Site icon Vistara News

Moral policing: ಜತೆಗೆ ಚಾಟ್ಸ್‌ ತಿಂದ ಹಿಂದು ಯುವಕ, ಮುಸ್ಲಿಂ ಯುವತಿಗೆ ಹಲ್ಲೆ; ಇಬ್ಬರು ಸೆರೆ

two muslim youths arrested for moral policing in chikkaballapur

two muslim youths arrested for moral policing in chikkaballapur

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ (Chikkaballapura news) ಗೋಪಿಕಾ ಚಾಟ್ಸ್‌ಗೆ ಹಿಂದು ಹುಡುಗ ಮತ್ತು ಮುಸ್ಲಿಂ ಹುಡುಗಿ ಜತೆಯಾಗಿ ಬಂದಿದ್ದರು ಎಂಬ ಕಾರಣಕ್ಕೆ ನೈತಿಕ ಪೊಲೀಸ್‌ಗಿರಿ (Moral Policing) ನಡೆಸಿ ಅವರಿಬ್ಬರ ಮೇಲೆ ಹಲ್ಲೆ ನಡೆಸಿದವರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ನಕ್ಕಲಕುಂಟೆ ನಿವಾಸಿಗಳಾದ ವಾಯಿದ್ (20) ಹಾಗೂ ಸದ್ದಾಂ (21) ಬಂಧಿತ ಆರೋಪಿಗಳು. ಇವರ ಜತೆಗಿದ್ದ ಇನ್ನೊಬ್ಬ ಆರೋಪಿ ಇಮ್ರಾನ್ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಎರಡು ದಿನಗಳ ಹಿಂದೆ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಅಲ್ಲಿನ ಹೋಟೆಲ್‌ ಒಂದಕ್ಕೆ ಬಂದಿದ್ದರು. ಆಕೆ ಬುರ್ಕಾ ಮತ್ತು ಹಿಜಾಬ್‌ ಧರಿಸಿಯೇ ಅಲ್ಲಿಗೆ ಆಗಮಿಸಿದ್ದಳು. ಇದನ್ನು ಅಲ್ಲಿನ ಸ್ಥಳೀಯ ಮುಸ್ಲಿಂ ಯುವಕರು ನೋಡಿದ್ದಾರೆ. ಮುಸ್ಲಿಂ ಯುವತಿಯ ಜತೆ ಬಂದಿರುವ ಹುಡುಗ ಹಿಂದೂನಾ ಮುಸ್ಲಿಮನಾ ಎಂದು ಅಲ್ಲಿದ್ದವರಿಗೆ ಕುತೂಹಲ ಮೂಡಿದೆ. ಅವರಿಬ್ಬರೂ ಒಳಗೆ ಹೋಗುತ್ತಿದ್ದಂತೆಯೇ ಮುಸ್ಲಿಂ ಯುವಕರು ಅಲ್ಲೇ ಅವರ ಆಸುಪಾಸಿನಲ್ಲಿ ಠಳಾಯಿಸಿದ್ದಾರೆ. ಅವರಿಬ್ಬರೂ ಒಂದು ಟೇಬಲ್‌ಗೆ ಹೋಗಿ ಕುಳಿತಾಗ ಇಬ್ಬರು ಹುಡುಗರು ಬಂದು ಹುಡುಗಿಯ ಜತೆಗೆ ಇರುವವನು ಯಾವ ಧರ್ಮ ಎಂದು ದೃಢಪಡಿಸಿಕೊಂಡಿದ್ದ.

ಹುಡುಗ ಹಿಂದು ಎಂದು ತಿಳಿಯುತ್ತಿದ್ದಂತೆಯೇ ಆತ ಆಸುಪಾಸಿನಲ್ಲಿದ್ದ ಅವನ ಟೀಮ್‌ಗೆ ವಿಷಯ ಮುಟ್ಟಿಸಿದ್ದು, ತಕ್ಷಣವೆ ಕೆಲವು ಮಂದಿ ಅಲ್ಲಿ ಸೇರಿಸಿದ್ದರು. ಮುಸ್ಲಿಂ ಹುಡುಗರು ಯುವಕನನ್ನು ಪ್ರಶ್ನಿಸುವುದರ ಜತೆ ಹಲ್ಲೆಗೆ ಯತ್ನಿಸಿದ್ದಾರೆ. ಒಂದು ಹಂತದಲ್ಲಿ ಯುವತಿ ಅವನು ನನ್ನ ಪರಿಚಿತ, ಅವನ ಜತೆಗೆ ಹೋಟೆಲ್‌ಗೆ ಬಂದರೆ ತಪ್ಪೇನು ಎಂದು ಪ್ರಶ್ನಿಸಿ ಕೋಪ ತೋರಿಸುತ್ತಾಳೆ. ಯುವತಿ ಹಿಂದೂ ಯುವಕನ ಪರ ವಹಿಸಿ ಮಾತನಾಡಿದ್ದರಿಂದ ಯುವಕರು ಆಕ್ರೋಶಗೊಂಡು ಆಕೆಯನ್ನೂ ಅವಮಾನಿಸಲು ಯತ್ನಿಸಿದರು. ಕೊನೆಗೆ ಯುವತಿಯ ಬಾಯಲ್ಲಿ ಈ ರೀತಿ ಬೇರೆ ಧರ್ಮದವರ ಜತೆಗೆ ಹೋಟೆಲ್‌ಗೆ ಹೋಗಿದ್ದ ತಪ್ಪಾಯಿತು, ಇದನ್ನು ನಾನು ಹೃದಯಪೂರ್ವಕವಾಗಿ ಹೇಳುತ್ತಿದ್ದೇನೆ ಎಂದು ಹುಡುಗಿಯ ಬಾಯಲ್ಲಿ ಹೇಳಿಸುವಲ್ಲಿ ನೈತಿಕ ಪೊಲೀಸ್‌ಗಿರಿ ನಡೆಸಿದ ಯುವಕರು ಯಶಸ್ವಿಯಾದರು.

ನೈತಿಕ ಪೊಲೀಸ್‌ ಗಿರಿಗೆ ಒಳಗಾದ ಯುವಕ, ಯುವತಿ

ಇದಾದ ಬಳಿಕ ಯುವತಿಯ ಕಡೆಯವರು ಚಿಕ್ಕಬಳ್ಳಾಫುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಧೀಶರ ಗೃಹ ಕಚೇರಿಗೆ ಆರೋಪಿಗಳನ್ನು ಹಾಜರುಪಡಿಸಿದರು.

ನ್ಯಾ. ಬಾಲಪ್ಪ ಅಪ್ಪಣ್ಣ ಜರಗು ಅವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದರು. ಪೊಲೀಸರು IPC ಸೇಕ್ಷನ್ 354 A and D, 341, 323 , 153A , 504, 506 ಸೆಕ್ಷನ್ ಗಳಡಿ ಕೇಸು ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ನಡೆಸಲಿದ್ದಾರೆ.

ಇದನ್ನೂ ಓದಿ: ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ; ಹಿಂದು ಯುವತಿ ಜತೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಥಳಿತ

Exit mobile version