ಮೈಸೂರು: ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಮತ್ತಿಬ್ಬರು ಅಪ್ರಾಪ್ತ ವಯಸ್ಕರಿಂದ ಲೈಂಗಿಕ ಕಿರುಕುಳ ದೂರು ದಾಖಲಾಗಿದೆ. ಈ ಮೊದಲು ಇಬ್ಬರು ಬಾಲಕಿಯರು ದೂರು ದಾಖಲಿಸಿದ್ದು, ಶರಣರು ನ್ಯಾಯಾಂಗ ಬಂಧನದಲ್ಲಿದ್ದಾರೆ.
12 ಹಾಗೂ 14 ವರ್ಷದ ಇಬ್ಬರು ಬಾಲಕಿಯರು ಚಿತ್ರದುರ್ಗದ ಮುರುಘ ರಾಜೇಂದ್ರ ಬೃಹನ್ಮಠದ ಡಾ.ಶಿವರಾತ್ರಿ ಮುರುಘಾ ಶರಣರಿಂದ ಲೈಂಗಿಕ ಕಿರುಕುಳ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಪೋಷಕರ ಜತೆ ಮೈಸೂರಿನ ಒಡನಾಡಿ ಸಂಸ್ಥೆಗೆ ಆಗಮಿಸಿರುವ ವಿದ್ಯಾರ್ಥಿಗಳು, ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಿದ್ದಾರೆ. ಮಕ್ಕಳು ಸದ್ಯ ಒಡನಾಡಿ ಆಶ್ರಯದಲ್ಲಿದ್ದಾರೆ.
ಸದ್ಯ ಒಂದು ಮಗು ಹಾಗೂ ಆಕೆಯ ತಾಯಿಯ ಹೇಳಿಕೆಯನ್ನು ಸಿಡಬ್ಲ್ಯೂಸಿ ಹಾಗೂ ಪೊಲೀಸರು ಪಡೆದಿದ್ದಾರೆ. ನಾಲ್ಕು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ತಾಯಿ ಹೇಳಿಕೆ ನೀಡಿದ್ದಾರೆ. ʼಪತಿ ಇಲ್ಲದ ಕಾರಣ ನಾನು ಮಠದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದೆ. ನನ್ನ ಮಕ್ಕಳು ಮಠದ ವಸತಿ ಶಾಲೆಯಲ್ಲಿ ಓದುತ್ತಿದ್ದರು. ನನ್ನ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ. ಮುರುಘಾ ಶರಣರು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಪ್ರಭಾವ ಹೊಂದಿರುವ ಕಾರಣ ತಡವಾಗಿ ದೂರು ನೀಡುತ್ತಿದ್ದೇನೆʼ ಎಂದು ದೂರಿನಲ್ಲಿ ನೊಂದ ಅಪ್ರಾಪ್ತ ಮಕ್ಕಳ ತಾಯಿ ಅಳಲು ತೋಡಿಕೊಂಡಿದ್ದಾರೆ.
ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಒಟ್ಟು 7 ಮಂದಿ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಹೊಸದಾಗಿ ಮಠದ ಇಬ್ಬರು ಸಿಬ್ಬಂದಿಯ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ. ಸ್ವಾಮೀಜಿಯವರ ಸಹಾಯಕರಾದ ಮಹಾಲಿಂಗ, ಅಡುಗೆ ಸಹಾಯಕ ಕರಿಯಪ್ಪ ಮೇಲೂ ದೂರು ನೀಡಲಾಗಿದೆ.
ಮುರುಘಾ ಶರಣರು ಈಗಾಗಲೇ ಪೋಕ್ಸೋ ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೃದಯ ಸಮಸ್ಯೆ ಹೊಂದಿರುವ ಶ್ರೀಗಳಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಂಜಿಯೋಗ್ರಾಮ್ ನಡೆದಿದ್ದು, ಜಾಮೀನು ನಿರಾಕರಿಸಲಾಗಿದೆ.
ಇದನ್ನೂ ಓದಿ | ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಿಂದ ಚಿತ್ರದುರ್ಗಕ್ಕೆ ಮುರುಘಾಶ್ರೀ ಶಿಫ್ಟ್; ಜಾಮೀನು ನಿರಾಕರಣೆ