ್ (Ice cream Container) ಒಂದು ಹೆದ್ದಾರಿಯಲ್ಲಿ ಪಲ್ಟಿ ಹೊಡೆದು (Road accident) ಅದರ ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಬಾಕ್ಸ್‌ಗಳಲ್ಲಿ ತುಂಬಿದ್ದ ಐಸ್ ಕ್ರೀಂ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ವೃತ್ತದಲ್ಲಿ (Attibele Circle) ಘಟನೆ ನಡೆದಿದ್ದು, ವೃತ್ತದಲ್ಲಿ ತಿರುವು ತೆಗೆದುಕೊಳ್ಳುವಾಗ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ.
ಬೊಮ್ಮಸಂದ್ರದಿಂದ ಹೊಸಕೋಟೆಗೆ ಹೋಗುತ್ತಿದ್ದ ಐಸ್ ಕ್ರೀಮ್ ಕಂಟೇನರ್ ಇದಾಗಿದ್ದು, ವೇಗವಾಗಿ ಸಾಗುತ್ತಿದ್ದು ನಿಯಂತ್ರಣ ತಪ್ಪಿ ಅದು ಪಲ್ಟಿಯಾಗಿದೆ. ಮೃತ ಚಾಲಕ ಮತ್ತು ಕ್ಲೀನರ್ ತಮಿಳುನಾಡು ಮೂಲದವರೆಂದು ತಿಳಿದುಬಂದಿದೆ.
ವಾಹನ ಪಲ್ಟಿಯಾಗಿ ಐಸ್ ಕ್ರೀಂ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಪರಿಣಾಮವಾಗಿ ರಸ್ತೆಯಲ್ಲಿ ಸಂಚಾರಕ್ಕೂ ತೊಂದರೆ ಉಂಟಾಯಿತು. ಕೂಡಲೇ ಕಾರ್ಯಾಚರಣೆ ನಡೆಸಿದ ಅತ್ತಿಬೆಲೆಯ ಪೊಲೀಸರು ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಕ್ರೇನ್‌ಗಳನ್ನು ಕರೆಸಿಕೊಂಡು ವಾಹನವನ್ನು ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು. ಐಸ್ ಕ್ರೀಂ ಬಾಕ್ಸ್‌ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.
ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಚಾಲಕ ಮತ್ತು ಕ್ಲೀನರ್ ಮೃತ ದೇಹಗಳನ್ನು ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಿಲ್ಕಿ ಮಿಸ್ಟ್ ಕಂಪನಿಗೆ ಸೇರಿದ ಕಂಟೇನರ್ ಇದಾಗಿದ್ದು, ತಮಿಳುನಾಡು ಮೂಲದ ಚಾಲಕ ಕಾರ್ತಿಕ್, ಕ್ಲೀನರ್ ಉದಯ್ ಸ್ಥಳದಲ್ಲಿಯೇ ಮೃತಪಟ್ಟ ದುರ್ದೈವಿಗಳು.
ಚಾಲಕನ ಅತಿವೇಗದಿಂದ ನಡೆದ ಅಪಘಾತ ಇದೆಂದು ಹೇಳಲಾಗಿದ್ದು, ವಾಹನ ಮೊದಲು ಹೆದ್ದಾರಿಯ ಬ್ಯಾರಿಕೇಡ್‌ಗೆ ಗುದ್ದಿ, ಬಳಿಕ ಕಂಟೇನರ್ ಪಲ್ಟಿಯಾಗಿದೆ. ಈ ವೇಳೆ ಬ್ಯಾರಿಕೇಡ್‌ನ ಕಂಬಿಗಳು ಚುಚ್ಚಿ ಡ್ರೈವರ್ ಹಾಗೂ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತ ನಡೆದ ಸ್ಥಳಕ್ಕೆ ಬೆಂ.ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದಾರೆ.