ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು(Praveen Nettaru) ಹತ್ಯೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಸುಳ್ಯದ ನಾವೂರು ನಿವಾಸಿ ಅಬೀದ್(22) ಮತ್ತು ಬೆಳ್ಳಾರೆ ನಿವಾಸಿ ನೌಫಲ್(28) ಬಂಧಿತರು. ಪ್ರವೀಣ್ ಹತ್ಯೆಯಲ್ಲಿ ಪ್ರಮುಖ ಆರೋಪಿಗಳಿಗೆ ನೆರವು ನೀಡಿದ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯಲ್ಲಿ ನೇರ ಭಾಗಿಯಾದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಕಳೆದ ವಾರ ಶಫೀಕ್, ಝಾಕೀರ್, ಸದ್ದಾಂ ಮತ್ತು ಹ್ಯಾರಿಸ್ ಬಂಧಿಸಲಾಗಿತ್ತು, ಇದೀಗ ಮತ್ತಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ನೈಟ್ ಕರ್ಪ್ಯೂ ನಿರ್ಬಂಧ ಹಿಂತೆಗೆತ ; ಆ.14ರವೆರೆಗೆ ನಿಷೇಧಾಜ್ಞೆ ವಿಸ್ತರಣೆ
ದ.ಕ ಜಿಲ್ಲೆಯಲ್ಲಿ ವಿಧಿಸಿದ್ದ ನೈಟ್ ಕರ್ಪ್ಯೂ ನಿರ್ಬಂಧವನ್ನು ಆ.8ರಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ಸೋಮವಾರದಿಂದ ರಾತ್ರಿ ವೇಳೆ ಅಂಗಡಿ ಮುಂಗಟ್ಟು, ಬಾರ್ ತೆರೆಯಲು ಹಾಗೂ ವಾಹನ ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಆದರೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವಿಸ್ತರಣೆ ಮಾಡಲಾಗಿದೆ. ಆಗಸ್ಟ್ 8 ರಿಂದ ಆಗಸ್ಟ್ 14ರ ಮಧ್ಯರಾತ್ರಿ ವರೆಗೆ 144 ಸೆಕ್ಷನ್ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Praveen Nettaru | ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಎನ್‌ಐಎಗೆ ವಹಿಸಿ ಕೇಂದ್ರ ಗೃಹ ಇಲಾಖೆ ಆದೇಶ